ಮತ್ತೆ ಉಪ ಚುನಾವಣೆ ಘೋಷಣೆ; ಯಾರು, ಏನು ಹೇಳಿದರು?
ಬೆಂಗಳೂರು, ಸೆಪ್ಟೆಂಬರ್ 28 : ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಸುಪ್ರೀಂಕೋರ್ಟ್ ತಡೆ ನೀಡಿದ ಮರುದಿನವೇ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಇದರಿಂದಾಗಿ ಮುಂದೂರಿಕೆಯಾಗಿದ್ದ ರಾಜಕೀಯ ಚಟುವಟಿಕೆ ಮತ್ತೊಮ್ಮೆ ಬಿರುಸು ಪಡೆದುಕೊಂಡಿವೆ.
17 ಅನರ್ಹ ಶಾಸಕರು ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಗುರುವಾರ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅಕ್ಟೋಬರ್ 21ರಂದು ನಡೆಯಬೇಕಿದ್ದ ಉಪ ಚುನಾವಣೆಗೆ ತಡೆ ನೀಡಿತ್ತು. ಆದರೆ, ಶುಕ್ರವಾರ ಚುನಾವಣಾ ಅಯೋಗ ಹೊಸ ವೇಳಾಪಟ್ಟಿ ಪ್ರಕಟಿಸಿದೆ.
ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಬಿರುಸುಗೊಂಡಿತ್ತು. ಸುಪ್ರೀಂಕೋರ್ಟ್ ತಡೆ ನೀಡಿದ ಬಳಿಕ ರಾಜಕೀಯ ಪಕ್ಷಗಳು ನಿರಾಳವಾಗಿದ್ದವು. ಈಗ ಪುನಃ ಚುನಾವಣೆ ಘೋಷಣೆಯಾಗಿದೆ.
15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಮತದಾನ ನಡೆಸಲಾಗುತ್ತದೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿದೆ. ಡಿಸೆಂಬರ್ 11ರೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಮತ ಎಣಿಕೆ ದಿನಾಂಕವನ್ನು ಘೋಷಣೆ ಮಾಡಿಲ್ಲ.

ಅನರ್ಹ ಶಾಸಕರು ಸ್ಪರ್ಧಿಸಲಿದ್ದಾರೆ
"ಚುನಾವಣೆ ದಿನಾಂಕ ನಿಗದಿ ಮಾಡಿರುವುದನ್ನು ಸ್ವಾಗತಿಸುತ್ತೇವೆ. 15 ಅನರ್ಹ ಶಾಸಕರು ಸ್ಪರ್ಧಿಸಲಿದ್ದು, ಅವರ ಗೆಲುವಿಗೆ ಸರ್ವ ಶಕ್ತಿಯನ್ನು ಬಳಸಿ ದುಡಿಯುತ್ತೇವೆ" ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿ ಕುಮಾರ್ ಹೇಳಿದರು.

ಚುನಾವಣೆ ಘೋಷಣೆ ಏಕೆ?
"ಚುನಾವಣಾ ಪ್ರಕ್ರಿಯೆ ಬಗ್ಗೆ ಆಯೋಗಕ್ಕೆ ಸ್ಟಷ್ಟತೆ ಇಲ್ಲ. ನೀತಿ ಸಂಹಿತೆ ಇಲ್ಲದೆ ನ್ಯಾಯಬದ್ಧ ಚುನಾವಣೆ ನಡೆಯುವುದು ಹೇಗೆ?. ಫಲಿತಾಂಶದ ಉಲ್ಲೇಖವೇ ಇಲ್ಲದ ಮೇಲೆ ಚುನಾವಣೆ ಏಕೆ?" ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಯಾವ-ಯಾವ ಕ್ಷೇತ್ರಗಳಿಗೆ ಚುನಾವಣೆ
ಚುನಾವಣಾ ಆಯೋಗ ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರ, ರಾಣೆಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆ. ಆರ್. ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆ. ಆರ್.ಪೇಟೆ ಮತ್ತು ಹುಣಸೂರು ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಮಾಡಿದೆ.

ನಾವು ತಯಾರಾಗಿದ್ದೇವೆ
"ಚುನಾವಣೆ ಎದುರಿಸಲು ನಾವು ತಯಾರಿದ್ದೇವೆ. ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ. ದಿನಾಂಕವನ್ನು 65 ದಿನಗಳ ಮುಂಚಿತವಾಗಿ ಚುನಾವಣೆ ನಿಗದಿ ಮಾಡಿರುವುದು ಇದೇ ಮೊದಲು" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications