SSLC Result 2024: ಪೋಷಕರೇ ಎಚ್ಚರ! ಎಸ್‌ಎಸ್‌ಎಲ್‌ಸಿ ಫಲಿತಾಂಶದ ಬಗ್ಗೆ ಮಕ್ಕಳಿಗೆ ಹೀಗೆ ಹೆದರಿಸಬೇಡಿ... ಯಾಕೆಂದರೆ...
ಎಸ್‌ಎಸ್‌ಎಲ್‌ಸಿ ಪರೀಕ್ಷೆ- 1 ರಿಸಲ್ಟ್ ತಿಳಿಯಲು ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ. ವಿದ್ಯಾರ್ಥಿಗಳಿಗಿಂತ ಅವರ ಪೋಷಕರು ಫಲಿತಾಂಶ ತಿಳಿಯಲು ಹೆಚ್ಚು ಉತ್ಸುಹಕರಾಗಿದ್ದಾರೆ. ತಮ್ಮ ಮಕ್ಕಳು ಚೆನ್ನಾಗಿ ಓದಿದ್ದಾರೆ, ಚೆನ್ನಾಗಿ ಪರೀಕ್ಷೆ ಬರೆದಿದ್ದಾರೆ, ಹೀಗಾಗಿ ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗುತ್ತಾರೆಂಬ ನಿರೀಕ್ಷೆಯಲ್ಲಿ ಪೋಷಕರಿದ್ದಾರೆ.
ಅಂದಹಾಗೆ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿಯು 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ- 1 ಸಂಭಾವ್ಯ ವೇಳಾಪಟ್ಟಿ ಪ್ರಕಟಿಸಿದ ವೇಳೆ ಇದರ ರಿಸಲ್ಟ್ ಅನ್ನು ಮೇ 8ರಂದು ಪ್ರಕಟಿಸಲಾಗುವುದು ಎಂದು ತಿಳಿಸಿತ್ತು. ಹೀಗಾಗಿ ಒಂದೆರೆಡು ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗುವುದರಿಂದ ವಿದ್ಯಾರ್ಥಿಗಳಿಗಿಂತ ಹೆಚ್ಚಾಗಿ ಪೋಷಕರು ಚಿಂತಿತರಾಗಿದ್ದಾರೆ.

ಒಂದು ವೇಳೆ ನೀವೇನಾದರು ಫಲಿತಾಂಶದ ಬಗ್ಗೆ ಟೆನ್ಷನ್ ಮಾಡಿಕೊಂಡಿದ್ದರೆ ಅಂತಹ ಪೋಷಕರು ಚಿಂತೆಯನ್ನು ಬಿಡಬೇಕು. ಚಿಂತೆಯಲ್ಲಿ ಮಕ್ಕಳ ಮೇಲೆ ಹೊರೆ ಹಾಕುವುದನ್ನು ಬಿಟ್ಟುಬಿಡಬೇಕು. ಯಾಕೆಂದರೆ ಟೆನ್ಷನ್ ಮಾಡಿಕೊಳ್ಳುವುದರಿಂದ ನಿಮ್ಮ ಹಾಗೂ ಮಕ್ಕಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಆರೋಗ್ಯದ ಮೇಲೆ ಅದು ಪರಿಣಾಮ ಬೀರಬಹುದು.
ಮಾತ್ರವಲ್ಲದೆ ಉತ್ತಮ ಫಲಿತಾಂಶದ ನಿರೀಕ್ಷೆ ಹುಸಿಯಾದರೆ ಪೋಷಕರಿಗೆ ಹೆದರಿ ಮಕ್ಕಳು ತಪ್ಪು ಹೆಜ್ಜೆ ಇಡುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಬಗ್ಗೆ ಮಕ್ಕಳಿಗೆ ಹೇಳಬಾರದ ಈ 13 ವಿಷಯಗಳನ್ನು ಪಾಲಕರು ತಿಳಿದಿರಲೇಬೇಕು.

1. ನೀನು ಉತ್ತಮ ಅಂಕ ಪಡೆಯದೇ ಇದ್ದರೆ ನಿನಗೆ ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆಂದು ಮಕ್ಕಳನ್ನು ಹೆದರಿಸಬಾರದು.
2. ಮಕ್ಕಳು ಮಾಡುವ ಬೇರೆ ತಪ್ಪುಗಳಿಗೆ 'ರಿಸಲ್ಟ್ ಬರಲಿ ನಿನಗೆ ಆಗ ಮಾಡುತ್ತೇನೆ' ಎಂದು ಪದೇ ಪದೇ ಹೇಳುವುದನ್ನು ತಪ್ಪಿಸಬೇಕು.
3. ಸ್ನೇಹಿತರ ಅಂಕಗಳನ್ನು ನೋಡಿ, ನಿಮ್ಮ ಮಕ್ಕಳ ಅಂಕಗಳನ್ನು ಹೋಲಿಸಬಾರದು.
4. ಉತ್ತಮ ಅಂಕ ಪಡೆದರೆ ಸೈಕಲ್, ಬೈಕ್, ದುಬಾರಿ ವಸ್ತುಗಳನ್ನು ಕೊಡಿಸುವ ಆಸೆ ಹುಟ್ಟಿಸಬಾರದು.
5. ಫಲಿತಾಂಶಕ್ಕೂ ಮುನ್ನ ಮಕ್ಕಳಿಗೆ 'ನೀನು ಫೇಲ್ ಆಗುತ್ತೀಯಾ' ಎಂದು ಪದೇ ಪದೇ ಹೇಳಬಾರದು.
6. ಬೇರೆ ಮಕ್ಕಳೊಂದಿಗೆ ನಿಮ್ಮ ಮನೆಯ ಮಕ್ಕಳನ್ನು ಹೋಲಿಸಲೇಬಾರದು. ಬೇರೆ ಮಕ್ಕಳ ಮುಂದೆ ನಿಮ್ಮ ಮಕ್ಕಳನ್ನು ಕೀಳಾಗಿ ಕಾಣುವುದು, ನಿಂದಿಸುವುದು, ಹೊಡೆಯುವುದು ಮಾಡಬಾರದು.

7. ಫಲಿತಾಂಶಕ್ಕೂ ಮುನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಸಜ್ಜುಗೊಳಿಸಲು ಒತ್ತಡ ಹೇರಬಾರದು.
8. ಫೇಲ್ ಆದರೆ ಹೊಡೆಯುತ್ತೇನೆ ಮನೆಯಿಂದ ಹೊರ ಹಾಕುತ್ತೇನೆ ಇಂತೆಲ್ಲಾ ಮಾತುಗಳನ್ನು ಮಕ್ಕಳ ಮುಂದೆ ಬಳಸಬಾರದು.
9. ಮಕ್ಕಳ ಫಲಿತಾಂಶದ ವಿಚಾರವಾಗಿ ತಂದೆ-ತಾಯಿ ಜಗಳವಾಡಬಾರದು.
10. ಫೇಲ್ ಆದರೆ ಓದು ಬಿಡಿಸಿ ಮಕ್ಕಳನ್ನು ಕೆಸಲಕ್ಕೆ ಕಳುಹಿಸುವುದು ಮಾಡಬಾರದು. ಇದು ದೊಡ್ಡ ಅಪರಾಧವಾಗುತ್ತದೆ.
11. ರಜಾ ದಿನಗಳಲ್ಲೂ ಓದು, ಬರಹ, ಟ್ಯೂಷನ್ ಅಂತ ಮಕ್ಕಳ ಮೇಲೆ ಹೊರೆ ಹೇರಬಾರದು.
12. ಟ್ಯೂಷನ್, ಓದಿಗೆ ನಾವು ಹೆಚ್ಚು ಹಣ ಖರ್ಚು ಮಾಡಿದ್ದೆವು ನೀನು ಫೇಲ್ ಆದೆ ಎಂದು ನಿಂದಿಸಿ ಮನನೋಯಿಸಬಾರದು. ಮುಂದೆ ಓದಿಗೆ ಹಣ ನೀಡುವುದಿಲ್ಲ ಎಂದು ಹೆದರಿಸಬಾರದು.
13. ನಿಮ್ಮಿಂದಾಗಿ ನಮ್ಮ ಮರೆಯಾದೆ ಹೋಯಿತು. ಎಲ್ಲರ ಮುಂದೆ ತಲೆ ತಗ್ಗಿಸುವಂತಾಯಿತು ಎಂದು ಮಕ್ಕಳನ್ನು ಬೈಯ್ಯಬಾರದು.

ಹೌದು... ಇವೆಲ್ಲಾ ಸಣ್ಣ ವಿಚಾರಗಳೇ ಆದರು ಪೋಷಕರು ಬೇಸರದಿಂದ ಮಕ್ಕಳ ಮುಂದೆ ಹೇಳಿ ಬಿಡುತ್ತಾರೆ. ಆದರೆ ಮಕ್ಕಳು ಪೋಷಕರ ಬೈಗುಳಗಳನ್ನು ಗಂಭೀರವಾಗಿ ತೆಗೆದುಕೊಳ್ಳಬಹುದು. ಕೆಟ್ಟ ದಾರಿ ಹಿಡಿಯಬಹುದು. ಕೆಲ ಬಾರಿ ಒತ್ತಡ ಹೆಚ್ಚಾದರೆ ಪ್ರಾಣ ಕೂಡ ಕಳೆದುಕೊಳ್ಳಬಹುದು. ಜೀವನದಲ್ಲಿ ಪ್ರಾಣಕ್ಕಿಂತ ದೊಡ್ಡದು ಯಾವುದು ಇಲ್ಲ. ಫಲಿತಾಂಶ ಈ ಬಾರಿ ಅಲ್ಲದೆ ಇದ್ದರೂ ಮುಂದೊಂದು ಬಾರಿ ಚೆನ್ನಾಗಿಯೇ ಪಡೆಯಬಹುದು. ಆದರೆ ಪ್ರಾಣ ಹೋದರೆ ಮತ್ತೆ ಪಡೆದುಕೊಳ್ಳಲು ಸಾಧ್ಯವೇ ಇಲ್ಲ.
ಹೀಗಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಅಂತ ಪೋಷಕರು ಭಯ ಭೀತರಾಗುವುದು, ಮಕ್ಕಳಿಗೂ ಭಯ ಹುಟ್ಟಿಸುವುದನ್ನು ತಪ್ಪಿಸಬೇಕು. ಫಲಿತಾಂಶ ಹೇಗೇ ಬರಲಿ ಸಂತೋಷ ಪಡಬೇಕು. ನಂತರ ಫಲಿತಾಂಶ ತೃಪ್ತಿಕರವಾಗಿಲ್ಲದೇ ಇದ್ದರೆ ಮಕ್ಕಳಿಗೆ ತಿಳಿ ಹೇಳಬೇಕು. ಅವರ ಮನಸ್ಥಿತಿ ಮೇಲೆ ನೀವು ಅವರೊಂದಿಗೆ ಹೇಗೆ ಮಾತನಾಡಬೇಕು ಅನ್ನುವುದು ಅವಲಂಭಿತವಿರುತ್ತದೆ.

ಕೆಲ ಮಕ್ಕಳು ಪೋಷಕರು ಹೇಳುವುದನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡು ಅದನ್ನು ಅನುಸರಿಸುತ್ತಾರೆ. ಇನ್ನೂ ಕೆಲ ಮಕ್ಕಳು ಪಾಲಕರು ಹೇಳುವ ವಿಷಯಗಳನ್ನು ಸರಳವಾಗಿ ತೆಗೆದುಕೊಂಡು ನಿರ್ಲಕ್ಷ್ಯ ತೋರುತ್ತಾರೆ. ಇನ್ನೂ ಕೆಲವರು ಪೋಷಕರು ಹೇಳುವ ಮಾತುಗಳಿಗೆ ಹೆದರಿ ಆತ್ಮಹತ್ಯೆ ಅಥವಾ ಕೆಟ್ಟದಾರಿಯತ್ತ ಕೂಡ ಹೋಗುವ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಪೋಷಕರು ಇಂತೆಲ್ಲಾ ವಿಷಯಗಳನ್ನು ಮಕ್ಕಳ ಮುಂದೆ ಪ್ರಸ್ತಾಪ ಮಾಡುವಾಗ ಜಾಗರೂಕರಾಗಿರಬೇಕು.












Click it and Unblock the Notifications