QR Code ಸ್ಕ್ಯಾನ್ ಮಾಡಿ, ಸಚಿವರಿಗೆ ದೂರು ಕೊಡಿ
ಕಲಬುರಗಿ, ಆಗಸ್ಟ್ 16: ಇಂದಿನ ಆನ್‌ಲೈನ್ ಯುಗದಲ್ಲಿ ಯಾರನ್ನಾದರೂ ಸಂಪರ್ಕಿಸುವುದು ಸುಲಭ. ಜನರು ತಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳಿಗೆ ದೂರು ನೀಡಲು ಸಹ ಹಲವು ಮಾರ್ಗಗಳಿವೆ. ಕರ್ನಾಟಕದ ಸರ್ಕಾರದ ಸಚಿವರೊಬ್ಬರು QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಜನರು ಅಹವಾಲು ಸಲ್ಲಿಕೆಗೆ ವ್ಯವಸ್ಥೆ ಮಾಡಿದ್ದಾರೆ.
ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಹೌದು. ಜನರು ಮನೆಯಲ್ಲಿಯೇ ಕುಳಿತು, QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸಚಿವರಿಗೆ ದೂರು ನೀಡುವ ವ್ಯವಸ್ಥೆ ಮಾಡಲಾಗಿದೆ.

ಕಲಬುರಗಿ ಜಿಲ್ಲಾಡಳಿತ ಈ ಕುರಿತು ಮಾಹಿತಿ ನೀಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಥವಾ ಅವರ ಕಚೇರಿಗೆ ನಿಮ್ಮ ಕುಂದುಕೊರತೆ ಅರ್ಜಿ ಸಲ್ಲಿಸಬೇಕೆ? ಹಾಗಾದರೆ ಇಲ್ಲಿ ನೀಡಲಾಗಿರುವ QR ಕೋಡ್ ಸ್ಕ್ಯಾನ್ ಮಾಡಿ ಎಂದು ಹೇಳಿದೆ.
ಜನರು ತಮ್ಮ ಸಮಸ್ಯೆಗಳನ್ನು QR ಕೋಡ್ ಸ್ಕ್ಯಾನ್ ಬಳಸಿ ಮನೆಯಲ್ಲಿ ಕುಳಿತು, ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಸಹ ಇದರದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಕಲಬುರಗಿ ಕನೆಕ್ಟ್; ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ 'ಕಲಬುರಗಿ ಕನೆಕ್ಟ್' ಎಂಬ ಹೆಸರಿನಲ್ಲಿ QR ಕೋಡ್ ಸ್ಕ್ಯಾನ್ ಮಾಡಿ ದೂರು ನೀಡುವ ವ್ಯವಸ್ಥೆ ಮಾಡಿದ್ದಾರೆ.
#KalaburagiConnect
— DIPR-KALABURAGI (@Kalaburgivarthe) August 16, 2023
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ @PriyankKharge ಅವರಿಗೆ ಅಥವಾ ಅವರ ಕಚೇರಿಗೆ ನಿಮ್ಮ ಕುಂದುಕೊರತೆ ಅರ್ಜಿ ಸಲ್ಲಿಸಬೇಕೆ? ಹಾಗಾದರೆ ಇಲ್ಲಿ ನೀಡಲಾಗಿರುವ QR ಕೋಡ್ ಸ್ಕ್ಯಾನ್ ಬಳಸಿ ಮನೆಯಲ್ಲಿ ಕುಳಿತಲ್ಲಿಯೆ ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಸಹ ಅವಕಾಶ ಕಲ್ಪಿಸಿದೆ pic.twitter.com/MQ3n6DAwzC
QR ಕೋಡ್ ಸ್ಕ್ಯಾನ್ ಮಾಡಿ ದೂರು ಸಲ್ಲಿಕೆ ಮಾಡುವ ವ್ಯವಸ್ಥೆಯನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಲಬುರಗಿಯಲ್ಲಿ ಆರಂಭಿಸಲಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಈ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆನ್‌ಲೈನ್ ಮೂಲಕ ಸ್ವೀಕರಿಸಿ, ಜಿಲ್ಲಾಮಟ್ಟದ ಇಲಾಖಾವಾರು ನೋಡಲ್ ಅಧಿಕಾರಿಗಳನ್ನು ನೇಮಿಸಿ, ಸಾರ್ವಜನಿಕರ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ವಿಲೇವಾರಿಗೊಳಿಸಲು 'ಕಲಬುರಗಿ ಕನೆಕ್ಟ್' ಅಡಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿಯೇ ವಿಶೇಷ ವೆಬ್‌ಸೈಟ್ ಆರಂಭಿಸಲಾಗಿದೆ.
ಈ ವೆಬ್‌ಸೈಟ್ ಮೂಲಕ ಜನರು ಹಾಗೂ ಜನಪ್ರತಿನಿಧಿಗಳು QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ತಮ್ಮ ಮನೆಯಲ್ಲಿಯೇ ಕುಳಿತು ಅರ್ಜಿ ಸಲ್ಲಿಸುವ ಅನುಕೂಲಕರ ವ್ಯವಸ್ಥೆ ಮಾಡಲಾಗಿದೆ.
ಜನರು QR ಕೋಡ್ ಸ್ಕ್ಯಾನ್ ಮಾಡಿ ದೂರು ಸಲ್ಲಿಕೆ ಮಾಡಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ಸಿಬ್ಬಂದಿ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರಿಗೆ (ನೋಡಲ್ ಅಧಿಕಾರಿಗಳಿಗೆ) ಆನ್‌ಲೈನ್ ಮೂಲಕ ಅರ್ಜಿಯನ್ನು ವರ್ಗಾಯಿಸುತ್ತಾರೆ.
ನಂತರ ನೋಡಲ್ ಅಧಿಕಾರಿಗಳು ಸದರಿ ಅರ್ಜಿಗಳನ್ನು ಪರಿಶೀಲಿಸಿ ನಿಯಮಾನುಸಾರ ವಿಲೇವಾರಿ ಮಾಡಿ ಸದರಿ ಅರ್ಜಿದಾರರಿಗೆ ಆನ್‌ಲೈನ್ ಮೂಲಕ ಮಾಹಿತಿ ಒದಗಿಸುತ್ತಾರೆ. ಈ ಪ್ರಕ್ರಿಯೆಗೆ 70 ಜಿಲ್ಲಾಮಟ್ಟದ ನೋಡಲ್ ಅಧಿಕಾರಿಗಳಿಗಳನ್ನು ನೇಮಿಸಲಾಗಿದೆ. ಪ್ರತಿಯೊಬ್ಬರಿಗೂ ಪ್ರತ್ಯೇಕ ಲಾಗಿನ್, ಪಾಸ್ ವರ್ಡ್ ಒದಗಿಸಲಾಗಿದೆ.
ಜನರು ತಮ್ಮ ಅರ್ಜಿಯ ಸಂಖ್ಯೆ ನಮೂದಿಸಿ ಅರ್ಜಿಯ ಸ್ಥಿತಿಗತಿ ತಿಳಿಯುವಂತೆಯೂ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಇಲಾಖಾವಾರು ಅರ್ಜಿಗಳ ಸ್ವೀಕೃತಿ, ಬಾಕಿ ಮತ್ತು ವಿಲೇವಾರಿಗೊಳಿಸಲಾದ ಸ್ಥಿತಿಗತಿಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗೆ ವಿಶೇಷ ಅಡ್ಮಿನ್ ಲಾಗಿನ್ ನೀಡಲಾಗಿದೆ. ಜೊತೆಗೆ ಜಿಲ್ಲಾಧಿಕಾರಿಗಳು 'ಕಲಬುರಗಿ ಕನೆಕ್ಟ್' ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ.












Click it and Unblock the Notifications