ಮಹಿಳಾ ಉದ್ದಿಮೆದಾರರಿಗೆ ಸರ್ಕಾರದ ಅಭಯ
ಕಲಬುರಗಿ, ಡಿಸೆಂಬರ್ 18 : ಮಹಿಳಾ ಉದ್ದಿಮೆದಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸರ್ಕಾರ ರಾಜ್ಯದಲ್ಲಿ ಐದು ಮಹಿಳಾ ಉದ್ದಿಮೆದಾರರ ಪಾರ್ಕ್ ನಿರ್ಮಿಸಲು ಮಂಜೂರಾತಿ ನೀಡಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೋದ್ಯಮದಲ್ಲಿ ತೊಡಗಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕಲಬುರಗಿಯ ಐವಾನ್-ಎ-ಶಾಹಿ ಅತಿಥಿಗೃಹ ಆವರಣದಲ್ಲಿ ಭಾನುವಾರ (ಡಿ.17) ರಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಕಲಬುರಗಿ ಲೇಡಿಸ್ ಅಸೊಸಿಯೇಶನ್ ಮ್ಯಾನುಫ್ಯಾಕ್ಚರರ್ಸ್ ಪಾರ್ಕ್ ಕೆ-ಲ್ಯಾಂಪ್ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸೌಲಭ್ಯ ಕೇಂದ್ರದ ಶಿಲಾನ್ಯಾಸ ಅನಾವರಣಗೊಳಿಸಿ ಮಾತನಾಡಿದರು.

ರಾಜ್ಯದಲ್ಲಿ ಆರಂಭಿಸಲು ಉದ್ದೇಶಿಸಲಾದ 5 ಮಹಿಳಾ ಕೈಗಾರಿಕಾ ಪಾರ್ಕ್ ಪೈಕಿ ಪ್ರಪ್ರಥಮವಾಗಿ ಕಲಬುರಗಿಯಲ್ಲಿ ಕೈಗಾರಿಕಾ ಮಹಿಳಾ ಪಾರ್ಕ್ ಉದ್ಘಾಟನೆಯಾಗುತ್ತಿರುವುದು ಸಂತಸ ಸಂಗತಿ. ಇದಕ್ಕಾಗಿ ನಂದೂರು ಕೆಸರಟಗಿ ಪ್ರದೇಶದಲ್ಲಿ 50 ಎಕರೆ ಭೂಮಿ ನೀಡಲಾಗಿದೆ ರಾಜ್ಯದಲ್ಲಿ ಹೆಚ್ಚು ಕೈಗಾರಿಕೆ ಆರಂಭಿಸುವ ಉದ್ದೇಶದಿಂದ ಈ ಹಿಂದೆ ಕೆ. ರತ್ನಪ್ರಭಾ ಅವರು ಕೈಗಾರಿಕೆ ಇಲಾಖೆಯ ಅಪರ ಕಾರ್ಯದಶಿಯಾಗಿದ್ದಾಗ ಹೊಸ ಕೈಗಾರಿಕೆ ನೀತಿ ರೂಪಿಸಲು ತಿಳಿಸಲಾಗಿತ್ತು,.
ರಾಜ್ಯದಲ್ಲಿ ಮಹಿಳಾ ಕೈಗಾರಿಕೆಗಳನ್ನು ಸ್ಥಾಪಿಸಿ ಮಹಿಳೆಯರಿಗೆ ಕೈಗಾರಿಕೆಯಲ್ಲಿ ಸೌಲಭ್ಯ ದೊರೆಯುವಂತೆ ಮಾಡಿದ ಕೀರ್ತಿ ರತ್ನಪ್ರಭ ಅವರಿಗೆ ಸಲ್ಲುತ್ತದೆ. ಕಲಬುರಗಿಯಲ್ಲಿ ಪ್ರಸ್ತುತ 200 ಜನ ಮಹಿಳೆಯರು ಉದ್ಯಾಮಶೀಲರಾಗಿ ತಮ್ಮನ್ನು ತೊಡಗಿಸಿದ್ದಾರೆ.
ಇನ್ನು ಹಿಂದುಳಿದ, ದಲಿತ ಮಹಿಳೆಯರು ಹೆಚ್ಚಾಗಿ ಉದ್ಯಾಮಶೀಲರಾಗಿ ಹೊರಹೊಮ್ಮಬೇಕು. ಮಹಿಳೆಯರು ಆರ್ಥಿಕವಾಗಿ ಸಬಲರಾದಾಗ ಮಾತ್ರ ಸಮಾಜದಲ್ಲಿ ಲಿಂಗತಾರತಮ್ಯ, ದೌರ್ಜನ್ಯ ಕಡಿಮೆಯಾಗಲು ಸಾಧ್ಯ. ಸರ್ಕಾರದ ಸೌಲಭ್ಯ ಪಡೆದು ಮಹಿಳೆಯರು ಉದ್ಯಾಮಶೀಲರಾಗಿ ಯಶಸ್ಸು ಪಡೆಯಲಿ ಎಂದು ಶುಭ ಹಾರೈಸಿದರು.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ ಮಾತನಾಡಿ, ಇದೊಂದು ಐತಿಹಾಸಿಕ ದಿನ. ಪ್ರಥಮವಾಗಿ ಕಲಬುರ್ಗಿಯಲ್ಲಿ ಮಹಿಳಾ ಕೈಗಾರಿಕಾ ಪಾರ್ಕಿನ ಸಾಮಾನ್ಯ ಸೌಲಭ್ಯ ಕೇಂದ್ರದ ಶಿಲಾನ್ಯಾಸವನ್ನು ಮುಖ್ಯಮಂತ್ರಿಗಳು ನೆರವೇರಿಸಿದ್ದು ಸಂತೋಷದ ವಿಷಯ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸರ್ಕಾರದ ಕೈಗಾರಿಕೆ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಮಹಿಳೆಯರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಿಳೆಯರಿಗೆ ಹಕ್ಕು ಪತ್ರ ವಿತರಿಸಿದರು. ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಅಫಜಲಪುರ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲಿಕಯ್ಯ ಗುತ್ತೇದಾರ್ ಹಾಜರಿದ್ದರು.
ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್, ಚಿಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ. ಉಮೇಶ ಜಾಧವ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಕೆ.ಐ.ಎ.ಡಿ.ಬಿ. ಕಾರ್ಯನಿರ್ವಾಹಕ ಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಜಯರಾಂ ಪಾಲ್ಗೊಂಡಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ್ ಉಪಸ್ಥಿತರಿದ್ದರು.












Click it and Unblock the Notifications