PUC Exam: ವಿದ್ಯಾರ್ಥಿನಿ ಬದಲಾಗಿ ಪರೀಕ್ಷೆ ಬರೆದ ಕಾಂಗ್ರೆಸ್ ಕಾರ್ಯಕರ್ತೆ ಬಂಧನ
ಕಲಬುರಗಿ, ಮಾರ್ಚ್ 06: ಕರ್ನಾಟಕ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯುತ್ತಿವೆ. ಮಂಗಳವಾರವಷ್ಟೇ ಕಲಬುರಗಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಕೇಳಿ ಬಂದಿತ್ತು. ಇದ ಬೆನ್ನಲ್ಲೆ ಬುಧವಾರ ಮಾರ್ಚ್ 05ರಂದು ಪಿಯುಸಿ ವಿದ್ಯಾರ್ಥಿನಿಯೊಬ್ಬರು ಬರೆಯಬೇಕಾದ ಪರೀಕ್ಷೆಯನ್ನು ಕಾಂಗ್ರೆಸ್ ಕಾರ್ಯಕರ್ತೆ ಬರೆದು ಪೊಲೀಸ್ ಬಂಧನಕ್ಕೆ ಒಳಗಾಗಿದ್ದಾರೆ.
ಮಾರ್ಚ್ 01ರಿಂದ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದೆ. ಮಾರ್ಚ್ 20ರವರೆಗೆ ನಡೆಯಲಿದೆ. ಪರೀಕ್ಷೆಗಳು ರಾಜ್ಯವ್ಯಾಪಿ ಸುಸೂತ್ರವಾಗಿ ನಡೆಯುತ್ತಿವೆ ಎನ್ನುವಷ್ಟರಲ್ಲೇ ಕಲ್ಯಾಣ ಕರ್ನಾಟಕ ಭಾಗದ ಒಂದೇ ಜಿಲ್ಲೆಯಲ್ಲಿ ಎರಡು ಪ್ರಕರಣಗಳು ಸರಣಿಯಾಗಿ ಬೆಳಕಿಗೆ ಬಂದಿವೆ.

ಈ ಬಂಧನಕ್ಕೆ ಒಳಗಾದ ಕಾಂಗ್ರೆಸ್ ಕಾರ್ಯಕರ್ತೆ ಸಂಪೂರ್ಣಾ ಪಾಟೀಲ್ ಎಂದು ತಿಳಿದು ಬಂದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಒಡೆತನಕ್ಕೆ ಸೇರಿ ಮಿಲಿಂದ್ ಕಾಲೇಜಿನಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ವರದಿ ಆಗಿದೆ. ಮಾರ್ಚ್ 05ರಂದು ರಾಜ್ಯಶಾಸ್ತ್ರ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಗೆ ಅರ್ಚನಾ ಎಂಬ ವಿದ್ಯಾರ್ಥಿನಿ ಬರೆಯಬೇಕಿದ್ದ ಈ ಪರೀಕ್ಷೆ ಯನ್ನು ಬಂಧಿತ ಕಾಂಗ್ರೆಸ್ ಕಾರ್ಯಕರ್ತೆ ಬರೆದಿದ್ದಾರೆ.
ಪ್ರಾಂಶುಪಾಲರಿಂದ ದೂರು: ಪೊಲೀಸ್ ಬಂಧನ
ಪ್ರಕರಣ ಸಂಬಂಧ ಅಲರ್ಟ್ ಆದ ದಲಿತ ಸೇನೆ ಕಾರ್ಯಕರ್ತರು ಕಾಲೇಜಿಗೆ ತೆರಳಿ ಅಕ್ರಮವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ರಮವನ್ನು ಪ್ರಶ್ನಿಸಿದ ವೇಳೆ ಕಾಂಗ್ರೆಸ್ ಕಾರ್ಯಕರ್ತೆಯ ಕೈವಾಡ ಬಯಲಾಗಿದೆ. ಪ್ರಕರಣ ಬೆಳಕಿಗೆ ಬಂದ ಕೂಡಲೇ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಸಂಪೂರ್ಣಾ ಪಾಟೀಲಳನ್ನು ಬಂಧಿಸಿದ್ದಾರೆ.
ವಿದ್ಯಾರ್ಥಿನಿ ಬದಲಾಗಿ ಪರೀಕ್ಷೆ ಬರೆದದ್ದು ಯಾಕೆ, ಯಾವ ಉದ್ದೇಶ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ವ ಭಾವಿ ಪರೀಕ್ಷೆಗಳು ನಡೆದಿವೆ. ಮಂಗಳವಾರವಷ್ಟೇ ಪಿಯು ಸಮಾಜ ವಿಜ್ಞಾನ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಕಲಬುರಗಿಯಲ್ಲಿ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂಬ ಆರೋಪ ಕೇಳಿ ಬಂದಿತ್ತು.
SSLC ಪ್ರಶ್ನೆ ಪತ್ರಿಕೆ ಸೋರಿಕೆ: ತನಿಖೆಗೆ ಆದೇಶ
ಈ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಬೆನ್ನಲ್ಲೆ ಇಂಥದ್ದೊಂದು ಆರೋಪ ಕೇಳಿ ಬಂದಿತ್ತು. ಇದನ್ನು ಶಿಕ್ಷಣಾಧಿಕಾರಿಗಳು ದೃಢಪಡಿಸಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ತನಿಖೆಗೆ ಒಪ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ. ಸದ್ಯ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ವಿರುದ್ಧ ಕಾಮ್ಸ್ ಟೀಕೆ ಮಾಡಿದೆ. ಸಮರ್ಪಕವಾಗಿ, ಯಾವ ತೊಂದರೆ, ದೃಷ್ಕೃತ್ಯ ನಡೆಯದಂತೆ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದೆ.












Click it and Unblock the Notifications