ಡಿ.15, 16ರಂದು ಕಲಬುರಗಿ ಜಿಲ್ಲೆಗೆ ಸಿದ್ದರಾಮಯ್ಯ ಭೇಟಿ
ಕಲಬುರಗಿ, ಡಿಸೆಂಬರ್ 14 : ರಾಜ್ಯ ಪ್ರವಾಸ ಆರಂಭಿಸಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.15 ಮತ್ತು 16ರಂದು ಕಲಬುರಗಿ ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಅಫಜಲಪುರ ತಾಲೂಕಿನ ಅಂದಾಜು 621 ಕೋಟಿ ರೂ., ಸೇಡಂ ತಾಲೂಕಿನ 133 ಕೋಟಿ ರೂ. ಹಾಗೂ ಜೇವರ್ಗಿ ತಾಲೂಕಿನ 194 ಕೋಟಿ ರೂ.ಗಳ ಕಾಮಗಾರಿಗಳನ್ನು ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.

ಡಿಸೆಂಬರ್ 15 ರಂದು ಕಲಬುರಗಿಗೆ ಆಗಮಿಸುವ ಸಿದ್ದರಾಮಯ್ಯ ಅವರು ವಾಸ್ತವ್ಯ ಹೂಡಲಿದ್ದಾರೆ. ಡಿಸೆಂಬರ್ 16ರಂದು ಬೆಳಗ್ಗೆ 9.30ಕ್ಕೆ ಕಲಬುರಗಿ ನಗರದ ಹೆಚ್.ಕೆ.ಇ. ಸೊಸೈಟಿಯ ಆಡಿಟೋರಿಯಂ ಉದ್ಘಾಟಿಸಲಿದ್ದಾರೆ.
ಸರ್ಕಾರ ಹಲವಾರು ಕಾರಣಗಳಿಂದಾಗಿ ನೆನೆಗುದಗಿಗೆ ಬಿದ್ದಿದ್ದ ಬೆಣ್ಣೇತೋರಾ ಯೋಜನೆಗೆ 160 ಕೋಟಿ ರೂ., ಲೋವರ ಮುಲ್ಲಾಮಾರಿ ಯೋಜನೆಗೆ 120 ಕೋಟಿ ರೂ., ಗಂಡೋರಿನಾಲಾ ಯೋಜನೆಗೆ 160 ಕೋಟಿ ರೂ. ಹಾಗೂ ಭೀಮಾ ಏತ ನೀರಾವರಿಗೆ 562 ಕೋಟಿ ರೂ.ಗಳನ್ನು ನೀಡುವ ಮೂಲಕ ಶಾಶ್ವತ ಪರಿಹಾರ ದೊರಕಿಸಿ ನೀರಾವರಿಗೆ ಕಾಯಕಲ್ಪ ನೀಡಿದೆ.
ಕಲಬುರಗಿ ವಿಮಾನ ನಿಲ್ದಾಣದ ಕಾಮಗಾರಿಯನ್ನು ಪುನರ್ ಪ್ರಾರಂಭಿಸಲಾಗಿದೆ. ವಿಮಾನ ನಿಲ್ದಾಣವನ್ನು ಮಾರ್ಚ್ ಅಂತ್ಯದೊಳಗಾಗಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲು ಸರ್ಕಾರ ಮುಂದಾಗಿದೆ.












Click it and Unblock the Notifications