Iran Protest: ಇರಾನ್ ವಿರುದ್ಧ ದಾಳಿ ಮಾಡಲು ಸಿದ್ಧವಾಗುತ್ತಿದೆಯಾ ಅಮೆರಿಕ ಸೇನೆ?
ಇರಾನ್ ನೆಲದಲ್ಲಿ ಭೀಕರವಾದ ಪ್ರತಿಭಟನೆ ನಡುವೆ ಸುಮಾರು 2,000 ಜನರು ಬಲಿಯಾಗಿದ್ದಾರೆ, ಆ ಮೂಲಕ ಘೋರ ಹಿಂಸಾಚಾರ ನಡೆಯುತ್ತಿದೆ. ಮೊದಲೇ ಅಕ್ಕಪಕ್ಕ ಶತ್ರುಗಳ ಗುಂಪನ್ನೇ ಇಟ್ಟುಕೊಂಡು ಬದುಕುತ್ತಿದ್ದ ಇರಾನ್ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಯಾವ ಕ್ಷಣದಲ್ಲಿ ಇಸ್ರೇಲ್ ಅಥವಾ ಅಮೆರಿಕ ಸೇನೆ ಇರಾನ್ ಮೇಲೆ ದಾಳಿ ಮಾಡುತ್ತೋ? ಎಂಬ ಆತಂಕ ಇರಾನ್‌ನಲ್ಲಿ ಆವರಿಸಿದೆ. ಇಷ್ಟೆಲ್ಲಾ ಚರ್ಚೆ ಹಾಗೂ ಸಾಧ್ಯತೆಗಳ ನಡುವೆ ದಿಢೀರ್ ಅಮೆರಿಕ ಸೇನೆ ಕೂಡ ಅಲರ್ಟ್ ಆಗಿದೆ. ಅಮೆರಿಕ ಈಗ ಇರಾನ್ ಪ್ರತಿಭಟನೆ ಬಗ್ಗೆ ಪ್ರತಿಕ್ಷಣದ ಮಾಹಿತಿ ಕಲೆಹಾಕುತ್ತಿದೆ.
ಇರಾನ್ ಆಡಳಿತ ಸರ್ವಾಧಿಕಾರಿಯ ಕೈಗೆ ಸಿಲುಕಿ ನರಳುತ್ತಿದ್ದು, ಇದರಿಂದ ನಮ್ಮ ದೇಶಕ್ಕೆ ಸಮಸ್ಯೆ ಎದುರಾಗುತ್ತಿದೆ ಎಂದು ಇರಾನ್ ಪ್ರಜೆಗಳು ರೊಚ್ಚಿಗೆದ್ದು ಹೋರಾಟ ಶುರು ಮಾಡಿದ್ದರು. ಹೀಗಿದ್ದಾಗ ಇರಾನ್ ದೇಶದಲ್ಲಿ ಹಿಂಸಾಚಾರ ಕೂಡ ಭುಗಿಲೆದ್ದು ಸಾವಿರಾರು ಜನರು ಪ್ರಾಣ ಬಿಟ್ಟಿದ್ದು ಇಡೀ ಜಗತ್ತಿನಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಇಂತಹ ಸಮಯದಲ್ಲೇ ಅಮೆರಿಕ ಕೂಡ ರೊಚ್ಚಿಗೆದ್ದು ಇರಾನ್ ವಿರುದ್ಧ ಸಾಕಷ್ಟು ಕ್ರಮಗಳನ್ನು ಜಾರಿಗೆ ತರಲು ಮುಂದಾಗಿದೆ. ಇದೆಲ್ಲವನ್ನೂ ಮೀರಿ ನೇರವಾಗಿ ಇರಾನ್ ಮೇಲೆ ಅಮೆರಿಕ ಯುದ್ಧ ಸಾರುವ ಸಾಧ್ಯತೆ ಕೂಡ ದಟ್ಟವಾಗಿದೆ. 6 ತಿಂಗಳ ಹಿಂದಷ್ಟೇ ಇರಾನ್ ಮೇಲೆ ಅಮೆರಿಕ ದಾಳಿ ಮಾಡಿತ್ತು, ಆದರೆ ಇದೀಗ ಮತ್ತೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ.

ಅಮೆರಿಕ ಸೇನೆಯಿಂದ ನೇರ ದಾಳಿ?
ಇಸ್ರೇಲ್ ಮತ್ತು ಇರಾನ್ ಶಾಶ್ವತ ಶತ್ರುಗಳು, ಹೀಗಿದ್ದಾಗ ಇಸ್ರೇಲ್ ಬೆನ್ನಿಗೆ ನಿಂತಿರುವ ಅಮೆರಿಕದ ಪಾಲಿಗೆ ಇರಾನ್ ಕೂಡ ದೊಡ್ಡ ಶತ್ರುವಾಗಿದೆ. ಅಲ್ಲದೆ ಇರಾನ್ ಮೊದಲಿನಿಂದ ಕೂಡ ಅಮೆರಿಕ ವಿರುದ್ಧ ನಿಂತಿದ್ದು, ಇಬ್ಬರ ನಡುವೆ ದೊಡ್ಡ ಮಟ್ಟಿಗೆ ದ್ವೇಷ ಇದೆ. ಅದರಲ್ಲೂ ಇರಾನ್ ತನ್ನಲ್ಲಿ ಪರಮಾಣು ಬಾಂಬ್ ಪರೀಕ್ಷೆಗೆ ಮುಂದಾದ ನಂತರ ಫೈಟಿಂಗ್ ಇನ್ನಷ್ಟು ಹೆಚ್ಚಾಗಿದೆ. ಹೀಗಿದ್ದಾಗಲೇ ಇರಾನ್ ನೆಲದಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ಆರಂಭವಾಗಿದೆ. ಇದೇ ವಿಚಾರವನ್ನು ನೆಪವಾಗಿ ಇಟ್ಟುಕೊಂಡು ನೇರವಾಗಿ ಇರಾನ್ ನೆಲಕ್ಕೆ ಅಮೆರಿಕ ನುಗ್ತುತ್ತಾ? ಎಂಬ ಪ್ರಶ್ನೆ ಮೂಡಿದೆ.
ಇರಾನ್ ಬಳಿ ಪರಮಾಣು ಅಸ್ತ್ರ?
ಹಾಗೇ ಇನ್ನೊಂದು ಕಡೆ ಇರಾನ್ ಬಳಿ ಪರಮಾಣು ಅಸ್ತ್ರ ಇದೆಯಾ? ಎಂಬ ಅನುಮಾನ ಕೂಡ ಇದೆ. ಏಕೆಂದರೆ ಈಗಾಗಲೇ ಪರಮಾಣು ಸ್ಥಾವರಗಳನ್ನು ಸ್ಥಾಪನೆ ಮಾಡಿಕೊಂಡಿರುವ ಇರಾನ್ ದೇಶ, ತಮ್ಮ ಶತ್ರುಗಳಿಗೆ ವಾರ್ನಿಂಗ್ ಕೊಡುತ್ತಾ ಬಂದಿದೆ. ಪರಿಸ್ಥಿತಿ ಹೀಗಿದ್ದಾಗ ಅಮೆರಿಕ ನೇರ ನುಗ್ಗಿ ಇರಾನ್ ನೆಲದಲ್ಲಿ ಕಾರ್ಯಾಚರಣೆ ನಡೆಸುವ ಸಾಧ್ಯತೆ ಕಡಿಮೆ. ಹೀಗಿದ್ದರೂ ಇಸ್ರೇಲ್ ಜೊತೆ ಸೇರಿ ದಾಳಿ ಆರಂಭಿಸುವ ಮುನ್ಸೂಚನೆ ಸಿಗುತ್ತಿದೆ. ಇನ್ನೊಂದು ಕಡೆ ಇರಾನ್ ದೇಶದಲ್ಲಿ ಪ್ರತಿಭಟನೆ ಮತ್ತಷ್ಟು ಹಬ್ಬುತ್ತಿದ್ದು, ಇರಾನ್ ಪ್ರಜೆಗಳಲ್ಲಿ ಆತಂಕ ಹೆಚ್ಚಾಗುತ್ತಿದೆ. ಈಗಾಗಲೇ ಈ ಪ್ರತಿಭಟನೆ ಹಾಗೂ ಹೋರಾಟದಲ್ಲಿ ಸಾವಿರಾರು ಜನರು ಬಲಿಯಾಗಿರುವ ಆರೋಪ ಮಾಡಲಾಗಿದೆ.












Click it and Unblock the Notifications