ಅಲ್ ಖೈದಾ ಸಂಘಟನೆಯ ಹಮ್ಜಾ ಬಿನ್ ಲಾಡೆನ್ ಕಪ್ಪು ಪಟ್ಟಿಗೆ
ವಿಶ್ವಸಂಸ್ಥೆಯ ಭದ್ರತಾ ಸಭೆಯು ಒಸಾಮಾ ಬಿನ್ ಲಾಡೆನ್ ಮಗ ಹಮ್ಜಾ ಬಿನ್ ಲಾಡೆನ್ ನನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಆತನ ಮೇಲೆ ನಿರ್ಬಂಧಗಳನ್ನು ಹೇರಿದೆ. ಪ್ರವಾಸ ನಿಷೇಧ, ಆಸ್ತಿ ಮೇಲೆ ದಿಗ್ಬಂಧನಹಾಗೂ ಶಸ್ತ್ರಾಸ್ತ್ರಗಳನ್ನು ಹೊಂದುವುದಕ್ಕೆ ತಡೆಯೊಡ್ಡಿದೆ. ಅಲ್ ಖೈದಾ ಉಗ್ರ ಸಂಘಟನೆಯ ಸದ್ಯದ ನಾಯಕ ಅಲ್-ಜವಾಹಿರಿಯ ಸಂಭವನೀಯ ಉತ್ತರಾಧಿಕಾರಿ ಎಂಬಂತೆ ನೋಡಲಾಗುತ್ತಿದೆ.
ವಿಶ್ವ ಸಂಸ್ಥೆಯ ಭದ್ರತಾ ಸಭೆ ಐಎಸ್ ಐಎಸ್ ಹಾಗೂ ಅಲ್ ಖೈದಾದ ದಿಗ್ಬಂಧನ ಸಮಿತಿಯು ಗುರುವಾರ ಇಪ್ಪತ್ತೊಂಬತ್ತು ವರ್ಷದ ಹಮ್ಜಾನ ಮೇಲೆ ಈ ಘೋಷಣೆ ಮಾಡಿದೆ. ಆತನ ಬಗ್ಗೆ ಮಾಹಿತಿ ನೀಡುವವರಿಗೆ ಅಮೆರಿಕದ ಸರಕಾರವು ಏಳು ಕೋಟಿ ರುಪಾಯಿ (ಒಂದು ಮಿಲಿಯನ್ ಡಾಲರ್) ಬಹುಮಾನ ಘೋಷಣೆ ಮಾಡಿದೆ.
ಇನ್ನು ಸೌದಿ ಅರೇಬಿಯಾವು ಹಮ್ಜಾ ಲಾಡೆನ್ ನ ಪೌರತ್ವವನ್ನು ಶುಕ್ರವಾರ ರದ್ದುಗೊಳಿಸಿದೆ. ಭದ್ರತಾ ಸಭೆಯು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಸೌದಿ ಅರೇಬಿಯಾದಲ್ಲಿ ಹುಟ್ಟಿದ ಹಮ್ಜಾ ಬಿನ್ ಲಾಡೆನ್ ಅನ್ನು ಅಲ್ ಖೈದಾದ ಅಧಿಕೃತ ಸದಸ್ಯ ಎಂದು ಅಲ್-ಜವಾಹಿರಿ ಘೋಷಣೆ ಮಾಡಿದ್ದಾನೆ ಎಂದು ತಿಳಿಸಲಾಗಿದೆ.

ಅಲ್ ಖೈದಾದ ಅನುಯಾಯಿಗಳು ದಾಳಿ ಸಂಘಟಿಸಬೇಕು ಎಂದು ಹಮ್ಜಾ ಕರೆ ನೀಡಿದ್ದಾರೆ. ಆತನು ಅಲ್-ಜವಾಹಿರಿಯ ಸಂಭವನೀಯ ಉತ್ತರಾಧಿಕಾರಿ ಎಂದು ಸಭೆಯ ಮೂಲಕ ತಿಳಿಸಲಾಗಿದೆ. ಹಮ್ಜಾಗೆ ಸೇರಿದ ಎಲ್ಲ ಆಸ್ತಿಯ ಮೇಲೆ ದಿಗ್ಬಂಧನ ಹೇರಲು ಸೂಚಿಸಲಾಗಿದೆ. ಆತನಿಗೆ ಯಾವುದೇ ಆರ್ಥಿಕ ಮೂಲ ಮತ್ತು ಇತರ ಅಸ್ತಿ ದೊರೆಯದಂತೆ ತಡೆ ಹಾಕಬೇಕು ಎಂದು ಸೂಚನೆ ನೀಡಲಾಗಿದೆ.
ಆತನ ಮೇಲೆ ಪ್ರವಾಸ ನಿರ್ಬಂಧಗಳನ್ನು ಹೇರಲಾಗಿದೆ. ಯಾವುದೇ ದೇಶಕ್ಕೆ ಪ್ರವೇಶ ಅಥವಾ ಅ ದೇಶದ ಮೂಲಕ ತೆರಳುವುದಕ್ಕೆ ನಿಷೇಧವಿದೆ. ಪ್ರತ್ಯಕ್ಶವಾಗಿಯೋ ಅಥವಾ ಪರೋಕ್ಷವಾಗಿಯೋ ತಮ್ಮ ರಾಷ್ಟ್ರಗಳಿಂದ ಯಾವುದೇ ಶಸ್ತ್ರಾಸ್ತ್ರ ಪೂರೈಕೆ ಮಾಡುವಂತಿಲ್ಲ. ಅಷ್ಟೇ ಅಲ್ಲ, ಯಾವುದೆ ದೇಶದ ವಿಮಾನ, ಶಸ್ತ್ರಾಸ್ತ್ರ, ಬಿಡಿ ಭಾಗಗಳು, ತಾಂತ್ರಿಕ ಸಲಗೆ, ನೆರವು, ಸೇನೆ ಚಟುವಟಿಕೆ ತರಬೇತಿಯನ್ನು ಕೂಡ ಒದಗಿಸುವಂತಿಲ್ಲ.
ಎರಡು ವರ್ಷದ ಹಿಂದೆ ಅಮೆರಿಕದ ಇಲಾಖೆಯು ಹಮ್ಜಾ ಬಿನ್ ಲಾಡೆನ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿತ್ತು. ಅಮೆರಿಕದಲ್ಲಿ ಆತನ ಹೆಸರಲ್ಲಿರುವ, ಆತನಿಗೆ ಸಂಬಂಧಿಸಿದ ವ್ಯಕ್ತಿಗಳ ಬಳಿ ಇರುವ ಆಸ್ತಿಗಳ ಮೇಲೆ ದಿಗ್ಬಂಧನ ಹೇರಿತ್ತು. ಅಮೆರಿಕದ ನಾಗರಿಕರು ಹಮ್ಜಾನ ಜತೆ ಯಾವುದೇ ವ್ಯವಹಾರ ನಡೆಸಬಾರದು ಎಂಬ ನಿಷೇಧ ಕೂಡ ಹೇರಿತ್ತು.












Click it and Unblock the Notifications