Donald Trump: ಚೀನಾ ವಿರುದ್ಧ ಶೇ. 100 ತೆರಿಗೆ ಹೇರಿಕೆಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಚಿಂತನೆ!
ಚೀನಾ ವಿರುದ್ಧ ಇದೀಗ ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಕ್ಷರಶಃ ರೊಚ್ಚಿಗೆದ್ದಿದ್ದು, ಭಾರಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಹೇರಿಕೆ ಮಾಡುವ ಮೂಲಕ ಚೀನಾಗೆ ಡಬಲ್ ಆಘಾತ ನೀಡಲು ಸಜ್ಜಾಗಿದ್ದಾರೆ. ಚೀನಾ ವಿಚಾರದಲ್ಲಿ ಪದೇ ಪದೇ ಅಸಮಾಧಾನ ಹೊಂದಿರುವ ಡೊನಾಲ್ಡ್ ಟ್ರಂಪ್, ಕೆಲವು ತಿಂಗಳ ಹಿಂದಷ್ಟೇ ಚೀನಾ ಜೊತೆಗೆ ಟ್ಯಾಕ್ಸ್ ಫೈಟ್ ಮಾಡಲು ಹೋಗಿ ಆ ನಂತರ ಸೈಲೆಂಟ್ ಆಗಿದ್ದರು. ಇದೀಗ ಮತ್ತೊಂದು ಹಂತದಲ್ಲಿ ತೆರಿಗೆ ವಾರ್ ಮಾಡಲು ಟ್ರಂಪ್ ಮುಂದೆ ನುಗ್ಗಿದಂತಿದೆ. ಇದೇ ಕಾರಣಕ್ಕೆ ದಿಢೀರ್ ಎಚ್ಚರಿಕೆ ನೀಡುವ ಹೇಳಿಕೆ ಕೊಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅಮೆರಿಕದ ಹೆಸರು ಕೇಳಿದರೆ ಸಾಕು ಚೀನಾ ಉರಿದು ಬೀಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹಾಗೇ ಅಮೆರಿಕಗೆ ಯಾವುದೇ ಕಾರಣಕ್ಕೂ ಅಪರೂಪದ ಖನಿಜ ಸಂಪನ್ಮೂಲವನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡದೇ ಇರಲು ಚೀನಾ ನಿರ್ಧಾರ ಮಾಡಿದೆ. ಇದನ್ನು ಕಂಡು ಈಗ ಟ್ರಂಪ್ ಮತ್ತೆ ಕೊತ ಕೊತ ಕುದ್ದು ಹೋಗಿದ್ದಾರೆ. ಹೀಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನವೆಂಬರ್ 1 ಅಥವಾ ಅದಕ್ಕೂ ಮುಂಚಿತವಾಗಿ ಚೀನಾ ಸರಕುಗಳ ಮೇಲೆ ಮತ್ತಷ್ಟು ಆಮದು ಸುಂಕ ಹೇರುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಅದರಲ್ಲೂ ಈಗ ಹೆಚ್ಚುವರಿ ಶೇ. 100 ತೆರಿಗೆ ವಿಧಿಸುವ ವಾರ್ನಿಂಗ್ ಕೊಟ್ಟಿದ್ದಾರೆ.

ಚೀನಾ ಅಧ್ಯಕ್ಷರ ಭೇಟಿ ಕೂಡ ಕ್ಯಾನ್ಸಲ್?
ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ನಿರ್ಧಾರ ಮಾಡಿದ್ದರು. ಅಕ್ಟೋಬರ್ ತಿಂಗಳ ಒಳಗೆ ಇಬ್ಬರ ನಡುವೆ ಮಹತ್ವದ ಮಾತುಕತೆ ನಡೆಯುವ ನಿರೀಕ್ಷೆ ಇತ್ತು. ಈ ಮೂಲಕ ಅಮೆರಿಕದ ರೈತರಿಗೆ ಹೊಸ ಹುಮ್ಮಸ್ಸು ತುಂಬಿ & ತಮ್ಮ ವ್ಯಾಪಾರ ಬಲಪಡಿಸಲು ಟ್ರಂಪ್ ಚಿಂತನೆ ನಡೆಸಿದ್ದರು. ಆದರೆ ಈ ಎಲ್ಲಾ ಅಲ್ಲೋಲ ಕಲ್ಲೋಲ ಎಬ್ಬಿಸಿದೆ. ಜೊತೆಗೆ ನಾನು ಚೀನಾ ಅಧ್ಯಕ್ಷ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಬಲವಾದ ಕಾರಣ ಸಿಗುತ್ತಿಲ್ಲ ಎಂದಿದ್ದಾರೆ ಡೊನಾಲ್ಡ್ ಟ್ರಂಪ್ ಅವರು.
ಡೆಡ್‌ಲೈನ್ ಮೂಲಕ ಹೊಸ ಆಟ ಶುರು?
ಅಷ್ಕಕ್ಕೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ನೇರವಾಗಿ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಆಡಳಿತಕ್ಕೆ ವಾರ್ನಿಂಗ್ ಕೊಟ್ಟಿದ್ದರೂ ದಿಢೀರ್ ಯಾವುದೇ ನಿರ್ಧಾರ ಕೈಗೊಳ್ಳದೆ ಇರಲು ತೀರ್ಮಾನಿಸಿದ್ದಾರೆ. ಈ ಕಾರಣಕ್ಕೆ ಬೃಹತ್ ಹೊಸ ತೆರಿಗೆ ಆದೇಶವನ್ನು ಹೊರಡಿಸಲು ನವೆಂಬರ್ 1ರ ಗಡುವು ನಿಗದಿ ಮಾಡಿ, ಕಾಯುತ್ತಿದ್ದಾರೆ. ಈ ಮೂಲಕ ಚೀನಾ ವಿಚಾರದಲ್ಲಿ ಅಮೆರಿಕ ಹೊಸ ಆಟ ಶುರು ಮಾಡಿದಂತೆ ಇದೆ. ಆದರೆ ಇದಕ್ಕೆ ಚೀನಾ ಯಾವ ರೀತಿಯಾಗಿ ಉತ್ತರ ಕೊಡಲಿದೆ ಅನ್ನೋದನ್ನ ಕಾದು ನೋಡಬೇಕಿದೆ. ಹೀಗೆ ಅಮೆರಿಕ & ಚೀನಾ ನಡುವೆ ಮತ್ತೊಮ್ಮೆ ದಿಢೀರ್ ತೆರಿಗೆ ವಾರ್ ಶುರುವಾಗಿರುವ ಹಿನ್ನೆಲೆ ಜಾಗತಿಕ ಆರ್ಥಿಕತೆ ಮತ್ತು ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಎದುರಾಗುವ ಸಂಭವ ಇದೆ.












Click it and Unblock the Notifications