ದೇಶ ಇದ್ದರೂ ಇವರೆಲ್ಲಾ ಅನಾಥ: ನಿಲ್ಲಲು ಸೂರು ಇಲ್ಲ, ತಿನ್ನಲು ಅನ್ನವಿಲ್ಲ
ಅವರೆಲ್ಲಾ ಕೆಲವೇ ತಿಂಗಳ ಹಿಂದೆ ಆರಾಮವಾಗಿ ಇದ್ದರು. ಹೊಟ್ಟೆ ತುಂಬಾ ಊಟ, ನೆಮ್ಮದಿ ತುಂಬಿದ ಮನೆ. ಹೀಗೆ ಎಲ್ಲವನ್ನೂ ಕೆಲವೇ ದಿನಗಳಲ್ಲಿ ಕಳೆದುಕೊಂಡಿದ್ದಾರೆ. ಹೌದು, ಸೇನಾ ದಂಗೆಯ ನಂತರದ ಮ್ಯಾನ್ಮಾರ್ ಚಿತ್ರಣ ಇದು. ಪ್ರಜಾಪ್ರಭುತ್ವ ವಾದಿ ಸರ್ಕಾರವನ್ನು ಇಲ್ಲವಾಗಿಸಿ, ದೇಶದ ಮೇಲೆ ನಿಯಂತ್ರಣ ಸಾಧಿಸಿರುವ ಅಲ್ಲಿನ ಮಿಲಿಟರಿ ಹೋರಾಟಗಾರರನ್ನು ಕಂಡ ಕಂಡಲ್ಲಿ ಕೊಂದು ಹಾಕುತ್ತಿದೆ. ಹೀಗಾಗಿ ಜೀವ ಉಳಿಸಿಕೊಳ್ಳಲು ಜನರು ಭಾರತವೂ ಸೇರಿದಂತೆ ಅಕ್ಕಪಕ್ಕದ ದೇಶಗಳಿಗೆ ಓಡಿ ಹೋಗುತ್ತಿದ್ದಾರೆ.
ಹೀಗೆ ಕೆಲವಷ್ಟು ಜನರ ಗುಂಪು ಮ್ಯಾನ್ಮಾರ್‌ಗೆ ನೆರೆ ದೇಶವಾದ ಥೈಲ್ಯಾಂಡ್ ಕಡೆಗೂ ಓಡಿ ಹೋಗಿದ್ದಾರೆ. ಆದರೆ ಅಕ್ರಮವಾಗಿ ವಲಸೆ ಬಂದ ಸಾವಿರಾರು ಜನರನ್ನು ಥೈಲ್ಯಾಂಡ್ ಸರ್ಕಾರ ಹೊರಗೆ ದಬ್ಬುತ್ತಿದೆ. ಹೀಗಾಗಿ ಅತ್ತ ತಮ್ಮ ದೇಶದಲ್ಲಿ ನೆಲೆ ಇಲ್ಲದೆ, ಇತ್ತ ಬೇರೆ ದೇಶದಲ್ಲಿ ನೆಲೆಯೂ ಸಿಗದೆ ಮ್ಯಾನ್ಮಾರ್ ಜನರು ಅಕ್ಷರಶಃ ಅನಾಥರಾಗಿದ್ದಾರೆ. ಅದರಲ್ಲೂ ಅಲ್ಲಿನ ಪೊಲೀಸ್ ಅಧಿಕಾರಿಗಳು ಮಿಲಿಟರಿ ದೌರ್ಜನ್ಯ ಸಹಿಸದೆ ಈಗಾಗಲೇ ಭಾರತಕ್ಕೆ ಓಡಿ ಬಂದಿದ್ದಾರೆ.

ಪೊಲೀಸರನ್ನು ವಾಪಸ್ ಕಳಿಸಿ..!
ಕೆಲ ದಿನಗಳ ಹಿಂದೆ ಭಾರತಕ್ಕೆ ಓಡಿ ಬಂದಿರುವ ಮ್ಯಾನ್ಮಾರ್ ಪೊಲೀಸರನ್ನು ವಶಕ್ಕೆ ನೀಡಿ ಎಂದು ಒತ್ತಾಯಿಸಿ ಮ್ಯಾನ್ಮಾರ್ ಪತ್ರ ಬರೆದಿತ್ತು. ಉಭಯ ರಾಷ್ಟ್ರಗಳ ಸಂಬಂಧ ಮುಂದುವರಿಯಲು ಪೊಲೀಸ್ ಅಧಿಕಾರಿಗಳನ್ನು ಮ್ಯಾನ್ಮಾರ್‌ಗೆ ಹಸ್ತಾಂತರಿಸಿ ಅಂತಾ ಮಿಜೋರಾಂ ರಾಜ್ಯದ ಚಂಪೈ ಜಿಲ್ಲೆಯ ಉಪ ಆಯುಕ್ತೆಗೆ ಮ್ಯಾನ್ಮಾರ್‌ನ ಅಧಿಕಾರಿಗಳು ಪತ್ರ ಬರೆದಿದ್ದರು. ಪತ್ರ ಬರೆದ ಕೆಲವೇ ದಿನದಲ್ಲಿ ಆಘಾತಕಾರಿ ಅಂಶ ಬಯಲಾಗಿದೆ. ಭಾರತಕ್ಕೆ ಓಡಿ ಬಂದಿರುವ ಮ್ಯಾನ್ಮಾರ್ ಪೊಲೀಸರು ಅಲ್ಲಿನ ಭಯಾನಕ ಸ್ಥಿತಿಯನ್ನ ಬಿಡಿಸಿಟ್ಟಿದ್ದಾರೆ. ಮ್ಯಾನ್ಮಾರ್ ಜನರ ಸದ್ಯದ ಪರಿಸ್ಥಿತಿ ಹಾಗೂ ಹಿಂಸೆಯ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ್ದಾರೆ.

450ಕ್ಕೂ ಹೆಚ್ಚು ಹೋರಾಟಗಾರರು ಬಲಿ..?
ಈಗಾಗಲೇ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 450ಕ್ಕೂ ಹೆಚ್ಚು ಜನರನ್ನು ಮ್ಯಾನ್ಮಾರ್ ಸೇನೆ ಬಲಿಪಡೆದಿರುವ ಆರೋಪವಿದೆ. ಹೀಗಾಗಿ ನಾಗರಿಕರನ್ನ ಕೊಂದು ಹಾಕಿರುವ ಮ್ಯಾನ್ಮಾರ್ ಸೇನೆ ವಿರುದ್ಧ ಜಗತ್ತಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರಜಾಪ್ರಭುತ್ವವಾದಿ ರಾಷ್ಟ್ರಗಳು ಮ್ಯಾನ್ಮಾರ್ ಮಿಲಿಟರಿ ಕ್ರಮವನ್ನು ಟೀಕಿಸಿವೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅಲ್ಲಿನ ಸೇನಾಧಿಕಾರಿಗಳು, ಪ್ರತಿಭಟನೆ ನಡೆಸುತ್ತಿರುವ ಜನರ ನಿಯಂತ್ರಣ ಹಾಗೂ ಹೋರಾಟಗಾರನ್ನು ಚದುರಿಸಲು ಬಲಪ್ರಯೋಗ ಮಾಡುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಹಲವರು ಸಾವು, ಬದುಕಿನ ಮಧ್ಯೆ ಹೋರಾಡುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಆವರಿಸಿದೆ.

ಚುನಾವಣೆಯಲ್ಲಿ ಅಕ್ರಮ ನಡೆದಿತ್ತಾ..?
ಮ್ಯಾನ್ಮಾರ್‌ನಲ್ಲಿ 2020ರ ನವೆಂಬರ್‌ನಲ್ಲಿ ಚುನಾವಣೆ ನಡೆದಿತ್ತು. 75 ವರ್ಷದ ಸೂಕಿ ನೇತೃತ್ವದಲ್ಲಿ ಅವರ ಪಕ್ಷ ಭರ್ಜರಿ ಗೆಲುವು ಸಾಧಿಸಿತ್ತು. ಚುನಾವಣೆಯಲ್ಲಿ ಮ್ಯಾನ್ಮಾರ್ ಸಂಸತ್ತಿನ 642 ಸ್ಥಾನಗಳ ಪೈಕಿ ಸೂಕಿ ನೇತೃತ್ವದ ಎನ್‌ಎಲ್‌ಡಿ ಪಕ್ಷ 396 ಸ್ಥಾನ ಪಡೆದಿತ್ತು. ಅಂದಹಾಗೆ ಪ್ರಜಾಪ್ರಭುತ್ವದ ಪರ ಗಟ್ಟಿಯಾಗಿ ನಿಂತು ಹೋರಾಟ ನಡೆಸಿದ್ದವರು ಆಂಗ್ ಸಾನ್ ಸೂಕಿ. ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತ ವಿರುದ್ಧ ಸತತ ಹೋರಾಟ ನಡೆಸಿದ್ದ ಸೂಕಿಗೆ ಇದೀಗ ಹಿನ್ನಡೆಯಾಗಿದೆ. ಸೂಕಿ ಬಂಧನ ಹಲವು ಅನುಮಾನಗಳಿಗೂ ಕಾರಣವಾಗಿದೆ.

ಗಲ್ಲಿಗೂ ನುಗ್ಗಿದೆ ಮ್ಯಾನ್ಮಾರ್ ಸೇನೆ..!
ಸೇನಾ ಕ್ರಾಂತಿ ಪರ ಹಾಗೂ ವಿರುದ್ಧವಾಗಿ ಹೋರಾಟಗಳು ಭುಗಿಲೆದ್ದಿರುವುದು ಮ್ಯಾನ್ಮಾರ್‌ನ ತತ್ತರಿಸುವಂತೆ ಮಾಡಿದೆ. ಆದರೆ ಇದನ್ನ ನೋಡಿ ತಣ್ಣಗೆ ಕೂರೋಕೆ ಮ್ಯಾನ್ಮಾರ್ ಈಗ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿಲ್ಲ. ಮೇಲಾಗಿ ಅಲ್ಲೊಂದು ಸರ್ಕಾರವೇ ಇಲ್ಲ. ಎಲ್ಲವನ್ನೂ ಸೇನಾಧಿಕಾರಿಗಳು ಬಿಗಿ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ಪ್ರತಿಭಟನೆ ಮತ್ತು ಹೋರಾಟ ಹತ್ತಿಕ್ಕಲು ಮ್ಯಾನ್ಮಾರ್‌ನ ಸೇನೆ ಗಲ್ಲಿ ಗಲ್ಲಿಗಳಿಗೂ ಎಂಟ್ರಿ ಕೊಟ್ಟಿದೆ. ಭಾರಿ ಪ್ರಮಾಣದ ಯುದ್ಧ ಪರಿಕರಗಳನ್ನ ತೋರಿಸಿ ಜನರನ್ನ ಬೆದರಿಸುವ ತಂತ್ರ ಅನುಸರಿಸುತ್ತಿದೆ. ಆದರೂ ಜನ ಭಯಪಡದೆ ಹೋರಾಟಕ್ಕೆ ಸಾಥ್ ನೀಡುತ್ತಿದ್ದಾರೆ.












Click it and Unblock the Notifications