ಕಂದಹಾರ್, ಲಷ್ಕರ್ ಗಾಹ್ ತಾಲಿಬಾನ್ ವಶ: ಹೆಚ್ಚಿದ ಅಫ್ಘಾನ್ ಸರ್ಕಾರ ಪತನ ಭೀತಿ
ಕಾಬೂಲ್, ಆ. 13: ತಾಲಿಬಾನ್ ಅಫ್ಘಾನಿಸ್ತಾನದ ಎರಡು ನಗರಗಳಾದ ಕಂದಹಾರ್ ಮತ್ತು ಲಷ್ಕರ್ ಗಾಹ್ ಅನ್ನು ವಶಪಡಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದು, ಇದು ಸರ್ಕಾರದ ಪತನದ ಭೀತಿಯನ್ನು ಇನ್ನಷ್ಟು ಹೆಚ್ಚಿಸಿದೆ. ಬಂಡುಕೋರರ ಈ ಹೇಳಿಕೆಯನ್ನು ದೃಢ ಪಡಿಸಿದ ಅಫ್ಘಾನಿಸ್ತಾನದ ಭದ್ರತಾ ಮೂಲವು ದಕ್ಷಿಣದ ಪ್ರಮುಖ ನಗರವಾದ ಲಷ್ಕರ್ ಗಾಹ್ ಕೂಡ ತಾಲಿಬಾನ್ ವಶಕ್ಕೆ ಪಡೆದುಕೊಂಡಿದೆ ಶುಕ್ರವಾರ ಸುದ್ದಿಸಂಸ್ಥೆ ಎಎಫ್‌ಪಿಗೆ ತಿಳಿಸಿದೆ.
ಅಫ್ಘಾನ್ ಪಡೆಗಳು ದೇಶದ ಮೂರನೇ ಅತಿದೊಡ್ಡ ನಗರವಾದ ಹೆರಾತ್ ಅನ್ನು ಬಂಡುಕೋರರಿಗೆ ಬಿಟ್ಟುಕೊಟ್ಟ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ. ತಾಲಿಬಾನ್ ಹೆರಾತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಂಡಿದ್ದಾರೆ ಮತ್ತು ವಿಮಾನ ನಿಲ್ದಾಣದಲ್ಲಿರುವ ಎಲ್ಲಾ ಸಿಬ್ಬಂದಿ ಶರಣಾಗಿದ್ದಾರೆ ಎಂದು ಕೂಡಾ ಹೇಳಿದೆ.
ತಾಲಿಬಾನ್ ಮೂರನೇ ಅತಿದೊಡ್ಡ ನಗರವಾದ ಹೆರಾತ್ ಅನ್ನು ವಶಕ್ಕೆ ಪಡೆದ ಬಳಿಕ ಅಫ್ಘಾನಿಸ್ತಾನದ ಎರಡನೇ ದೊಡ್ಡ ನಗರ ಕಂದಹಾರ್ ಅನ್ನು ವಶಪಡಿಸಿಕೊಂಡಿದೆ ಎಂದು ಹೇಳಿತ್ತು. ದೇಶದ ಎರಡನೇ ಮತ್ತು ಮೂರನೇ ದೊಡ್ಡ ನಗರಗಳಾದ ಕಂದಹಾರ್ ಮತ್ತು ಹೆರಾತ್ ಅನ್ನು ವಶಪಡಿಸಿಕೊಳ್ಳುವುದು ತಾಲಿಬಾನ್‌ಗೆ ಎರಡು ಮಹತ್ವದ ವಿಜಯ ಲಭಿಸಿದೆ ಎಂಬ ಪ್ರತೀಕವಾಗಿದೆ. ಈ ಹಿನ್ನೆಲೆ ಅಫ್ಘಾನ್ ಸರ್ಕಾರವೇ ಪತನವವಾಗುವ ಭೀತಿ ಎದುರಾಗಿದೆ.

ತಾಲಿಬಾನ್ ಜೊತೆ ಒಪ್ಪಂದದ ಮೂಲಕ ವಾಷಿಂಗ್ಟನ್ ತನ್ನ ಸೇನೆಯನ್ನು ಅಫ್ಘಾನಿಸ್ತಾನದಿಂದ ಹಿಂದಕ್ಕೆ ಪಡೆದುಕೊಂಡಿದೆ. ಆದರೆ ಅಮೆರಿಕ ಸೇನೆ ಅಫ್ಘಾನ್ ನೆಲ ತೊರೆಯುತ್ತಿದ್ದಂತೆ ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ತನ್ನ ದಾಳಿಯನ್ನು ಆರಂಭಿಸಿದೆ. ಈ ಮೂಲಕ ಒಪ್ಪಂದವನ್ನು ಮುರಿದಿದೆ. ಹಾಗೆಯೇ ಮೇ ತಿಂಗಳಿನಿಂದ ಆರಂಭವಾದ ಈ ದಾಳಿಯಲ್ಲಿ ತಾಲಿಬಾನ್ ಉಗ್ರರು ಬಹುತೇಕ ಪ್ರಮುಖ ಪ್ರದೇಶಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಮುಖ್ಯವಾಗಿ ದೇಶದ ಅತೀ ದೊಡ್ಡ ನಗರಗಳನ್ನು ವಶಕ್ಕೆ ಪಡೆದಿದೆ. ಹಾಗೆಯೇ ರಾಷ್ಟ್ರ ರಾಜಧಾನಿ ಕಾಬೂಲ್‌ನ ಸಮೀಪದಲ್ಲಿರುವ ಜಿಲ್ಲೆಯೂ ಕೂಡಾ ತಾಲಿಬಾನ್ ಸೆರೆಯಾಗಿದೆ.
ಕಳೆದ ವಾರದಲ್ಲಿ ಅಫ್ಘಾನಿಸ್ತಾನದ ಉತ್ತರ, ದಕ್ಷಿಣ ಮತ್ತು ಪಶ್ಚಿಮದ ಹೆಚ್ಚಿನ ಭಾಗವನ್ನು ಸರ್ಕಾರವು ಪರಿಣಾಮಕಾರಿಯಾಗಿ ಕಳೆದುಕೊಂಡಿದೆ, ಮತ್ತು ರಾಜಧಾನಿ ಮತ್ತು ಹಲವು ಪ್ರಮುಖ ನಗರಗಳು ಈಗ ಅಪಾಯಕಾರಿಯಾಗಿ ಹಂತದಲ್ಲಿದೆ. ಗುರುವಾರ, ತಾಲಿಬಾನ್ ಐತಿಹಾಸಿಕ ಕೇಂದ್ರ ನಗರವಾದ ಘಜ್ನಿಯನ್ನು ವಶಪಡಿಸಿಕೊಂಡಿದೆ. ಪಶ್ಚಿಮದಲ್ಲಿ ಹೆರಾತ್ ಮತ್ತು ದಕ್ಷಿಣದಲ್ಲಿ ಕಂದಹಾರ್ ಅನ್ನು ಆಕ್ರಮಿಸುವ ಮೊದಲು ಕಾಬೂಲ್‌ನ ನೈಋತ್ಯ ದಿಕ್ಕಿನಲ್ಲಿ 150 ಕಿಮೀ (90 ಮೈಲಿ) ದೂರದ ಕೇಂದ್ರ ನಗರವಾದ ಘಜ್ನಿಯನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡಿದೆ. ವಾಯುವ್ಯದಲ್ಲಿ ಖಾಲಾ-ಇ-ನಾವ್ ಅನ್ನು ವಶಪಡಿಸಿಕೊಂಡಿರುವುದಾಗಿ ತಾಲಿಬಾನ್ ಹೇಳಿಕೊಂಡಿದೆ.
ಸರ್ಕಾರವು ಈಗಲೂ ಉತ್ತರದ ಮುಖ್ಯ ನಗರವಾದ ಮಜರ್ -ಇ -ಷರೀಫ್ ಮತ್ತು ಪೂರ್ವದಲ್ಲಿ ಪಾಕಿಸ್ತಾನದ ಗಡಿಯ ಸಮೀಪದಲ್ಲಿರುವ ಜಲಾಲಾಬಾದ್ ಹಾಗೂ ಕಾಬೂಲ್ ಅನ್ನು ಹೊಂದಿದೆ. ಬುಧವಾರ, ತಾಲಿಬಾನ್ ಕಾಬೂಲ್ ಅನ್ನು 30 ದಿನಗಳಲ್ಲಿ ಪ್ರತ್ಯೇಕಿಸಬಹುದು ಮತ್ತು ಅದನ್ನು 90 ರೊಳಗೆ ವಶಪಡಿಸಿಕೊಳ್ಳಬಹುದು ಎಂದು ಯುಎಸ್ ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಫ್ಘಾನ್ ರಾಯಭಾರ ಸಿಬ್ಬಂದಿಯನ್ನು ಸ್ಥಳಾಂತರಿಸಲಿದೆ ಯುಎಸ್
ತಾಲಿಬಾನ್ ಹೆಚ್ಚು ಪ್ರದೇಶವನ್ನು ವ್ಯಾಪಿಸಿದಂತೆ, ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್ ರಾಜಧಾನಿಯಿಂದ ತಮ್ಮ ರಾಯಭಾರ ಸಿಬ್ಬಂದಿಯನ್ನು ತ್ವರಿತವಾಗಿ ಹಿಂದಕ್ಕೆ ಕರೆಸಿಕೊಳ್ಳಲು ಮುಂದಾಗಿದೆ. ಕಾಬೂಲ್‌ನಿಂದ ರಾಯಭಾರ ಸಿಬ್ಬಂದಿಯನ್ನು ಸ್ಥಳಾಂತರಿಸಲು ಸೈನ್ಯವನ್ನು ಕಳುಹಿಸುವುದಾಗಿ ಅಮೆರಿಕ ಹೇಳಿದೆ. "ಕಾಬೂಲ್‌ನಲ್ಲಿ ನಮ್ಮ ನಾಗರಿಕ ಹೆಜ್ಜೆಗುರುತನ್ನು ನಾವು ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಡಿಮೆಗೊಳಿಸುತ್ತಿದ್ದೇವೆ," ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಸುದ್ದಿಗಾರರಿಗೆ ತಿಳಿಸಿದರು, ಆದರೆ ರಾಯಭಾರ ಕಚೇರಿ ತೆರೆದಿರುತ್ತದೆ ಎಂದು ಹೇಳಿದ್ದಾರೆ.
''ಮುಂದಿನ 24 ರಿಂದ 48 ಗಂಟೆಗಳಲ್ಲಿ 3,000 ಯುಎಸ್ ಸೈನಿಕರನ್ನು ಕಾಬೂಲ್‌ಗೆ ನಿಯೋಜಿಸಲಾಗುವುದು,'' ಎಂದು ಪೆಂಟಗನ್ ಹೇಳಿದೆ. ''ತಾಲಿಬಾನ್ ಮೇಲಿನ ದಾಳಿಗಳಿಗೆ ಆ ಸೈನಿಕರನ್ನು ಬಳಸಲಾಗುವುದಿಲ್ಲ,'' ಎಂದು ಇದೇ ಸಂದರ್ಭ ಒತ್ತಿ ಹೇಳಿದೆ. ಯುಕೆ ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್ ತನ್ನ ಪ್ರಜೆಗಳನ್ನು ಸ್ಥಳಾಂತರಿಸಲು ಲಂಡನ್ ತನ್ನದೇ ಆದ 600 ಸೈನಿಕರನ್ನು ಕಳುಹಿಸುತ್ತದೆ ಮತ್ತು "ನಮ್ಮೊಂದಿಗೆ ಸೇವೆ ಸಲ್ಲಿಸುವ ತಮ್ಮ ಜೀವವನ್ನು ಪಣಕ್ಕಿಟ್ಟ ಅಫ್ಘಾನ್ ಸಿಬ್ಬಂದಿಯನ್ನು ಸ್ಥಳಾಂತರಿಸಲು ಬೆಂಬಲಿಸುತ್ತದೆ," ಎಂದು ಹೇಳಿದರು. ''ಅಫ್ಘಾನ್ ಭಾಷಾಂತರಕಾರರನ್ನು ಮತ್ತು ಅಮೆರಿಕನ್ನರಿಗೆ ಸಹಾಯ ಮಾಡಿದ ಇತರರನ್ನು ಸ್ಥಳಾಂತರಿಸಲು ಯುನೈಟೆಡ್ ಸ್ಟೇಟ್ಸ್ ದೈನಂದಿನ ವಿಮಾನಗಳನ್ನು ಕಳುಹಿಸಲು ಪ್ರಾರಂಭಿಸುತ್ತದೆ ಮತ್ತು ತಾಲಿಬಾನ್‌ಗಳ ವ್ಯಾಪಕ ದಾಳಿಯಿಂದಾಗಿ ಜೀವಕ್ಕೆ ಭಯವಿದೆ,'' ಎಂದು ಪ್ರೈಸ್ ಹೇಳಿದರು.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications