ಅನಾಥ ಪ್ರಾಣಿಗಾಗಿ 100 ಗಂಟೆ ಕತೆ ಓದಿ ದಾಖಲೆ ಬರೆದ 11ರ ಬಾಲಕ : ಮೂಕ ಪ್ರಾಣಿಗಳ ಮಾನಸಿಕ ಒತ್ತಡ ಕಡಿಮೆ ಮಾಡುವುದಿವನ ಗುರಿ
11 ವರ್ಷದ ಮಕ್ಕಳನ್ನು ಸಾಮಾನ್ಯವಾಗಿ ಊಹಿಸಿಕೊಂಡರೆ ಮೊಬೈಲ್, ಟ್ಯಾಬ್ ಅಥವಾ ಟಿವಿ ಮುಂದೆ ಕೂರುವ ಚಿತ್ರವೇ ನಮ್ಮ ಕಣ್ಣಿಗೆ ಬರುತ್ತೆ. ದಿನದಲ್ಲಿ ಸ್ವಲ್ಪ ಸಮಯ ಸಿಕ್ಕರೂ ಸಾಕು ಮಕ್ಕಳು ಅಪ್ಪ ಅಮ್ಮನ ಮೊಬೈಲ್‌ಗಾಗಿ ಹುಡುಕುತ್ತಿರುತ್ತಾರೆ. ರೀಲ್ಸ್, ಶಾರ್ಟ್ಸ್, ವಿಡಿಯೋಗಳು ಮುಗಿಯದ ಕಥೆ. ಪುಸ್ತಕಗಳನ್ನು ಓದುವ ಅಭ್ಯಾಸ ನೊದಲು ಮಕ್ಕಳಿಗಿತ್ತು. ಆದರೆ ಈಗ ತಮಗೆ ಯಾವುದಾದರೂ ವಿಷಯದ ಬಗ್ಗೆ ಡೌಟ್ ಬಂದರೆ ಸಾಕು ಅದಕ್ಕೂ ಮೊಬೈಲ್ ತೆಗೆದು ಗೂಗಲ್ ಒತ್ತುತ್ತಾರೆ. ಆದ್ರೆ ಇಲ್ಲೊಬ್ಬ ಹುಡುಗ ಇದಕ್ಕೆಲ್ಲಾ ಅಪವಾದ ಎನ್ನುವಂತೆ ಇದ್ದಾನೆ.
ಅನಾಥ ಪ್ರಾಣಿಗಳಿಗಾಗಿ ಕತೆ ಓದುವ ಹುಡುಗ :
ದಯೆ ಕರುಣೆಯನ್ನೇ ಮೈಗೂಡಿಸಿಕೊಂಡ ಬಾಲಕ ಈತ. ಅಮೆರಿಕದ ಜಾಕ್ಸನ್‌ವಿಲ್ಲೆಯ 11 ವರ್ಷದ ಈ ಹುಡುಗನ ಹೆಸರು ನೆಹಮಯ್ ಟರ್ನರ್. ಈಗಿನ ಕಾಲದಲ್ಲಿ ನಿಮಗಾಗಿ ಕತೆ ಪುಸ್ತಕಗಳನ್ನು ಓದಿ ಎಂದು ಮಕ್ಕಳ ಕೈಗೆ ಪುಸ್ತಕ ಕೊಟ್ಟರೆ ಓದುವುದು ಅಷ್ಟರಲ್ಲಿಯೇ ಇದೆ. ಅಂಥದರಲ್ಲಿ ಈ ಹುಡುಗ ಅನಾಥ ಪ್ರಾಣಿಗಳ ಮುಂದೆ ಕಥೆಗಳನ್ನು ಓದುತ್ತಾನೆ. ಹೀಗೆ ಓದುತ್ತಲೇ ಆವುಗಳ ಜೀವನದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣನಾಗಿದ್ದಾನೆ.ತಮ್ಮ ಮನೆ, ಯಜಮಾನರನ್ನು ಬಿಟ್ಟು ಅನಾಥಾಶ್ರಮ ಪಾಲಾದ ಸಾಕು ಪ್ರಾಣಿಗಳು ಮನುಷ್ಯರಂತೆಯೇ ಮಾನಸಿಕವಾಗಿ ಬಳಲುತ್ತವೆ. ಅವಕ್ಕೂ ನೋವು ದುಃಖಗಳಿರುತ್ತವೆ. ಹೀಗಿರುವಾಗ ಕತೆ ಓದಿಯೇ ಈ ಅನಾಥ ಪ್ರಾಣಿಗಳ ಒತ್ತಡ ಕಡಿಮೆ ಮಾಡುವುದರಲ್ಲಿ ನೆಹಮಯ್ ಟರ್ನರ್ ಸಾಕಷ್ಟು ಯಶಸ್ಸು ಸಾಧಿಸಿದ್ಧಾನೆ.
ಕತೆ ಓದುವುದರಲ್ಲಿಯೇ ಸಾಧನೆ :
ದಿನವೂ ಅಜ್ಜಿ ಜೊತೆ ಶೆಲ್ಟರ್ ಹೋಂಗಳಿಗೆ ಹೋಗಿ ಪ್ರಾಣಿಗಳ ಮುಂದೆ ಕಥೆ ಓದುವುದು ನೆಹಮಯ್ ಟರ್ನರ್ ಅಭ್ಯಾಸ. ಹೀಗೆ ಓದ್ತಾ ಓದ್ತಾ ಪ್ರಾಣಿಗಳ ಮುಂದೆ 100 ಗಂಟೆ ಪುಸ್ತಕ ಮೂಲಕ ಕಥೆ ಓದಿ ಹೇಳಿದ ವಿಶ್ವದ ಮೊದಲ ಬಾಲಕ ಎನ್ನುವ ಗರಿಮೆ ಇವನದ್ದು. ಮಾನಸಿಕವಾಗಿ ತುಂಬಾ ಗಲಿಬಿಲಿಯಲ್ಲಿದ್ದ ಮೂಕ ಪ್ರಾಣಿಗಳಲ್ಲಿ ಒಂದು ಉಲ್ಲಾಸಿತ ವಾತಾವರಣ ಉಂಟುಮಾಡುವಲ್ಲಿ ಟರ್ನರ್ ಪ್ರಯತ್ನ ದೊಡ್ಡದು. ಈ ಮೂಲಕ ಆತ ಅನಾಥಶ್ರಮದಲ್ಲಿರುವ ಹಲವು ಪ್ರಾಣಿಗಳೊಂದಿಗೆ ಉತ್ತಮ ಸಂಪರ್ಕ ಸಾಧಿಸಿದ್ದಾನೆ.
ಹೆಮಿಯಾ ಮೊಟ್ಟ ಮೊದಲು ಒಂದು ನಾಯಿಗೆ ಕತೆ ಓದಿದ್ದ. ಆ ನಾಯಿ ಹೆಸರು ಆಗ್ಗಿ. ಆ ಅನುಭವವು ಹೆಮಿಯಾ ಮೇಲೆ ಎಷ್ಟು ಪ್ರಭಾವ ಬೀರಿತ್ತು ಎಂದರೆ ಶೆಲ್ಟರ್ ಹೋನಿಂದ ಹೊರ ಬರುವುದೇ ಅವನಿಗೆ ಕಷ್ಟವಾಗಿತ್ತು. ಆ ಕ್ಷಣದಿಂದ, ಪದೇ ಪದೇ ಅಲ್ಲಿಗೆ ಹೋಗುತ್ತಿದ್ದ. ಹೀಗೆ ಕತೆ ಓದುತ್ತಾ ಓದುತ್ತಾ ಮುಂದಿನ ಎರಡು ವರ್ಷಗಳಲ್ಲಿ, ಅನೇಕ ಪ್ರಾಣಿಗಳ ಜೊತೆ ಕನೆಕ್ಟ್ ಆಗುತ್ತಾನೆ.
ನಾಯಿಗಳಿಗೆ ತನ್ನ ಸ್ವರದ ಮೂಲಕವೇ ಧೈರ್ಯ :
ಹಾಪರ್ ಎನ್ನುವ ನಾಯಿ ಈ ಆಶ್ರಮದಲ್ಲಿ ಸುಮಾರು 400 ದಿನಗಳನ್ನು ಕಳೆದಿದೆ. ಈ ಹಾಪರ್‌ಗಾಗಿ ಹೆಮಿಯಾ ಪ್ರತಿ ಬಾರಿ ಕತೆಗಳನ್ನು ಓದುತ್ತಿದ್ದ. ಹಾಪರ್ ತನ್ನ ಮನೆಯವರು ಬರುತ್ತಾರೆ ತನ್ನನ್ನು ಕರೆದುಕೊಂಡು ಹೋಗುತ್ತಾರೆ ಎಂದು ಕಾಯುತ್ತಲೇ ಇತ್ತು. ಹೀಗಿರುವಾಗ ದಿನಾ ಅವನಿಗೆ ಪರಿಚಿತ ದನಿಯಲ್ಲಿ ಕತೆ ಓದುತ್ತಿದ್ದರೆ, ಹಾಪರ್‌ನಿಗೂ ಧೈರ್ಯ ಬರುತ್ತದೆ ಎಂದು ಹೀಗೆ ಮಾಡುತ್ತಿದ್ದ. ಹಾಪರ್‌ನನ್ನು ಒಂದು ಕುಟುಂಬ ಬಂದು ದತ್ತು ಪಡೆಯುವವರೆಗೂ ಇದೇ ಮುಂದುವರಿದಿತ್ತು.
ಪುಸ್ತಕ ಓದುವುದರಿಂದ ಪ್ರಾಣಿಗಳ ಮೇಲಾಗುವ ಪರಿಣಾಮ :
ಯುನೈಟೆಡ್ ಸ್ಟೇಟ್ಸ್‌ನಲ್ಲಿ ಶೆಲ್ಟರ್ ಹೋಂನಲ್ಲಿರುವ ನಾಯಿಗಳಿಗಾಗಿ ಕತೆಗಳನ್ನು ಓದುವುದು ಹೆಚ್ಚು ಜನಪ್ರಿಯ. ಇಲ್ಲಿಗೆ ಬರುವ ತುಂಬಾ ಪ್ರಾಣಿಗಳು ಭಯಭೀತವಾಗಿರುತ್ತದೆ. ಮನುಷ್ಯರ ನಡುವೆ ಇದ್ದ ಪ್ರಾಣಿಗಳು ಒಂದೇ ಸಮನೆ ಮನುಷ್ಯರ ಓಡಾಟ ಲಿಮಿಟ್‌ನಲ್ಲಿರುವ ಜಾಗಕ್ಕೆ ಬಂದಾಗ ಆ ಪ್ರಾಣಿಗಳ ಮಾನಸಿಕ ಒತ್ತಡವೂ ಸಹಜವಾಗಿಯೇ ಹೆಚ್ಚುತ್ತದೆ. ಹೀಗಿರುವಾಗ ಶಾಂತ ಧ್ವನಿಯನ್ನು ಕೇಳುವುದರಿಂದ ಅವುಗಳ ಮನಸ್ಸೂ ಸಮಾಧಾನವಾಗುತ್ತದೆ. ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ. ಈ ಕತೆ ಓದುವುದರಿಂದ ಪ್ರಾಣಿಗಳ ಮೇಲಾಗುವ ದೀರ್ಘಕಾಲೀನ ಪರಿಣಾಮಗಳ ಕುರಿತು ಇನ್ನೂ ಸಂಶೋಧನೆಗಳಾಗುತ್ತಿವೆ. ಆದರೂ, ನೆಹೆಮಿಯಾ ಉದ್ದೇಶ ತುಂಬಾ ಸಿಂಪಲ್. ಅವನು ಓದುವ ಪ್ರತಿಯೊಂದು ಕಥೆಯೂ ಪ್ರಾಣಿಗೆ ಸುರಕ್ಷಿತವಾಗಿರುವಂತೆ ಮಾಡುತ್ತದೆ. ಆ ಪ್ರಾಣಿಗಳು ತಮ್ಮನ್ನು ಪ್ರೀತಿಸುವ ಶಾಶ್ವತ ಮನೆಯನ್ನು ಕಂಡು ಕೊಳ್ಳುವ ಸಾಧ್ಯತೆಗಳನ್ನು ಹೆಚ್ಚಿಸಲಿ ಎನ್ನುವ ಗುರಿ ಅವನದ್ದು.
ಸತತ ಎರಡು ವರ್ಷಗಳ ಶ್ರಮ :
ಈ 11 ವರ್ಷದ ಬಾಲಕ 100 ಗಂಟೆಗಳ ಕಾಲ ಈ ಪ್ರಾಣಿಗಳ ಎದುರು ಪುಸ್ತಕಗಳನ್ನು ಓದಲು ಎರಡು ವರ್ಷಗಳ ಕಾಲ ಹಿಡಿದಿದೆ. ಈ ಸಾಧನೆಯನ್ನು ಗುರುತಿಸುವ ಸಲುವಾಗಿ ಜಾಕ್ಸನ್‌ವಿಲ್ಲೆ ಹ್ಯೂಮನ್ ಸೊಸೈಟಿಯು ನೆಹೆಮಿಯಾ ಅವರಿಗೆ ಬ್ಯಾಡ್ಜ್ ಅನ್ನು ನೀಡಿದೆ. ಶೆಲ್ಟರ್ ಹೋಂನವರು ಈ ಬಾಲಕ ಪ್ರತಿ ಬಾರಿ ಬಂದಾಗಲೂ ಪ್ರಾಣಿಗಳಿಗೆ ತೋರಿಸಿದ ಕರುಣೆಯನ್ನೂ ಶ್ಲಾಘಿಸಿದರು. ಪ್ರಾಣಿಗಳಿಗಾಗಿ ಕತೆ ಓದುವ ಮೂಲಕ ಇತಿಹಾಸ ಬರೆದರೂ ನೆಹೆಮಿಯಾ ಇನ್ನೂ ಶೆಲ್ಟರ್ ಹೋಂಗೆ ಭೇಟಿ ನೀಡುವುದನ್ನು ನಿಲ್ಲಿಸಿಲ್ಲ. ಈಗಾಗಲೇ 110 ಗಂಟೆಗಳನ್ನು ಪೂರೈಸಿರುವ ಈತ ಮುಂದೆ 200 ಗಂಟೆಗಳ ಗುರಿ ತಲುಪಬೇಕು ಅಂದುಕೊಡಿದ್ದಾನೆ.

ಮೂಕ ಪ್ರಾಣಿಗಳ ಮೇಲೆ ಕರುಣೆ, ದಯೆ ತೋರಿಸಲು ವಯಸ್ಸಿನ ಮಿತಿ ಎಲ್ಲಿ? ಸಣ್ಣ ವಯಸ್ಸಿನಲ್ಲಿಯೇ ಈ ಭಾವವನ್ನು ಬಿತ್ತಬಹುದು. ಈ ದಯೆ, ಕರುಣೆ ಎನ್ನುವುದು ಕೇವಲ ಮನುಷ್ಯನಿಗೆ ಮಾತ್ರವಲ್ಲ, ಮೂಕ ಪ್ರಾಣಿಗಳೂ ಬಯಸುತ್ತವೆ ಎಂಬುವುದು ನೆನಪಿರಲಿ.


Click it and Unblock the Notifications
