ಹಾವಿಗೂ ಇತ್ತಾ ನಾಲ್ಕು ಕಾಲು? ಇದ್ದಕ್ಕಿದ್ದಂತೆ ಮಾಯವಾಗಿದ್ದು ಹೇಗೆ? ವಿಜ್ಞಾನ ಲೋಕದ ಕುತೂಹಲಕ್ಕೆ ಸಿಕ್ತು ಸಾಕ್ಷಿ
ಹಾವು ಅಂದ ಕೂಡಲೇ ನಮ್ಮ ಕಣ್ಣೆದುರಿಗೆ ಬರುವುದು ತೆವಳಿಕೊಂಡು ಹೋಗುವ ಜೀವಿ. ಕಾಲಿಲ್ಲಿದ ಹಾವು ನೆಲದ ಮೇಲೆ ತೆವಳುತ್ತದೆ. ಹಾವನ್ನು ನಾವು ನೋಡಿರುವುದು ಕೂಡಾ ಹೀಗೆಯೇ. ಆದರೆ ಅಸಲಿಗೆ ಹಾವುಗಳಿಗೆ ಕಾಲಿತ್ತು. ಅದಕ್ಕೆ ಸಾಕ್ಯೂ ಇದೆ. ಅಯ್ಯೋ, ಇದೆಂಥ ವಿಚಿತ್ರ, ಹಾಗಾದ್ರೆ ನಾವಿಷ್ಟು ದಿನ ನೋಡಿದ್ದು ಸಳ್ಳಾ? ಹೌದು, ಒಂದಾನೊಂದು ಕಾಲದಲ್ಲಿ ಹಾವುಗಳೂ ತಮ್ಮ ಕಾಲುಗಳ ಸಹಾಯದಿಂದಲೇ ಚಲಿಸುತ್ತಿತ್ತು. ಆದರೆ ಕ್ರಮೇಣ ಹಾವಿನ ಕಾಲು ಮಾಯವಾಗುತ್ತಾ ಬಂತು. ಅದು ಕಾಲಿಲ್ಲದೇ ತೆವಳಲು ಶುರು ಮಾಡಿದವು. ಇನ್ನೊಂದು ವಿಚಾರ ಅಂದರೆ ಇವತ್ತಿಗೂ ಕೆಲವೊಂದು ಹಾವುಗಳಲ್ಲಿ ಕಾಲು ಇದೆಯಂತೆ. ಆ ಕಾಲುಗಳು ಹಾವಿನ ಬಾಲದ ಕೆಳಗೆ ಮುಚ್ಚಿಕೊಂಡಿರುತ್ತಂತೆ.
ಸರಿ ಸುಮಾರು 170 ಮಿಲಿಯನ್ ವರ್ಷಗಳ ಹಿಂದೆ ನಾಗರಹಾವು,ಹೆಬ್ಬಾವು ಸೇರಿ ಎಲ್ಲಾ ಹಾವುಗಳಿಗೂ ಕಾಲುಗಳಿದ್ದವಂತೆ. ಹಾವುಗಳೂ ನಾಲ್ಕು ಕಾಲುಗಳ ಮೇಲೆ ನಡೆದಾಡಿಕೊಂಡೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುತ್ತಿತ್ತು. ಆದರೆ ಕಾಲ ಕಳೀತಾ ಇದ್ದ ಹಾಗೆ ಈ ಹಾವುಗಳು ಕಾಲುಗಳನ್ನು ಬಳಸುವುದನ್ನೇ ನಿಲ್ಲಿಸಿ ಬಿಟ್ಟಿತು. ಕ್ರಮೇಣ ಹಾವಿನ ದೇಹದಲ್ಲಿ ಕಾಲೇ ಮಾಯವಾಯಿತಂತೆ.
Snakesಗೂ ಕಾಲಿತ್ತು ಎನ್ನುವುದಕ್ಕೆ ಇದೆ ಸಾಕ್ಷಿ :
ಅರ್ಜೆಂಟೀನಾದ ಉತ್ತರ ಭಾಗದಲ್ಲಿ ಸಿಕ್ಕ ಹಾವಿನ ಪಳೆಯುಳಿಕೆಯು ಹಾವಿನ ಕಾಲಿನ ಬಗ್ಗೆ ದೊಡ್ಡ ಸುಳಿವು ನೀಡಿದೆ. ಇದು ನಜಾಶ್ ಎನ್ನುವ ಹಾವಿನ ಪಳೆಯುಳಿಕೆ ಎನ್ನಲಾಗಿದೆ. ಈ ಹಾವು 95 ರಿಂದ 100 ಮಿಲಿಯನ್ ವರ್ಷಗಳಷ್ಟು ಹಿಂದೆ ಈ ಭೂಮಿಯ ಮೇಲಿತ್ತು. 2000ದ ದಶಕದ ಆರಂಭದಲ್ಲಿ ಈ ಹಾವಿನ ಪಳೆಯುಳಿಕೆ ಪತ್ತೆಯಾಗಿದೆ. ಈ ಹಾವಿನಲ್ಲಿ ದೇಹದ ಹೊರಭಾಗಕ್ಕೆ ಚಾಚಿಕೊಂಡಿದ್ದ ಕಾಲುಗಳಿದ್ದವು. ಇದು ಪಕ್ಕೆಲುಬಿನ ಹೊರಗೆ ಬೆನ್ನುಮೂಳೆಗೆ ಸಂಪರ್ಕ ಹೊಂದಿಕೊಂಡು ಸೊಂಟಕ್ಕೆ ಜೋಡಿಸಲಾದ ರೀತಿಯಲ್ಲಿ ಕಾಲುಗಳನ್ನು ಹೊಂದಿತ್ತು ಎನ್ನುತ್ತದೆ ಅಧ್ಯಯನ.
ಕೆಲವು ವಿಚಾರಗಳ ಬಗ್ಗೆ ಸಿಕ್ಕಿದೆ ಸ್ಪಷ್ಟನೆ :
ಈ ಪಳೆಯುಳಿಕೆ ನಾವು ಹಿಂದಿನಿಂದ ಕೇಳಿಕೊಂಡು ಬಂದಿರುವ ಕೆಲವೊಂದು ಕಲ್ಪನೆಗಳನ್ನು ತಳ್ಳಿ ಹಾಕುತ್ತದೆ. ಹಾವುಗಳು ಸಾಗರದಲ್ಲಿನ ಜೀವನಕ್ಕೆ ಹೊಂದಿಕೊಳ್ಳುವಾಗ ತಮ್ಮ ಕೈಕಾಲುಗಳನ್ನು ಕಳೆದು ಕೊಂಡವು. ಹಾವು ಸಮುದ್ರ ಹಲ್ಲಿಗಳಿಂದ ರೂಪಾಂತರಗೊಂಡ ಜೀವಿ ಎನ್ನುವ ವಾದವನ್ನು ತಪ್ಪು ಎಂದು ಸಾರುತ್ತದೆ. ಇದು ನೀರಿನಲ್ಲಿ ಅಲ್ಲ ಬದಲಿಗೆ ನೆಲದ ಮೇಲೆಯೇ ವಾಸಿಸುತ್ತಿದ್ದ ಜೀವಿ. ಅದರಲ್ಲಿಯೂ ಮಣ್ಣನ್ನು ಅಗೆಯುವ ಅಭ್ಯಾಸವಿದ್ದ ಪ್ರಾಣಿ. ಇದು ಈಜುವ ಬದಲು ಬಿಲಗಳನ್ನು ಕೊರೆಯುತ್ತಿತ್ತು.
ಆಲ್ಬರ್ಟಾ ವಿಶ್ವವಿದ್ಯಾಲಯದ ನೇತೃತ್ವದ ತಂಡವು ನಡೆಸಿದ ಅಧ್ಯಯನದ ಪ್ರಕಾರ, ಈ ಪಳೆಯುಳಿಕೆಯು ಹಾವಿನ ಬಗೆಗಿನ ನಮ್ಮ ಕಲ್ಪನೆಯನ್ನೇ ಬದಲಿಸುತ್ತಿದೆ. ನಜಾಶ್ ಹಾವಿನಲ್ಲಿ ಒಂದು ರೀತಿಯ ಮೂಳೆ ಕೂಡಾ ಪತ್ತೆಯಾಗಿದೆ. ಅದು ಕೆನ್ನೆಯ ಮೂಳೆ. ಆದರೆ ಈಗ ಇರುವ ಹಾವುಗಳಲ್ಲಿ ಆ ಮೂಳೆಯೂ ಇಲ್ಲವಂತೆ. ಆ ಒಂದು ಮೂಳೆ ಆರಂಭಿಕ ಹಂತದಲ್ಲಿ ಹಾವುಗಳು ನಿಜವಾಗಿ ಹೇಗಿದ್ದವು ಎಂಬುದರ ಕುರಿತು ಕುತೂಹಲ ಹೆಚ್ಚಿಸಿದೆ.
ಮೊದಲು ಕಳೆದುಕೊಂಡದ್ದು ಎದುರಿನ ಕಾಲು:
ಅಧ್ಯಯನದ ಪ್ರಕಾರ ಹಾವುಗಳು ಸುಮಾರು ಸುಮಾರು 170 ಮಿಲಿಯನ್ ವರ್ಷಗಳ ಹಿಂದೆಯೇ ತಮ್ಮ ಮುಂಭಾಗದ ಅಂಗಗಳನ್ನು ಕಳೆದುಕೊಂಡಿವೆ. ನಂತರ ಹತ್ತಾರು ಮಿಲಿಯನ್ ವರ್ಷಗಳ ಕಾಲ ಹಿಂಭಾಗದ ಕಾಲುಗಳೊಂದಿಗೆ ಬದುಕುತ್ತಿತ್ತು. ಕ್ರಮೇಣ ಅವು ಸಹ ಕಣ್ಮರೆಯಾಗುತ್ತಾ ಬಂತು. ಅಂದ ಹಾಗೆ ಹಾವಿನ ಈ ಕಾಲುಗಳು ರಾತ್ರಿ ಬೆಳಗಾಗುವುದರ ಒಳಗೆ ಮಾಯವಾದದ್ದಲ್ಲ. ಅವು ಹಂತ ಹಂತವಾಗಿ ಸವೆಯುತ್ತಾ ಬಂದಿದೆ.
ಪ್ರತಿಯೊಂದು ಹಾವಿನ ಡಿಎನ್‌ಎಯಲ್ಲಿ ಸೋನಿಕ್ ಹೆಡ್ಜ್‌ಹಾಗ್ ಎಂಬ ಜೀನ್ ಇದೆ. ಇದು ಕಾಲಿನ ಬೆಳವಣಿಗೆಗೆ ಕಾರಣವಾಗುವ ಜೀನ್. ಕೈಕಾಲುಗಳಿಂದ ಮೆದುಳಿನವರೆಗೆ ಎಲ್ಲವನ್ನೂ ನಿಯಂತ್ರಿಸುವ ಜವಾಬ್ದಾರಿ ಇದರದ್ದೇ. ಇನ್ನು ಅಂಗಗಳ ಬೆಳವಣಿಗೆಯನ್ನು ಜೀನ್ ಮಾತ್ರ ನಿಯಂತ್ರಿಸುವುದಿಲ್ಲ, ಇದು ಹತ್ತಿರದ ಡಿಎನ್‌ಎ ವಿಸ್ತರಣೆಯನ್ನು ಕೂಡಾ ಅವಲಂಬಿಸಿರುತ್ತದೆ. ಈ ಜೀನ್ ಅನ್ನು ನಿಯಂತ್ರಿಸುವ 'ZRS' ಎಂಬ ಎನ್‌ಹ್ಯಾನ್ಸರ್‌ನಲ್ಲಿ ಆದ ಆನುವಂಶಿಕ ಬದಲಾವಣೆಯಿಂದಾಗಿ ಹಾವುಗಳಲ್ಲಿ ಕಾಲುಗಳ ಬೆಳವಣಿಗೆ ನಿಂತು ಹೋಯಿತು.

ಈಗಲೂ ಹಾವಿನ ಬಾಲದಡಿಯಲ್ಲಿದೆಯಂತೆ ಕಾಲು:
ಇನ್ನೂ ಒಂದು ಆಶ್ಚರ್ಯಕರ ಸಂಗತಿಯೆಂದರೆ ನಾವು ಈಗ ನೋಡುವ ಕೆಲವು ಹಾವುಗಳ ಬಾಲದ ಕೆಳಗೆ ಅದರ ಕಾಲನ್ನು ಕಾಣಬಹುದು. ಹೆಬ್ಬಾವು, ಬೋವಾ ಕನ್ಸ್ಟ್ರಿಕ್ಟರ್ ತಳಿಯ ಹಾವನ್ನು ಸರಿಯಾಗಿ ಗಮನಿಸಿದರೆ ಅದರ ಬಾಲದ ಬಳಿ ಒಂದು ಜೋಡಿ ಮೂಳೆಗಳಂತೆ ಹೊರಗೆ ಚಾಚಿಕೊಂಡಿರುವ ಅಂಗ ಕಾಣುತ್ತವೆ. ಇವು ಒಂದಾನೊಂದು ಕಾಲದಲ್ಲಿ ಹಾವಿಗೆ ಇದ್ದ ಕಾಲುಗಳೇ ಆಗಿವೆ.
ಹಾವುಗಳು ತಮ್ಮ ದೇಹದ ಭಾಗವನ್ನೇ ಕಳೆದುಕೊಂಡಿದ್ದು ಹೇಗೆ?
ಈ ಹಾವುಗಳು ಮೊದಲು ಬಿಲಗಳನ್ನು ಕೊರೆಯುತ್ತಿತ್ತು.ತಮ್ಮ ತಲೆಯನ್ನು ಮಣ್ಣಿನ ಒಳಗೆ ತೂರಿಕೊಂಡು ಹೋಗುವಾಗ ಈ ಹಾವುಗೆ ಸಮಸ್ಯೆಯಾಗುತ್ತಿದ್ದುದ್ದೇ ಅದರ ಕಾಲುಗಳು. ಹಾಗಾಗಿ ಮಣ್ಣಿನೊಳಗೆ ಸುರುಳಿ ಹಾಕಿ ಕುಳಿತುಕೊಳ್ಳುವಾಗ ಅದಕ್ಕೆ ಕಾಲಿನ ಅಗತ್ಯವೇ ಇರುತ್ತಿರಲಿಲ್ಲ. ಬೇರುಗಳು ಮತ್ತು ಬಂಡೆಗಳ ಮೇಲೆ ಸರಿಯುವಾಗ ಈ ಕಾಲುಗಳು ಉಪಕಾರಕ್ಕಾಗಿ ಅಡ್ಡಿಯಾಗುತ್ತಿದ್ದುದ್ದೇ ಹೆಚ್ಚು. ಕ್ರಮೇಣ ಹಾವುಗಳು ಇದರ ಬಳಕೆಯನ್ನೇ ನಿಲ್ಲಿಸಿ ಬಿಟ್ಟವು. ಇದೇ ಮುಂದುವರೆದು ನಂತರ ಹಾವಿನ ದೇಹದಲ್ಲಿ ಕಾಲು ರೂಪುಗೊಳ್ಳುವುದೇ ನಿಂತು ಹೋಯಿತು. ಹಾವು ಕಾಲಿಲ್ಲದೆ ತೆವಳುವ ಜೀವಿಯಾಗಿ ಮಾರ್ಪಾಡಾಯಿತು. ಆದರೆ ಹಾವುಗಳಲ್ಲಿ ಕಾಲು ಮೂಡಿಸುವ ಜೀನ್ ಇಂದಿಗೂ ಇದೆಯಂತೆ.ಆದರೆ ಅದು ಕೆಲಸಕ್ಕೆ ಬರುತ್ತಿಲ್ಲ ಅಷ್ಟೇ.


Click it and Unblock the Notifications
