ಮೆಕ್ಕಾ ಮಸೀದಿ ಮೇಲೆ ಉಗ್ರರ ದಾಳಿಗೆ ವಿಫಲ ಯತ್ನ
ಜೆಡ್ಡಾ, ಜೂನ್ 24 : ರಂಜಾನ್ ಹಬ್ಬಕ್ಕೆ ಇನ್ನೂ ಎರಡೇ ದಿನ ಬಾಕಿ ಇರುವಾಗ ಜಗತ್ ಪ್ರಸಿದ್ಧ ಮೆಕ್ಕಾ ಮಸೀದಿ ಮೇಲೆ ಉಗ್ರರು ನಡೆಸಲು ಯತ್ನಿಸಿದ ಎರಡು ದಾಳಿಗಳನ್ನು ಶುಕ್ರವಾರ ವಿಫಲಗೊಳಿಸಲಾಗಿದೆ.
ಮೆಕ್ಕಾ ಮಸೀದಿ ಮೆಲೆ ಎರಡು ಪ್ರತ್ಯೇಕ ದಾಳಿಗಳು ಮತ್ತು ಜೆಡ್ಡಾದಲ್ಲಿ ಮತ್ತೊಂದು ದಾಳಿ ನಡೆಸಲು ಉಗ್ರರು ಹುನ್ನಾರ ನಡೆಸಿದ್ದರು ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯದ ಭದ್ರತಾ ವಕ್ತಾರ ಮನ್ಸೌರ್ ಅಲ್-ತುರ್ಕಿ ಹೇಳಿದ್ದಾರೆ.
ಶುಕ್ರವಾರದ ಪ್ರಾರ್ಥನೆಗೆ ಬರುವ ಭಕ್ತಾದಿಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲು ಎರಡು ತಂಡಗಳು ಸಿದ್ಧವಾಗಿದ್ದವು. ಆದರೆ, ಸಕಾಲದಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಿಂದ ಭಾರೀ ಅನಾಹುತ ತಪ್ಪಿದೆ.

ಮೆಕ್ಕಾ ಮಸೀದಿಯ ಬಳಿಯಲ್ಲಿಯೇ ಮನೆಯೊಂದರಲ್ಲಿ ಮಾನವ ಬಾಂಬ್ ಅಡಗಿಕೊಂಡಿದ್ದ. ಭದ್ರತಾ ಸಿಬ್ಬಂದಿಗೆ ಈ ವಿಷಯ ತಿಳಿದು ಆತನನ್ನು ಸುತ್ತುವರಿಯುತ್ತಲೇ, ಅವರ ಮೇಲೆ ಗುಂಡು ಹಾರಿಸುತ್ತ, ತನ್ನನ್ನು ತಾನೇ ಉಡಾಯಿಸಿಕೊಂಡಿದ್ದಾನೆ.
ಈ ಘಟನೆಯಲ್ಲಿ ಓರ್ವ ಮಹಿಳೆ ಕೂಡ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಅಲ್ ಅರೇಬಿಯಾ ವರದಿ ಮಾಡಿದೆ. ಗುಂಡಿನ ಚಕಮಕಿಯಲ್ಲಿ ಐವರು ಭದ್ರತಾ ಸಿಬ್ಬಂದಿಗಳೂ ಗಾಯಗೊಂಡಿದ್ದಾರೆ.

ಕಳೆದ ವರ್ಷ ಸರಿಯಾಗಿ ಇದೇ ಸಮಯದಲ್ಲಿ, ರಂಜನ್ ಮುನ್ನಾ ದಿನ ಇರಾಕಿನಲ್ಲಿ ಭಾರೀ ಬಾಂಬ್ ದಾಳಿ ನಡೆಸಲಾಗಿತ್ತು. ಆ ದಾಳಿಯಲ್ಲಿ 120ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ಈಗಲೂ ಅದೇ ಹುನ್ನಾರ ಇಟ್ಟುಕೊಂಡು ದಾಳಿಗೆ ಯತ್ನಿಸಲಾಗಿದೆ.












Click it and Unblock the Notifications