ಶತ್ರು ಅಂತ್ಯಕ್ರಿಯೆಗೆ ಹೋಗಲ್ಲ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್!
ಜೀವನವೇ ಹೀಗೆ, ಯಾವಾಗ ಯಾರು ಯಾರಿಗೆ ಸ್ನೇಹಿತರೋ ಅಥವಾ ಯಾರು ಯಾರ ಜತೆ ಶತ್ರುತ್ವ ಕಟ್ಟಿಕೊಳ್ತಾರೋ ಗೊತ್ತಿಲ್ಲ. ರಷ್ಯಾ ಅಧ್ಯಕ್ಷ ಪುಟಿನ್ ಹಾಗೂ ರಷ್ಯಾ ಖಾಸಗಿ ಸೇನೆ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ನಡುವೆ ಇದೇ ಆಗಿದೆ. ಒಂದು ಕಾಲದಲ್ಲಿ ಪುಟಿನ್ ಮತ್ತು ಯೆವ್ಗೆನಿ ಪ್ರಿಗೊಝಿನ್ ಆತ್ಮೀಯ ಸ್ನೇಹಿತರು. ಆದರೆ ಬರೀ ಒಂದೆರಡು ತಿಂಗಳ ಅಂತರದಲ್ಲಿ ಇಬ್ಬರು ವೈರಿಗಳಾಗಿ ಹೋದರು.
ವ್ಲಾದಿಮಿರ್ ಪುಟಿನ್ ಎದುರು ಹಾಕಿಕೊಂಡಿದ್ದ ಯೆವ್ಗೆನಿ ಪ್ರಿಗೊಝಿನ್ ಸಾಯಬಾರದ ಸಾವು ಪಡೆದ. ಹೀಗೆ ಪ್ರಿಗೊಝಿನ್ ಸಾವು ಅಪಘಾತವೋ? ಅಥವಾ ಕೊಲೆಯೋ? ಎಂಬ ಡೌಟ್ ಕಾಡುವಾಗಲೇ ಆತನ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಸಾಗಿದೆ. ಈ ಸಂದರ್ಭದಲ್ಲೇ ಒಂದು ಕಾಲದ ಆತ್ಮಿಯ ಗೆಳೆಯನ ಅಂತ್ಯಕ್ರಿಯೆಗೆ ಪುಟಿನ್ ಹೋಗ್ತಾರಾ? ಅಥವಾ ಹೋಗೋದಿಲ್ವ? ಎಂಬ ಅನುಮಾನ ಕಾಡುತ್ತಿತ್ತು. ಇದೀಗ ಆ ಅನುಮಾನದ ಹುತ್ತಕ್ಕೆ ಅಂತ್ಯ ಹಾಡಿದ್ದಾರೆ ರಷ್ಯಾ ಅಧಿಕಾರಿಗಳು. ಹಾಗಾದರೆ ಪುಟಿನ್ ನಿರ್ಧಾರ ಏನು? ರಷ್ಯಾದಲ್ಲಿ ಖಾಸಗಿ ಸೇನೆಯ ಮುಖ್ಯಸ್ಥ ಸತ್ತ ನಂತರ ಏನಾಗುತ್ತಿದೆ?

ಶತ್ರು ಅಂತ್ಯಕ್ರಿಯೆಗೆ ಪುಟಿನ್ ಗೈರು
ನೋಡಿ ಸಮಯ ಎಂಬುದು ಮನುಷ್ಯನ ಹೇಗೆಲ್ಲಾ ಆಡಿಸುತ್ತೆ ಅಂತಾ. ಅದೊಂದು ಕಾಲ ಇತ್ತು, ಸ್ವತಃ ಇದೇ ಪ್ರಿಗೊಝಿನ್ ಪುಟಿನ್ ಅವರಿಗೆ ಕೈಯಾರೆ ಬಡಿಸುತ್ತಿದ್ದ. ಅಲ್ಲದೆ ಇದೇ ಪ್ರಿಗೊಝಿನ್, ಪುಟಿನ್ ಜೊತೆ ಪಾರ್ಟಿ ಮಾಡುತ್ತಿದ್ದ. ಆದ್ರೆ ಈಗ ಅವನ ಸಾವಿಗೆ ಸಂತಾಪ ಸೂಚಿಸಿ, ಒಂದು ಹಿಡಿ ಮಣ್ಣು ಹಾಕುವುದಕ್ಕೂ ಪುಟಿನ್ ಬರಲು ಆಗುತ್ತಿಲ್ಲ. ಖಾಸಗಿ ಸೇನೆ 'ವ್ಯಾಗ್ನರ್' ಮುಖ್ಯಸ್ಥ ಪ್ರಿಗೊಝಿನ್ ಅಂತ್ಯಕ್ರಿಯೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪಾಲ್ಗೊಳ್ಳಲ್ಲ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಕಡ್ಡಿ ಮುರಿದಂತೆ ಹೇಳಿದ್ದಾರೆ. ಹಾಗಾದರೆ ಪುಟಿನ್ ಇಂತಹ ದೃಢ ನಿರ್ಧಾರ ಕೈಗೊಂಡಿದ್ದು ಯಾಕೆ? ಮುಂದೆ ಓದಿ.
ಅಷ್ಟಕ್ಕೂ ಈಗ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ನೀಡಿರುವ ಮಾಹಿತಿ ಪ್ರಕಾರ, ರಷ್ಯಾ ಖಾಸಗಿ ಸೇನೆ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ಅಂತ್ಯಕ್ರಿಯೆ ಬಗ್ಗೆ ನಿರ್ದಿಷ್ಟವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲವಂತೆ. ಈ ಬಗ್ಗೆ ಅಗತ್ಯ ನಿರ್ಧಾರವನ್ನು ಪ್ರಿಗೋಷಿನ್ ಕುಟುಂಬಸ್ಥರು ಹಾಗೂ ಸ್ನೇಹಿತರು ತೆಗೆದುಕೊಳ್ಳುತ್ತಾರೆ. ಇದೇ ಕಾರಣಕ್ಕೆ ಪುಟಿನ್ ಪಾಲ್ಗೊಳ್ಳುವ ನಿರೀಕ್ಷೆ ಬೇಡವೆಂದು ಹೇಳಿದ್ದಾರೆ. ಈ ಮೂಲಕ ತನ್ನ ಒಂದು ಕಾಲದ ಆತ್ಮೀಯ ಗೆಳೆಯ, ಈಗಿನ ಶತ್ರುವಾಗಿದ್ದ ಯೆವ್ಗೆನಿ ಪ್ರಿಗೊಝಿನ್ ಅಂತ್ಯಕ್ರಿಯೆಗೆ ಪುಟಿನ್ ಹೋಗಲ್ಲ ಅನ್ನೋದು ಗ್ಯಾರಂಟಿ ಆಗುತ್ತಿದೆ.

ಅಮೆರಿಕ VS ರಷ್ಯಾ ಕಿರಿಕಿರಿ ಕಿರಿಕ್
ರಷ್ಯಾ ಖಾಸಗಿ ಸೇನೆ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ಸಾವಿನ ವಿಚಾರವಾಗಿ ರಷ್ಯಾ ವಿರುದ್ಧ ಅಮೆರಿಕ ಮತ್ತೆ ಮತ್ತೆ ಆಕ್ರೋಶ ಹೊರಹಾಕುತ್ತಿದೆ. ಹೀಗಾಗಿ ವ್ಲಾದಿಮಿರ್ ಪುಟಿನ್ ರಷ್ಯಾದಲ್ಲಿ ಹಿಂದಿನ ತಪ್ಪು ಮರುಕಳಿಸದಂತೆ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಿದ್ದಾರೆ. ರಾಜ್ಯಕ್ಕೆ ನಿಷ್ಠೆ ತೊರುವ ಬಗ್ಗೆ ರಷ್ಯಾ ಖಾಸಗಿ ಸೈನಿಕರು ಪ್ರಮಾಣವಚನ ಸ್ವೀಕರಿಸಲು ಆದೇಶ ನೀಡಿದ್ದಾರೆ. ಅಲ್ಲದೆ ರಷ್ಯಾಗೆ & ರಷ್ಯಾ ಸೇನೆಗೆ ಕೆಲಸ ಮಾಡುವ ಪ್ರತಿ ಸೈನಿಕನು ಈ ಪ್ರತಿಜ್ಞೆ ಸ್ವೀಕರಿಸಬೇಕಿದೆ ಎಂದು ಆದೇಶ ಹೊರಡಿಸಲಾಗಿದೆ. ಈ ಮೂಲಕ ಮತ್ತೆ ರಷ್ಯಾಗೆ ಖಾಸಗಿ ಸೈನಿಕರಿಂದ ಯಾವ ಸಮಸ್ಯೆ ಆಗದಂತೆ ಪುಟಿನ್ ಈ ಕ್ರಮ ಕೈಗೊಂಡಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಅಷ್ಟಕ್ಕೂ ರಷ್ಯಾ ಸ್ಥಿತಿ ಹೇಗಾಗಿದೆ ಅಂದರೆ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬಂತಾಗಿದೆ. ಹೀಗಾಗಿ ಯಾರಿಗೆ ರಷ್ಯಾದ ಖಾಸಗಿ ಸೇನೆ ಅಧಿಕಾರ ಕೊಡಬೇಕು? ಎಂಬುದರ ಚರ್ಚೆ ಶುರುವಾಗಿದೆ. ಯಾಕಂದ್ರೆ ಒಮ್ಮೆ ಇದೇ ಕಾರಣಕ್ಕೆ ರಷ್ಯಾ ಆಂತರಿಕ ದಂಗೆ ಎದುರಿಸಿದೆ. ಈಗ ಮತ್ತೆ ಯೆವ್ಗೆನಿ ಪ್ರಿಗೊಝಿನ್ ರೀತಿಯ ವ್ಯಕ್ತಿಗೆ ಕೊಟ್ಟರೆ, ಮತ್ತೊಮ್ಮೆ ಖಾಸಗಿ ಸೇನೆ ರಷ್ಯಾ ವಿರುದ್ಧ ಬಂಡಾಯ ಏಳುವುದು ಗ್ಯಾರಂಟಿ. ಹೀಗಾಗಿ ರಷ್ಯಾ ಅಧ್ಯಕ್ಷ ಪುಟಿನ್ ಸೇನಾಧಿಕಾರಿಗಳ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಇಷ್ಟೆಲ್ಲ ಬೆಳವಣಿಗೆಯ ನಡುವೆ ಪುಟಿನ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲ್ಲ ಎಂದಿರುವುದು ಕುತೂಹಲ ಕೆರಳಿಸಿದೆ.












Click it and Unblock the Notifications