Mocha Cyclone: ಚಂಡಮಾರುತದ ಪ್ರಳಯದ ನಡುವೆ ರೊಹಿಂಗ್ಯಾ ನಿರಾಶ್ರಿತರು ಅತಂತ್ರ!
ಢಾಕ: ಮೋಚಾ ಚಂಡಮಾರುತದ ಅಬ್ಬರಕ್ಕೆ ಎಲ್ಲವೂ ಅಲ್ಲೋಲ ಕಲ್ಲೋಲ ಆಗುತ್ತಿದೆ. ಅದರಲ್ಲೂ ನೆಲೆಯೇ ಇಲ್ಲದೆ ಬಾಂಗ್ಲಾಗೆ ವಲಸೆ ಬಂದಿದ್ದ ರೊಹಿಂಗ್ಯಾ ನಿರಾಶ್ರಿತರ ಪರಿಸ್ಥಿತಿ ನರಕವಾಗಿ ಬದಲಾಗಿದೆ. ಕಳೆದೊಂದು ವಾರದಿಂದಲೂ ಏಷ್ಯಾ ಖಂಡಕ್ಕೆ ತೊಂದರೆ ನೀಡಿರುವ ಮೋಚಾ ಇನ್ನೇನು ಬಾಂಗ್ಲಾ & ಮ್ಯಾನ್ಮಾರ್ ನಡುವೆ ಅಪ್ಪಳಿಸಿ ಅಂತ್ಯವಾಗುತ್ತಿದೆ. ಆದರೆ ಈಗ ಎಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಗೊತ್ತಾ?
ಕಳೆದ ವಾರ ಭಾರತದ ಹಲವೆಡೆ ಬಲವಾದ ಗಾಳಿಯಿಂದ ಮರ, ವಿದ್ಯುತ್ ಕಂಬ ಧರೆಗುರುಳಿದ್ದು ಇದೇ ಭೀಕರ ಚಂಡಮಾರು 'ಮೋಚಾ' ಪರಿಣಾಮವಾಗಿ. ಬಂಗಾಳ ಕೊಲ್ಲಿಯಲ್ಲಿ ತೀವ್ರವಾಗಿದ್ದ 'ಮೋಚಾ' ಚಂಡಮಾರುತ ಭಾರತದ ಹಲವು ಪ್ರದೇಶಗಳ ಮೇಲೆ ಪ್ರಭಾವ ಉಂಟು ಮಾಡಿತ್ತು. ಸುಮಾರು 200 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿದ್ದ ಗಾಳಿ ಪರಿಣಾಮ ಭಾರತ ಸೇರಿದಂತೆ ಅಕ್ಕಪಕ್ಕದ ಹಲವು ದೇಶಗಳು ತೊಂದರೆ ಅನುಭವಿಸಿದ್ದವು, ಈಗ ಬಾಂಗ್ಲಾ ಹಾಗೂ ಮ್ಯಾನ್ಮಾರ್ ಜನ ಜೀವ ಕೈಲಿಡಿದುಕೊಂಡು ಬದುಕುತ್ತಿದ್ದಾರೆ.

ಸುರಕ್ಷಿತ ಜಾಗಗಳಿಗೆ ಜನರು ಎಸ್ಕೇಪ್
ಮ್ಯಾನ್ಮಾರ್‌ನ ರಾಖಿನೆ ರಾಜ್ಯದ ಕಡೆಗೆ ಸೈಕ್ಲೋನ್ ನುಗ್ಗುತ್ತಿದ್ದು, ಸಿಟ್ವೆ ನಗರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ ಎನ್ನಲಾಗಿದೆ. 3 ಲಕ್ಷ ಜನಸಂಖ್ಯೆಯಿರುವ ಸಿಟ್ವೆ ನಗರದಲ್ಲಿನ 4 ಸಾವಿರಕ್ಕೂ ಅಧಿಕ ಜನರನ್ನು ಶುಕ್ರವಾರದಿಂದ ಇತರ ನಗರಗಳಿಗೆ ಸ್ಥಳಾಂತರಿಸಿದ್ದರೆ 20,000ಕ್ಕೂ ಹೆಚ್ಚು ಜನ ಎತ್ತರದ ಸ್ಥಳದಲ್ಲಿರುವ ಜಾಗಗಳಲ್ಲಿ ಆಶ್ರಯವನ್ನ ಪಡೆದಿದ್ದಾರೆ. ಚಂಡಮಾರುತ ಅಪ್ಪಳಿಸುವ ಮೊದಲೇ ನಗರದಲ್ಲಿ ಗಂಟೆಗೆ 48 ಕಿ.ಮೀ ವೇಗದ ಗಾಳಿ ಬೀಸುತ್ತಿತ್ತು. ಹೀಗಾಗಿ ಜನರು ಹೆದರು ಊರು ಬಿಟ್ಟು ಸುರಕ್ಷಿತ ಜಾಗಗಳಿಗೆ ಹೋಗಿದ್ದಾರೆ.
ರೊಹಿಂಗ್ಯಾ ನಿರಾಶ್ರಿತರ ಪರಿಸ್ಥಿತಿ ನರಕ
ಅತ್ತ ರೊಹಿಂಗ್ಯಾ ನಿರಾಶ್ರಿತರ ಸ್ವಂತ ದೇಶ ಮ್ಯಾನ್ಮಾರ್ ಕೂಡ 'ಮೋಚಾ' ದಾಳಿಗೆ ಸಿಲುಕಿ ನಲುಗಿದೆ. ಇದೇ ಹೊತ್ತಲ್ಲಿ ತಮ್ಮ ದೇಶದ ಹಿಂಸಾಚಾರದಿಂದ ಓಡಿ ಬಂದು, ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿರುವ 10 ಲಕ್ಷ ರೊಹಿಂಗ್ಯಾ ನಿರಾಶ್ರಿತರ ಪರಿಸ್ಥಿತಿ ನರಕವಾಗಿ ಬದಲಾಗಿದೆ. ಗುಡಿಸಲು ಕಟ್ಟಿಕೊಂಡು, ಸಮುದ್ರದ ಪ್ರದೇಶದ ಸಮೀಪವೇ ಬದುಕುತ್ತಿರುವ ರೊಹಿಂಗ್ಯಾ ನಿರಾಶ್ರಿತರ ರಕ್ಷಣೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಟ್ರಕ್ ಸೇರಿ ಮತ್ತಿತರ ವಾಹನಗಳ ಮೂಲಕ ಸಮುದಾಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ.

ಚಂಡಮಾರುತದ ಪರಿಣಾಮ ಪ್ರಳಯ
ಇನ್ನು 1.27 ದಶಲಕ್ಷ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗಿದ್ದು, ಚಂಡಮಾರುತ ಹಾದುಹೋದ ಪ್ರದೇಶದಲ್ಲಿ ನರಕ ಸದೃಶ ಪರಿಸ್ಥಿತಿ ಸೃಷ್ಟಿಯಾಗಿದೆ. ಹಾಗೇ ಪ್ರವಾಸಿ ತಾಣವಾದ ಸೈಂಟ್ ಮಾರ್ಟಿನ್ಸ್ ದ್ವೀಪದ ನಿವಾಸಿಗಳಿಗೂ ಅಪಾಯದ ಮುನ್ನೆಚ್ಚರಿಕೆ ನೀಡಿದೆ ಬಾಂಗ್ಲಾದೇಶ ಸರ್ಕಾರ. ಈ ನಡುವೆ ಬಾಂಗ್ಲಾದ ಅತಿದೊಡ್ಡ ಬಂದರು ಚಿತ್ತಗಾಂಗ್ನಲ್ಲಿ ಎಲ್ಲಾ ಚಟುವಟಿಕೆ ಸ್ಥಗಿತವಾಗಿದೆ. ಜನರು ಸೈಕ್ಲೋನ್ ಅಬ್ಬರಕ್ಕೆ ಬೆಚ್ಚಿಬಿದ್ದಿದ್ದು, ಈ ಕಂಟಕದಿಂದ ಯಾವಾಗ ಮುಕ್ತಿ ಸಿಗುತ್ತೋ? ಅಂತಾ ಕಾಯುತ್ತಿದ್ದಾರೆ.
ಸೈಕ್ಲೋನ್ ಬಂದ್ರೆ ವಾತಾವರಣ ಸುಮ್ಮನೇ ಇರುತ್ತಾ? ಇಲ್ಲ ಇದೀಗ ಅದೇ ರೀತಿ ಮ್ಯಾನ್ಮಾರ್ ಮತ್ತು ಬಾಂಗ್ಲಾ ಭೀಕರ ಪ್ರಾಕೃತಿಕ ವಿಕೋಪ ಎದುರಿಸುತ್ತಿವೆ. ಭಾರಿ ಮಳೆ, ಪ್ರವಾಹ, ಭೂಕುಸಿತ ಲಕ್ಷ ಲಕ್ಷ ಜನರ ಮೇಲೆ ತನ್ನ ಪ್ರಭಾವ ಬೀರಿದೆ. ರಾಖಿನೆ ರಾಜ್ಯದಲ್ಲಿ 60 ಲಕ್ಷ ಜನ ನೆರವಿನ ಅಗತ್ಯದಲ್ಲಿದ್ದಾರೆ ಎಂದು ವಿಶ್ವ ಹವಾಮಾನ ಸಂಸ್ಥೆ ಹೇಳಿದೆ. ಛಟ್ಟೋಗ್ರಾಮ್, ಕಾಕ್ಸ್ ಬಝಾರ್, ರಂಗಮಟ್ಟಿ, ಬಂದಾರ್ಬನ್ & ಖಗ್ರಚ್ಛಾರಿ ಜಿಲ್ಲೆಗಳಲ್ಲಿ ಭೂಕುಸಿತ ಸಂಭವಿಸುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಒಟ್ನಲ್ಲಿ ಮನುಷ್ಯನ ಭವಿಷ್ಯಕ್ಕೆ ಕಂಟಕವಾಗಿ ಒಂದೊಂದೇ ಪ್ರಾಕೃತಿಕ ವಿಕೋಪಗಳು ಅಪ್ಪಳಿಸುತ್ತಿವೆ. ಈ ಪೈಕಿ ಆಧುನಿಕ ಕಾಲದಲ್ಲಿ ಸೈಕ್ಲೋನ್ ಸೃಷ್ಟಿಸುತ್ತಿರುವ ವಿನಾಶ ಅಶ್ಟಿಷ್ಟಲ್ಲ. ಹೀಗಾಗಿಯೇ ವಿಜ್ಞಾನಿಗಳು ಕೂಡ ಚಂಡಮಾರುತಗಳನ್ನ ನಿಭಾಯಿಸುವ ಬಗ್ಗೆ ಅಧ್ಯಯನ ನಡೆಸುತ್ತಿದ್ದು, ಯಾವುದೂ ಸಕ್ಸಸ್ ಕಾಣುವ ಲಕ್ಷವೇ ತೋರುತ್ತಿಲ್ಲ. ಹೀಗಾಗಿ ಮನುಷ್ಯ ಎಷ್ಟೇ ಬೆಳೆದರೂ ಪ್ರಕೃತಿ ಎದುರು ದೊಡ್ಡವನಲ್ಲ ಎಂಬುದು ಈ ಮೂಲಕ ಸಾಬೀತಾಗುತ್ತಿದೆ.












Click it and Unblock the Notifications