UK Killer Nurse: ನರ್ಸ್ 7 ಮುಗ್ಧ ಮಕ್ಕಳನ್ನು ಕೊಂದಿದ್ದು ಯಾಕೆ?
ಲಂಡನ್: ಅಲ್ಲಿ ಮೃತಪಟ್ಟ ಮಕ್ಕಳು ಇನ್ನೂ ಆಗ ತಾನೆ ಕಣ್ಣು ಬಿಟ್ಟಿದ್ದವು. ಜಗತನ್ನು ಎಳೇ ಕಣ್ಣುಗಳಿಂದ ನೋಡುತ್ತಿದ್ದವು. ಆದರೆ ಅಲ್ಲೊಬ್ಬಳು ರಾಕ್ಷಸಿಯ ರೂಪದಲ್ಲಿ ಬಂದು ಮಕ್ಕಳ ಜೀವ ತೆಗೆದಿದ್ದಳು. ಅಷ್ಟಕ್ಕೂ ಇದು ಲಂಡನ್ ಆಸ್ಪತ್ರೆಯಲ್ಲಿ ನಡೆದಿದ್ದ ಮಕ್ಕಳ ಹತ್ಯೆ ಕರಾಳ ಮುಖ. ಹಾಗಾದ್ರೆ ನರ್ಸ್ 7 ಮುಗ್ಧ ಮಕ್ಕಳನ್ನ ಕೊಲೆ ಮಾಡಿದ್ದು ಯಾಕೆ? ಜೀವ ಉಳಿಸಬೇಕಿದ್ದ ನರ್ಸ್ ಸೀರಿಯಲ್ ಕಿಲ್ಲರ್ ಆಗಿದ್ದು ಏಕೆ? ಬನ್ನಿ ತಿಳಿಯೋಣ.
ಬ್ರಿಟನ್‌ನ ಚೆಸ್ಟರ್ ಆಸ್ಪತ್ರೆಯ ಘಟನೆ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಗೂಗಲ್, ಸೋಷಿಯಲ್ ಮೀಡಿಯಾ, ಟಿವಿ ಹೀಗೆ ಎಲ್ಲಿ ನೋಡಿದರೂ ಆಕೆಯದ್ದೇ ಮಾತು. ಆ ನರ್ಸ್ ಮಾಡಿರುವ ಕೃತ್ಯದ ಬಗ್ಗೆಯೇ ಚರ್ಚೆ. ಹೀಗೆ ಹಲವು ಶಿಶುಗಳ ಜೀವ ತೆಗೆದ ಆಕೆಯನ್ನ ಕೋರ್ಟ್ ಈಗ ಶಿಕ್ಷೆಗೆ ಗುರಿಪಡಿಸಿದೆ. ಆದ್ರೆ ಶಿಕ್ಷೆ ಪ್ರಕಟದ ನಂತರ ನರ್ಸ್ ಮಕ್ಕಳ ಮೇಲೆ ನಡೆಸಿದ್ದ ಕ್ರೂರ ವರ್ತನೆ ಬಯಲಾಗಿವೆ. ಹಾಗೇ ನರ್ಸ್ ಮಕ್ಕಳನ್ನು ಕೊಲೆ ಮಾಡಿದ್ದು ಯಾಕೆ? ಅವಳ ಈ ವರ್ತನೆಗೆ ಮಾನಸಿಕ ಅಸ್ವಸ್ಥತೆ ಕಾರಣವಾಗಿತ್ತಾ? ಅಕ್ರಮ ಸಂಬಂಧ ಪರಿಣಾಮ ಆಕೆ ಹೀಗೆ ಕೊಲೆ ಮಾಡುತ್ತಿದ್ದಳಾ? ಇಲ್ಲ ನರ್ಸ್ ಸೀರಿಯಲ್ ಕಿಲ್ಲರ್ ಆಗಿದ್ದಳಾ? ಎಂಬ ಬಗ್ಗೆ ತನಿಖೆ ನಡೆದಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ದೇವತೆ ಎಂದು ನಂಬಿದವರಿಗೆ ದೆವ್ವವಾದಳು!
ವೈದ್ಯರನ್ನು ಜನ ದೇವರು ಅಂತಾ ನಂಬುತ್ತಾರೆ, ಹಾಗೇ ವೈದ್ಯರಿಗೆ ಸಮಾನವಾಗಿ ನರ್ಸ್ ಅಥವಾ ದಾದಿಯರು ಕೆಲಸ ಮಾಡುತ್ತಾರೆ. ಒಂದು ಜೀವ ಉಳಿಸಲು ವೈದ್ಯರ ಪಾತ್ರದಷ್ಟೇ ನರ್ಸ್‌ಗಳ ಪಾತ್ರ ಕೂಡ ದೊಡ್ಡದು. ಆದರೆ ಹೀಗೆ ದೇವರು ಎಂದು ನಂಬಿದ್ದ ಮುಗ್ಧರಿಗೆ ಈ ನರ್ಸ್ ಲೂಸಿ ಲೆಟ್‌ಬಿ ತನ್ನ ರಾಕ್ಷಸ ಮುಖ ತೋರಿಸಿದ್ದಾಳೆ. ಹಾಗಾದರೆ ಈಕೆ ಇಷ್ಟೆಲ್ಲಾ ಹಸುಗೂಸುಗಳನ್ನ ಕೊಲೆ ಮಾಡಲು ಕಾರಣ ಏನು? ಈಕೆಯ ಕ್ರೌರ್ಯ ಹೇಗಿತ್ತು. ಈಕೆಯ ಮನೆ ಹುಡುಕಿದಾಗ ತನಿಖೆ ನಡೆಸಿದ ಅಧಿಕಾರಿಗಳಿಗೆ ಸಿಕ್ಕ ವಸ್ತುಗಳು ಏನು?.
ಸೀರಿಯಲ್ ಕಿಲ್ಲರ್ ಆಗಿದ್ದಳಾ ನರ್ಸ್?
ಆಕೆ ಬರೀ ಕೊಲೆ ಮಾಡುತ್ತಿರಲಿಲ್ಲ, ಆಕೆ ಮಕ್ಕಳನ್ನ ಸಾಯಿಸಲು ಮುಂದಾದ ವೇಳೆ ತನಗೆ ಮುಂದೆ ಎಲ್ಲಾ ಗೊತ್ತು ಎಂಬಂತೆ ವರ್ತಿಸುತ್ತಿದ್ದಳು ಎನ್ನಲಾಗಿದೆ. ಅಲ್ಲದೆ ನರ್ಸ್ ಮಕ್ಕಳ ಮೇಲೆ ದಾಳಿ ಮಾಡಿಯೂ ನಾಟಕ ಮಾಡುತ್ತಿದ್ದಳು ಎಂದು ಆರೋಪಿಸಲಾಗಿದೆ. ಗೊಂದಲ ಸೃಷ್ಟಿಸುವ ರೀತಿ ಲೂಸಿ ತನ್ನ ಮನೆಯಲ್ಲಿ ಆಸ್ಪತ್ರೆಯ ದಾಖಲೆ ಇಟ್ಟುಕೊಂಡಿದ್ದು ತನಿಖೆಯ ವೇಳೆ ಕಂಡುಬಂದಿದೆ. ಹಾಗೇ ಇದರ ಜೊತೆಗೆ ನಾನು ದುಷ್ಟೆ, ನಾನು ಕೊಲೆ ಮಾಡಿದ್ದೇನೆ ಎಂಬ ಕಾಗದ ಕೂಡ ಸಿಕ್ಕಿದೆ. ಕಾಗದದ ಮೇಲೆ ಸ್ವತಃ ನರ್ಸ್ ಬರಹ ಇದೆ. ಆಸ್ಪತ್ರೆಯಲ್ಲಿ ದುಃಖ ಮತ್ತು ಹತಾಶೆ ವಾತಾವರಣ ಸೃಷ್ಟಿಸಿ ಆಕೆ ಖುಷಿಪಡುತ್ತಿದ್ದಳು ಎನ್ನಲಾಗಿದೆ. ಹೀಗೆ ಎಲ್ಲಾ ಕಾರಣಗಳಿಗೆ ಆಕೆಯನ್ನ ಸೀರಿಯಲ್ ಕಿಲ್ಲರ್ ಎಂದು ಪ್ರಾಸಿಕ್ಯೂಟರ್ಸ್ ಸೂಚಿಸಿದ್ದರು.

ಅಕ್ರಮ ಸಂಬಂಧ ಕೊಲೆಗೆ ಕಾರಣವಾಗಿತ್ತಾ?
ಇದರ ಜೊತೆ ಪ್ರಾಸಿಕ್ಯೂಟರ್ಸ್ ನರ್ಸ್ ಲೂಸಿಯ ಮತ್ತೊಂದು ಉದ್ದೇಶ ಕೆದಕಿದ್ದಾರೆ. ಲೂಸಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ವಿವಾಹಿತ ವೈದ್ಯರೊಂದಿಗೆ ಅಕ್ರಮ ಸಂಬಂಧ ಕೂಡ ಇತ್ತು ಎಂದು ತಿಳಿಸಲಾಗಿದೆ. ಲೂಸಿ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಆರೋಪಿಸಿರುವ ವೈದ್ಯನನ್ನ, ಶಿಶುಗಳು ಗಂಭೀರ ಸ್ಥಿತಿಯಲ್ಲಿದ್ದಾಗ ಕರೆಸುತ್ತಿದ್ದರಂತೆ. ಇದೇ ಕಾರಣಕ್ಕೆ ನರ್ಸ್ ವಿವಾಹಿತ ವೈದ್ಯನನ್ನ ನೋಡುವ ಸಲುವಾಗಿ ಈ ರೀತಿ ಕೃತ್ಯ ಎಸಗಿದ್ದಾಳೆ ಎಂದು ಆರೋಪ ಮಾಡಲಾಗಿತ್ತು. ಆದರೆ ಇದನ್ನ ಆರೋಪಿ ನರ್ಸ್ ಲೂಸಿ ಲೆಟ್‌ಬಿ ನಿರಾಕರಿಸಿದ್ದಾಳೆ.
ನರ್ಸ್‌ಗೆ ಮಾನಸಿಕ ಅಸ್ವಸ್ಥತೆ ಇತ್ತಾ?
ಇದಿಷ್ಟೂ ಒಂದು ಕಡೆಯಾದರೆ, ಮತ್ತೊಂದು ಕಡೆ ನರ್ಸ್ ಲೂಸಿ ಲೆಟ್‌ಬಿ ಬರೆದ ಪತ್ರಗಳ ತನಿಖೆಯಲ್ಲಿ ಬೇರೆ ಅನುಮಾನ ಮೂಡಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಳಾ? ಎಂಬ ಪ್ರಶ್ನೆ ಮೂಡಿತ್ತು. ಏಕೆಂದರೆ ಪತ್ರಗಳಲ್ಲಿ ತಾನು ಉದ್ದೇಶಪೂರ್ವಕವಾಗಿ ಶಿಶುಗಳಿಗೆ ಹಾನಿ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ. ಏಕೆಂದರೆ ಆ ಮಕ್ಕಳನ್ನು ನೋಡಿಕೊಳ್ಳಲು ತಾನು ಸಮರ್ಥಳಲ್ಲ ಎಂದು ಆಕೆ ಭಾವಿಸಿದ್ದಳಾ? ಎಂಬ ಪ್ರಶ್ನೆಯು ಪತ್ರಗಳಿಂದ ಮೂಡಿದೆ. ಹಾಗೇ ಈಕೆ ಮಕ್ಕಳ ಜೀವ ತೆಗೆಯುವಾಗ ನೈಸರ್ಗಿಕ ವಿಧಾನ ಬಳಸುತ್ತಿದ್ದಳು. ಹೀಗೆ ತನ್ನ ಕೈವಾಡ ಇಲ್ಲ ಎಂಬುದನ್ನ ಸಹೋದ್ಯೋಗಿಗಳ ಎದುರು ತೋರಿಸುತ್ತಿದ್ದಳಂತೆ.

ಮಕ್ಕಳ ಹತ್ಯೆ ಬಗ್ಗೆ ಬರೆಯುತ್ತಿದ್ದಳು!
ಅಕ್ಟೋಬರ್‌ನಿಂದಲೂ ಉತ್ತರ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿತ್ತು. ಒಂದು 'ಉದ್ದೇಶ'ಕ್ಕಾಗಿ ಶಿಶುಗಳನ್ನು ಹತ್ಯೆ ಮಾಡಿದ್ದೇನೆ ಎಂದಿರುವ ಲೂಸಿ, ತಾನು ಒಬ್ಬ 'ದುಷ್ಟೆ' ಎಂದು ನಂಬಿದ್ದಾಗಿ ಹೇಳಿಕೊಂಡಿದ್ದಳು. ಚೆಸ್ಟರ್ ಆಸ್ಪತ್ರೆ ನವಜಾತ ಶಿಶು ಘಟಕದಲ್ಲಿ 2015ರ ಜೂನ್‌ನಿಂದ 2016ರ ಜೂನ್‌ವರೆಗೆ ನಡೆದ ಶಿಶು ಹತ್ಯೆಗೆ ಸಂಬಂಧಿಸಿ ಲೂಸಿಯನ್ನ ಬಂಧಿಸಲಾಗಿತ್ತು. ಮಕ್ಕಳನ್ನ ಕೊಂದ ಲೂಸಿ, ತನ್ನ ಕೊಲೆಗಳ ಬಗ್ಗೆ ಬರೆದು ಇಡುತ್ತಿದ್ದಳು. ಅವುಗಳನ್ನು ಸಾಕ್ಷ್ಯವನ್ನಾಗಿ ಕೋರ್ಟ್‌ಗೆ ಸಲ್ಲಿಸಲಾಗಿತ್ತು. ನರ್ಸ್ ಬರೆದಿರುವ ಪತ್ರ ಮತ್ತು ಡೈರಿಯಲ್ಲಿ, ನಾನು ಅವರನ್ನ ಚೆನ್ನಾಗಿ ಆರೈಕೆ ಮಾಡುವಷ್ಟು ಒಳ್ಳೆಯವಳಲ್ಲ. ಅದಕ್ಕಾಗಿ ಅವರನ್ನ ಕೊಂದೆ. ನಾನು ದುಷ್ಟೆ. ಅದಕ್ಕೆ ಹೀಗೆ ಮಾಡಿದೆ ಎಂದು ಬರೆದಿದ್ದಾಳೆ.
ಅನುಮಾನ ಬರದಂತೆ ಶಿಶುಗಳ ಹತ್ಯೆ
2015ರಿಂದ 2016ರ ನಡುವೆ ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯ ನವಜಾತ ಶಿಶು ವಾರ್ಡ್‌ನಲ್ಲಿ ಒಟ್ಟು 13 ಶಿಶುಗಳನ್ನ ಬರ್ಬರವಾಗಿ ಕೊಲ್ಲಲಾಗಿತ್ತು. ಹೀಗೆ ಶಿಶುಗಳ ಕೊಲೆಗೆ ಲೂಸಿ ಅನೇಕ ವಿಧಾನ ಅನುಸರಿಸಿದ್ದಳು ಎಂದು ಬ್ರಿಟನ್‌ನ ಕ್ರೌನ್ ಪ್ರಾಸಿಕ್ಯೂಷನ್ ಸರ್ವೀಸ್, ಕೋರ್ಟ್‌ಗೆ ಮಾಹಿತಿ ನೀಡಿತ್ತು. ತ್ರಿವಳಿ ಗಂಡು ಮಕ್ಕಳಲ್ಲಿ 2 ಮಕ್ಕಳು ಲೂಸಿಯ ಕೊನೆಯ ಬಲಿಪಶುಗಳು. 2016ರ ಜೂನ್‌ನಲ್ಲಿ ಲೂಸಿ ಲೆಟ್‌ಬಿ, ಇಬಿಜಾದಿಂದ ರಜಾ ದಿನ ಮುಗಿಸಿ ಬಂದ ದಿನವೇ ಒಂದು ಮಗು ಮೃತಪಟ್ಟಿದ್ದರೆ ಇದರ ನಡುವೆ ಇನ್ನೊಂದು ಮಗು ಮರುದಿನ ಉಸಿರು ಚೆಲ್ಲಿತ್ತು. ಈ ಘಟನೆಗಳು ಆಸ್ಪತ್ರೆ ಸಿಬ್ಬಂದಿ ಹಾಗೂ ಆಡಳಿತವನ್ನ ಬೆಚ್ಚಿ ಬೀಳಿಸಿತ್ತು.
ಭಾರತ ಮೂಲದ ವೈದ್ಯನಿಗೆ ಸಲಾಂ!
ಇಷ್ಟು ಭಯಾನಕವಾದ ಪ್ರಕರಣ ಹೊರಗೆ ಬರುವಲ್ಲಿ ಭಾರತ ಮೂಲದ ವೈದ್ಯ ಮಹತ್ವದ ಪಾತ್ರ ವಹಿಸಿದ್ದಾರೆ. ಶಿಶುಗಳ ಸಾವಿನ ಬಗ್ಗೆ ಆತಂಕ ವ್ಯಕ್ತಪಡಿಸಿದ & ನರ್ಸ್‌ಗೆ ಶಿಕ್ಷೆ ಸಿಗುವಂತೆ ಮಾಡಿದವರಲ್ಲಿ ಭಾರತ ಮೂಲದ, ಬ್ರಿಟನ್‌ನಲ್ಲಿ ಹುಟ್ಟಿದ ಶಿಶು ವೈದ್ಯ ಡಾ.ರವಿ ಜಯರಾಮ್ ಕೂಡ ಪ್ರಮುಖರು. 2015ರಲ್ಲಿ 3 ಮಕ್ಕಳು ಮೃತಪಟ್ಟ ಬಳಿಕ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ ಮೊದಲ ವೈದ್ಯ ರವಿ ಆಗಿದ್ದರು. ಇದಕ್ಕೂ ಮೊದಲೇ ನರ್ಸ್ ಲೂಸಿ ಸಿಕ್ಕಿಬಿದ್ದಿದ್ದರೆ ಇನ್ನೂ ಹಲವು ಜೀವಗಳನ್ನ ಉಳಿಸಬಹುದಾಗಿತ್ತು ಎಂಬ ಮಾತು ವಿಚಾರಣೆ ವೇಳೆ ಕೇಳಿಬಂದಿದೆ.












Click it and Unblock the Notifications