Pope Francis: ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ಕಲ್ಪಿಸಿದ ಪೋಪ್!
ವ್ಯಾಟಿಕನ್: ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ಕಲ್ಪಿಸುವ ಬಗ್ಗೆ ಕಾಲ ಕಾಲಕ್ಕೆ ಚರ್ಚೆಗಳು ನಡೆಯುತ್ತಲೇ ಬಂದಿವೆ. ಇನ್ನು ಧಾರ್ಮಿಕ ವಿಚಾರಗಳಲ್ಲಿ ಮಹಿಳೆಯರ ಪ್ರಾತಿನಿಧ್ಯಕ್ಕೆ ಹೋರಾಟಗಳೇ ನಡೆದಿವೆ. ಇದೀಗ ಪೋಪ್ ಫ್ರಾನ್ಸಿಸ್ ಎಲ್ಲರಿಂತ ಒಂದು ಹೆಜ್ಜೆ ಮುಂದೆ ಇಟ್ಟು, ಬಿಷಪ್‌ಗಳ ಸಭೆಯಲ್ಲಿ ಮಹಿಳೆಯರಿಗೂ ಮತದಾನದ ಹಕ್ಕು ಕಲ್ಪಿಸಲು ಮುಂದಾಗಿದ್ದಾರೆ. ಪೋಪ್ ಫ್ರಾನ್ಸಿಸ್ ನಿರ್ಧಾರ ಈಗ ಸಂಚಲನ ಸೃಷ್ಟಿಮಾಡಿದೆ.
ಪೋಪ್ ಫ್ರಾನ್ಸಿಸ್ (Pope Francis) ಅವರ ನಿರ್ಧಾರದ ಬಗ್ಗೆ ಪರ, ವಿರೋಧದ ಚರ್ಚೆ ಕೂಡ ಶುರುವಾಗಿದೆ. ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಮಹಿಳೆಯ ಪ್ರಾತಿನಿಧ್ಯದ ಬಗ್ಗೆ ಈ ಮೊದಲಿನಿಂದ ಹಲವು ಚರ್ಚೆಗಳು ನಡೆಯುತ್ತಾ ಬಂದಿದ್ದವು. ಅದರಲ್ಲೂ ಮಹಿಳೆಯರಿಗೆ ಮತದಾನದ ಹಕ್ಕು ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಲೇ ಇತ್ತು. ಈಗ ತಮ್ಮ ನಿರ್ಧಾರವನ್ನು ಪೋಪ್ ಫ್ರಾನ್ಸಿಸ್ ಪ್ರಕಟಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಬಿಷಪ್‌ಗಳ ಮುಂಬರುವ ಸಭೆಯಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಲು ಪೋಪ್ ಫ್ರಾನ್ಸಿಸ್ ನಿರ್ಧರಿಸಿದ್ದಾರೆ.

ಪೋಪ್ ಕ್ರಾಂತಿಕಾರಿ ಬದಲಾವಣೆ
ತಮ್ಮ ಕ್ರಾಂತಿಕಾರಿ ನಿರ್ಧಾರಗಳ ಮೂಲಕವೇ ಪೋಪ್ ಫ್ರಾನ್ಸಿಸ್ ಇಡೀ ಜಗತ್ತಿನ ಗಮನ ಸೆಳೆಯುತ್ತಾ ಬಂದಿದ್ದಾರೆ. ರೋಮನ್ ಕ್ಯಾಥೋಲಿಕ್ ಚರ್ಚಿನಲ್ಲಿ ಅತಿಹೆಚ್ಚು ಪ್ರಭಾವ ಉಳ್ಳ ಸಿನೊಡ್ ಸಭೆಯಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ಕಲ್ಪಿಸಲಾಗಿದೆ. ಈ ಹೊಸ ಬದಲಾವಣೆ ಮೂಲಕ ಧಾರ್ಮಿಕ ಆದೇಶಗಳಿಗೆ ಮತದಾನದ ಪ್ರತಿನಿಧಿಗಳಾಗಿ ಐವರು ಪಾದ್ರಿಗಳ ಜತೆಗೆ ಐವರು ಸಿಸ್ಟರ್‌ಗಳು ಕೂಡ ಇರಲಿದ್ದಾರೆ. ಇನ್ನು ಸಿನೊಡ್‌ಗೆ 70 ಬಿಷಪ್ ಅಲ್ಲದ ಸದಸ್ಯರನ್ನು ನೇಮಿಸಲು ಕೂಡ ಪೋಪ್ ಫ್ರಾನ್ಸಿಸ್ ನಿರ್ಧರಿಸಿದ್ದಾರೆ. ಇದರಲ್ಲಿ ಅರ್ಧದಷ್ಟು ಸದಸ್ಯರು ಮಹಿಳೆಯರೇ ಆಗಿರುತ್ತಾರೆ. ಅವರಿಗೂ ಮತದಾನದ ಹಕ್ಕು ಇರಲಿದೆ ಎಂಬ ಮಾಹಿತಿ ಸಿಕ್ಕಿದೆ.
ದಶಕಗಳ ಬೇಡಿಕೆಗೆ ಸಮ್ಮತಿ!
ಅಂದಹಾಗೆ ಸಿನೊಡ್‌ಗಳಲ್ಲಿ ಮತದಾನದ ಹಕ್ಕು ನೀಡಿ ಎಂದು ಮಹಿಳೆಯರು ಕಳೆದ ಹಲವು ದಶಕಗಳಿಂದಲೂ ಒತ್ತಾಯಿಸುತ್ತಾ ಬಂದಿದ್ದರು. ಆದರೆ ಈವರೆಗೂ ಅದರ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಆದರೆ ಇದೀಗ ಪೋಪ್ ಫ್ರಾನ್ಸಿಸ್ ಈ ಬಗ್ಗೆ ಐತಿಹಾಸಿಕ ನಿರ್ಧಾರ ಕೈಗೊಂಡು ಮಹಿಳೆಯರಿಗೂ ಸಮಾನವಾದ ಪ್ರಾತಿನಿಧ್ಯ ಕಲ್ಪಿಸಲು ಮುಂದಾಗಿದ್ದಾರೆ. ಮುಂದಿನ ಸಭೆಯಲ್ಲಿ ಮಹಿಳೆಯರು ಕೂಡ ಮತದಾನ ಮಾಡಬಹುದು. ಬಿಷಪ್‌ಗಳ ಮುಂದಿನ ಸಭೆ ಇದೇ ವರ್ಷದ ಅಕ್ಟೋಬರ್‌ನಲ್ಲಿ ನಡೆಯಲಿದ್ದು, ಇದಕ್ಕಾಗಿ ಪೂರ್ವ ತಯಾರಿ ಆರಂಭವಾಗಿದೆ.
ವಿವಾದಕ್ಕೆ ಗುರಿಯಾಗಿದ್ದ ಪೋಪ್
ಅಷ್ಟಕ್ಕೂ ಕೆಲ ದಿನಗಳ ಹಿಂದೆ ಪೋಪ್ ಫ್ರಾನ್ಸಿನ್ ಅವರು ನೀಡಿದ್ದ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು. ಲೈಂಗಿಕತೆಯ ಒಳ್ಳೆಯ ಅಂಶಗಳನ್ನು ಪೋಪ್ ಫ್ರಾನ್ಸಿಸ್ ಶ್ಲಾಘಿಸಿರುವ ಸಾಕ್ಷ್ಯಚಿತ್ರ ಒಂದು ವಿವಾದ ಸೃಷ್ಟಿಸಿತ್ತು. ಮನುಷ್ಯನಿಗೆ ದೇವರು ನೀಡಿದ ಅತ್ಯಂತ ಸುಂದರ ಸಂಗತಿಗಳಲ್ಲಿ ಲೈಂಗಿಕತೆ ಕೂಡ ಒಂದು ಎಂಬ ಮಾತು ಸಂಚಲನ ಸೃಷ್ಟಿಮಾಡಿತ್ತು. ಇಷ್ಟೆಲ್ಲದರ ನಡುವೆ ಈಗ ಮತ್ತೆ ಜಗತ್ತಿನಾದ್ಯಂತ ಪೋಪ್ ಫ್ರಾನ್ಸಿಸ್ ಅವರ ನಿರ್ಧಾರ ಸದ್ದು ಮಾಡುತ್ತಿದೆ. ಹಲವು ವಿರೋಧ ಹಾಗೂ ಒತ್ತಡಗಳ ನಡುವೆಯೂ ಐತಿಹಾಸಿಕ ನಿರ್ಧಾರ ಪ್ರಕಟವಾಗಿದೆ.

ಒಟ್ನಲ್ಲಿ ಪೋಪ್ ಫ್ರಾನ್ಸಿನ್ ಮತ್ತೊಂದು ಐತಿಹಾಸಿಕ ನಿರ್ಧಾರದ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದ್ದಾರೆ. ಜಗತ್ತಿನ ಮೂಲೆ ಮೂಲೆಯಲ್ಲೂ ಪೋಪ್ ಫ್ರಾನ್ಸಿನ್ ಅವರ ಈ ನಿರ್ಧಾರಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಮಹಿಳೆಯರು ಈ ನಿರ್ಧಾರಕ್ಕೆ ಜೈ ಎಂದಿದ್ದಾರೆ. ಆದರೆ ಇದು ಮುಂದೆ ಯಾವ ರೀತಿ ಪರಿಣಾಮ ಬೀರಬಲ್ಲದು ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications