PM Modi Greece Visit: 40 ವರ್ಷದ ಬಳಿಕ ಮತ್ತೊಂದು ಇತಿಹಾಸ ಬರೆದ ಪ್ರಧಾನಿ ನರೇಂದ್ರ ಮೋದಿ!
ಪ್ರಧಾನಿ ಮೋದಿ ಬ್ರಿಕ್ಸ್ ಶೃಂಗಸಭೆ ಮುಗಿಸಿ ಈಗ ಮತ್ತೊಂದು ಮಹತ್ವದ ಭೇಟಿಗೆ ಅಥೆನ್ಸ್ ನಗರಕ್ಕೆ ಬಂದಿಳಿದಿದ್ದಾರೆ. ಹೀಗೆ ಇತಿಹಾಸ ನಿರ್ಮಿಸಿದ್ದಾರೆ ಪ್ರಧಾನಿ ಮೋದಿ. ಬರೋಬ್ಬರಿ 40 ವರ್ಷಗಳ ಬಳಿಕ ಭಾರತದ ಪ್ರಧಾನಿ ಗ್ರೀಸ್‌ಗೆ ಭೇಟಿ ನೀಡಿದ್ದಾರೆ. ಹಾಗಾದ್ರೆ 40 ವರ್ಷದ ಹಿಂದೆ ಗ್ರೀಸ್‌ಗೆ ಭೇಟಿ ನೀಡಿದ್ದ ಭಾರತದ ಪ್ರಧಾನಿ ಯಾರು? ಪಿಎಂ ಮೋದಿ ತಮ್ಮ ಗ್ರೀಸ್ ಭೇಟಿಯಲ್ಲಿ ಯಾವೆಲ್ಲಾ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ? ಮಾಹಿತಿ ಇಲ್ಲಿದೆ.
ಭಾರತದ ಜೊತೆ ಜಗತ್ತಿನ ಪ್ರತಿಯೊಂದು ದೇಶವೂ ಅತ್ಯುತ್ತಮ ಸಂಬಂಧ ಹೊಂದಿದೆ. ಈ ಪೈಕಿ ಕೆಲವು ರಾಷ್ಟ್ರಗಳು ಮಾತ್ರ ಕಿರಿಕ್ ಮಾಡುತ್ತಾ, ಭಾರತದ ಜೊತೆ ಜಗಳಕ್ಕೆ ನಿಂತಿವೆ. ಆದರೂ ಭಾರತದ ಬೆಳವಣಿಗೆ & ಅಭಿವೃದ್ಧಿಗೆ ಏನೂ ಅಡ್ಡಿ ಮಾಡಲು ಆಗಿಲ್ಲ. ಇಂತಿಪ್ಪ ಭಾರತದ ಜೊತೆಗೆ ಸಂಬಂಧ ಬೆಸೆಯಲು ಯುರೋಪ್ ದೇಶಗಳು ಸದಾ ಸಿದ್ಧವಾಗಿರುತ್ತವೆ. ಗ್ರೀಸ್ ಕೂಡ ಭಾರತದ ಜೊತೆಗೆ ಉತ್ತಮ ಸಂಬಂಧ ಮುಂದುವರಿಸಿಕೊಂಡು ಬರುತ್ತಿದೆ. ಆ ಸಂಬಂಧ ಮತ್ತಷ್ಟು ಸುಧಾರಿಸಲು, ಬರೋಬ್ಬರಿ 40 ವರ್ಷಗಳ ನಂತರ ಭಾರತದ ಪ್ರಧಾನಿ ಒಬ್ಬರು ಅಲ್ಲಿಗೆ ಭೇಟಿ ನೀಡಿದ್ದಾರೆ.

ಇಂದಿರಾ ಗಾಂಧಿ ಭೇಟಿಯೇ ಕೊನೆ
ಗ್ರೀಸ್ ಈಗ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಕಳೆದ ಹಲವು ವರ್ಷಗಳಿಂದಲೂ ಇದೇ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗಿದ್ದಾಗ ತನ್ನ ದೇಶದ ಆರ್ಥಿಕತೆ ಸುಧಾರಿಸಿ ಹೊಸ ಹೆಜ್ಜೆ ಇಡಲು ಗ್ರೀಸ್ ಪದೇ ಪದೆ ಪ್ರಯತ್ನಿಸಿದೆ. ಇದು ವರ್ಕೌಟ್ ಆಗಿಲ್ಲ, ಭಾರತ ಈಗ ಗ್ರೀಸ್‌ಗೆ ಸಹಾಯ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಇದರ ಜೊತೆಗೆ ಭಾರತ ಕೂಡ ಈ ಒಪ್ಪಂದಿಂದ ಲಾಭ ಪಡೆಯುವ ಸಾಧ್ಯತೆ ಇದೆ. ಈ ಕಾರಣ 1983ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ಗ್ರೀಸ್ ಭೇಟಿಯ ಬಳಿಕ, 40 ವರ್ಷಗಳ ನಂತರ ಪ್ರಧಾನಿ ಮೋದಿ ಗ್ರೀಸ್‌ಗೆ ವಿಸಿಟ್ ಕೊಟ್ಟಿದ್ದಾರೆ.
ಭಾರತಕ್ಕೆ ಇದರಿಂದ ಲಾಭ ಏನು?
ಪುರಾತನ ನಗರಿ ಗ್ರೀಸ್ ಐತಿಹಾಸಿಕ ಹಿನ್ನೆಲೆಯನ್ನ ಹೊಂದಿದೆ. ಯುರೋಪ್‌ನ ಇತಿಹಾಸಕ್ಕೆ ಗ್ರೀಸ್ (Greece) ತಳಪಾಯ ಇದ್ದಂತೆ. ಹಾಗೇ ಗ್ರೀಸ್ ದೇಶ ಹರಡಿಕೊಂಡಿರುವ ಪ್ರದೇಶ ಕೂಡ ಸೂಕ್ತವಾಗಿದೆ. ಅದರಲ್ಲೂ ಸಾವಿರಾರು ವರ್ಷಗಳ ಹಿಂದೆ ಇದೇ ಜಾಗದ ಮೂಲಕ ವ್ಯವಹಾರ ನಡೆಯುತ್ತಿತ್ತು. ಈಗಲೂ ಸಾವಿರಾರು ವರ್ಷಗಳ ಹಿಂದಿನ ಇತಿಹಾಸ ಮರಳಲಿ ಎಂಬ ಬಯಕೆ ಗ್ರೀಸ್ ದೇಶದ ನಾಯಕರದ್ದು. ಇದೇ ಹಿನ್ನೆಲೆಯಲ್ಲಿ ಗ್ರೀಸ್ ದೇಶದ ಪ್ರಧಾನಿ ಕಿರಿಯಾಕೋಸ್ ಮಿಟ್ಸೋಟಾಕಿಸ್ ಅವರು, ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನ ನೀಡಿದ್ದರು. ಇದಲ್ಲದೆ ಇನ್ನೂ ಹಲವು ಮಹತ್ವದ ಒಪ್ಪಂದಗಳಿಗೆ ಇಲ್ಲಿ ಎರಡೂ ದೇಶಗಳ ನಡುವೆ ಸಹಿ ಬೀಳಲಿದೆ.
ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ
ಬ್ರಿಕ್ಸ್ ಶೃಂಗಸಭೆ ಮುಗಿಸಿ ನೇರವಾಗಿ ದಕ್ಷಿಣ ಆಫ್ರಿಕಾದಿಂದ ಗ್ರೀಸ್ ರಾಜಧಾನಿಗೆ ಬಂದಿಳಿದ ಪ್ರಧಾನಿ ಮೋದಿಗೆ, ಅದ್ಧೂರಿಯಾಗಿ ಸ್ವಾಗತ ಕೋರಲಾಗಿದೆ. ಅಲ್ಲದೆ ಗ್ರೀಸ್ ರಾಜಧಾನಿಯ ವಿದ್ಯಾರ್ಥಿಗಳು ಮತ್ತೊಂದು ಸರ್ಪ್ರೈಸ್ ನೀಡಲಿದ್ದು, ಅಥೆನ್ಸ್‌ನಲ್ಲಿರುವ ಬಾಲಿವುಡ್ ಡ್ಯಾನ್ಸ್ ಅಕಾಡೆಮಿಯ ಗ್ರೀಸ್ ವಿದ್ಯಾರ್ಥಿಗಳು ಪ್ರಧಾನಿ ಮೋದಿಯವರಿಗಾಗಿ ನೃತ್ಯ ಪ್ರದರ್ಶಿಸಲಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ದಕ್ಷಿಣದ ಸಿನಿಮಾ RRRನ 'ನಾಟು ನಾಟು' ಹಾಡಿಗೆ ವಿದ್ಯಾರ್ಥಿಗಳು ನೃತ್ಯ ಮಾಡಲು ಸಿದ್ಧತೆ ನಡೆಸಿದ್ದಾರೆ. ಹೀಗೆ ಭಾರತದ ಸಂಸ್ಕೃತಿಗೆ ಜಗತ್ತು ಫಿದಾ ಆಗುತ್ತಿದೆ.

ಒಟ್ನಲ್ಲಿ ಭಾರತ ಮತ್ತು ಗ್ರೀಸ್ ನಡುವೆ ಹಲವು ಪ್ರಮುಖ ಮಾತುಕತೆ ನಡೆಯಲಿದೆ. ಇದು ಭವಿಷ್ಯದಲ್ಲಿ ಭಾರತಕ್ಕೆ ದೊಡ್ಡ ಲಾಭ ತಂದುಕೊಡುವ ನಿರೀಕ್ಷೆ ಇದೆ. ಅಲ್ಲದೆ ಗ್ರೀಸ್‌ನಲ್ಲಿ ವಾಸ ಇರುವ ಭಾರತೀಯರಿಗೂ ಪ್ರಧಾನಿ ಮೋದಿ ಭೇಟಿ ಖುಷಿ ಕೊಟ್ಟಿದೆ. ಯುರೋಪ್‌ನ ದೇಶಗಳಲ್ಲಿ ಭಾರತೀಯರು ಅತಿಹೆಚ್ಚು ಪ್ರಮಾಣದಲ್ಲಿ ವಾಸವಿದ್ದು, ಅದ್ರಲ್ಲೂ ಗ್ರೀಸ್‌ನಲ್ಲಿ ಭಾರತೀಯರು ಹೆಚ್ಚಾಗಿದ್ದಾರೆ. ಹೀಗೆ ಭಾರತದ ಜೊತೆಗೆ ಸ್ನೇಹ & ಸಂಬಂಧವನ್ನು ಮತ್ತೆ ಗಟ್ಟಿಯಾಗಿಸಿ ಯುರೋಪ್‌ನ ಹೆಬ್ಬಾಗಿಲು ಎಂಬ ಹೆಗ್ಗಳಿಕೆ ಗಳಿಸಲು ಗ್ರೀಸ್ ಮುಂದಾಗಿದೆ.












Click it and Unblock the Notifications