Narendra Modi: ಕೊಲಂಬೊ ತಲುಪಿದ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಮಾರ್ಗಗಳನ್ನು ಹುಡುಕಲು ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಭೇಟಿಗಾಗಿ ಕೊಲಂಬೊಗೆ ಪ್ರಯಾಣ ಮಾಡಿದ್ದಾರೆ. ಶುಕ್ರವಾರ ರಾತ್ರಿ ಪ್ರಧಾನಿ ಮೋದಿ ಕೊಲಂಬೊ ತಲುಪಿದ್ದು ಅದ್ದೂರಿ ಸ್ವಾಗತ ಸಿಕ್ಕಿದೆ.
ಕೊಲಂಬೊದಲ್ಲಿ ಮಳೆಯಾಗುತ್ತಿದ್ದು ಮಳೆಯ ನಡುವೆಯೂ ರಾತ್ರಿ 9 ಗಂಟೆಗೆ ಅವರು ವಿಮಾನ ನಿಲ್ದಾಣ ತಲುಪಿದರು. ಶ್ರೀಲಂಕಾದ ಐದು ಉನ್ನತ ಸಚಿವರು ಪ್ರಧಾನಿ ಮೋದಿಗೆ ವಿಶೇಷ ಸ್ವಾಗತ ಕೋರಿದರು.

ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳ ಸಚಿವೆ ವಿಜಿತಾ ಹೆರಾತ್, ಆರೋಗ್ಯ ಮತ್ತು ಸಮೂಹ ಮಾಧ್ಯಮ ಸಚಿವೆ ನಲಿಂದಾ ಜಯತಿಸ್ಸಾ, ಕಾರ್ಮಿಕ ಸಚಿವ ಅನಿಲ್ ಜಯಂತ, ಮೀನುಗಾರಿಕೆ ಸಚಿವೆ ರಾಮಲಿಂಗಂ ಚಂದ್ರಶೇಖರ್, ಮಹಿಳಾ ಮತ್ತು ಮಕ್ಕಳ ವ್ಯವಹಾರಗಳ ಸಚಿವೆ ಸರೋಜಾ ಸಾವಿತ್ರಿ ಪೌಲ್ರಾಜ್ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವೆ ಕ್ರಿಶಾಂತ ಅಬೇಸೇನ ವಿಮಾನ ನಿಲ್ದಾಣದಲ್ಲಿ ಹಾಜರಿದ್ದು ಪ್ರಧಾನಿ ಮೋದಿಗೆ ಸ್ವಾಗತ ಕೋರಿದರು.
ಪ್ರಧಾನಿ ಮೋದಿ ಸಂದೇಶ
ಶ್ರೀಲಂಕಾ ತಲುಪಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದಾರೆ. "ಕೊಲಂಬೊಗೆ ಬಂದಿಳಿದಿದ್ದೇನೆ, ವಿಮಾನ ನಿಲ್ದಾಣದಲ್ಲಿ ನನ್ನನ್ನು ಸ್ವಾಗತಿಸಿದ ಸಚಿವರು ಮತ್ತು ಗಣ್ಯರಿಗೆ ಕೃತಜ್ಞತೆಗಳು. ಶ್ರೀಲಂಕಾದಲ್ಲಿನ ಕಾರ್ಯಕ್ರಮಗಳನ್ನು ಎದುರು ನೋಡುತ್ತಿದ್ದೇನೆ" ಎಂದು ಬರೆದಿದ್ದಾರೆ.
ಏಪ್ರಿಲ್ 5ರಂದು ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಸಭೆಯ ಬಳಿಕ ಭಾರತ ಮತ್ತು ಶ್ರೀಲಂಕಾ ರಕ್ಷಣೆ, ಇಂಧನ ಭದ್ರತೆ ಮತ್ತು ಡಿಜಿಟಲೀಕರಣ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವುದು ಸೇರಿದಂತೆ ಸುಮಾರು 10 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ.
ರಾಜಕೀಯ ಪ್ರಕ್ಷುಬ್ದತೆ, ದಂಗೆಯಿಂದ ದಿವಾಳಿಯಾಗಿದ್ದ ಶ್ರೀಲಂಕಾ ಸದ್ಯ ಚೇತರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವುದು ಮಹತ್ವ ಪಡೆದುಕೊಂಡಿದೆ. ಮೂರು ವರ್ಷಗಳ ಹಿಂದೆ, ದೇಶವು ಭಾರಿ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿತ್ತು ಮತ್ತು ಭಾರತವು 4.5 ಬಿಲಿಯನ್ ಡಾಲರ್ ಮೌಲ್ಯದ ಆರ್ಥಿಕ ಸಹಾಯ ಮಾಡಿತ್ತು.
ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಬ್ಯಾಂಕಾಕ್ ಪ್ರವಾಸ ಮುಗಿಸಿದ ಬಳಿಕ ಶ್ರೀಲಂಕಾಗೆ ತೆರಳಿದ್ದಾರೆ. ಬ್ಯಾಂಕಾಕ್‌ನಲ್ಲಿ ಪ್ರಧಾನಿ ಮೋದಿ, BIMSTEC (ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಕೊಲ್ಲಿ ಉಪಕ್ರಮ) ಶೃಂಗಸಭೆಯಲ್ಲಿ ಭಾಗವಹಿಸಿದ್ದರು.
ಥೈಲ್ಯಾಂಡ್ ಭೇಟಿಯ ಸಮಯದಲ್ಲಿ, ಪ್ರಧಾನಿಯವರು ಥಾಯ್ ಪ್ರಧಾನಿ ಪೇಟೊಂಗ್ಟಾರ್ನ್ ಶಿನವಾತ್ರ, ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್, ಭೂತಾನ್ ಪ್ರಧಾನಿ ತ್ಸೆರಿಂಗ್ ಟೋಬ್ಗೇ ಮತ್ತು ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರನ್ನು ಭೇಟಿಯಾದರು.












Click it and Unblock the Notifications