"ಪಪ್ಪಾ ದಯವಿಟ್ಟು ಮನೆಗೆ ಬಾ" : ಮಗಳ ಆರ್ತನಾದ
ಬೆಂಗಳೂರು, ಡಿ. 29: "ಪಪ್ಪಾ ಮನೆಗೆ ಬಾ. ನನಗೆ ನೀನು ಇನ್ನೂ ಕೆಲವು ಕಾಲ ಬೇಕು. ನನ್ನ ಪಪ್ಪನನ್ನು ವಾಪಸ್ ಕರೆತನ್ನಿ. ಪಪ್ಪಾ ದಯವಿಟ್ಟು ಮನೆಗೆ ಬಾ."
ಇದು ಕಾಣೆಯಾಗಿರುವ ಏರ್‌ಏಷಿಯಾ ವಿಮಾನದ ಪೈಲಟ್‌ನ ಮಗಳು ಆರ್ತನಾದ. ಪೈಲಟ್‌ನ 22 ವರ್ಷ ವಯಸ್ಸಿನ ಮಗಳು ಆಂಜೆಲಾ ಆಂಗ್ಗಿ ರಾನಾಸ್ಟಿಯಾನಿಸ್ ಸಾಮಾಜಿಕ ಜಾಲತಾಣದಲ್ಲಿ ತನ್ನ ಹೃದಯದ ಬಡಿತವನ್ನು ಹಂಚಿಕೊಂಡ ಬಗೆಯಿದು.
ವಿಮಾನ ಸುರಕ್ಷಿತವಾಗಿ ವಾಪಸ್ ಬರುವ ಯಾವ ಭರವಸೆಯೂ ಇಲ್ಲ. ಆದರೂ, ನೂರಾರು ಪ್ರಯಾಣಿಕರೊಂದಿಗೆ ಪೈಲಟ್ ಇರ್ಯಾಂಟೊ ಕುಟುಂಬ ಕೂಡ ಪವಾಡ ಸಂಭವಿಸಿ ಎಲ್ಲರೂ ಜೀವಂತವಾಗಿ ಬರಲಿ ಎಂದು ದೇವರಲ್ಲಿ ಮೊರೆ ಇಡುತ್ತಿದೆ. [ಏರ್ ಏಷಿಯಾ ವಿಮಾನ ಜಾವಾ ಸಮುದ್ರದಲ್ಲಿ ಪತನ?]

ಇರ್ಯಾಂಟೊನ ಪಕ್ಕದ ಮನೆಯ ವ್ಯಕ್ತಿ ಹೀಗೆ ಪ್ರತಿಕ್ರಿಯಿಸಿದ್ದಾರೆ. "ಇರ್ಯಾಂಟೊ ಉತ್ತಮ ವ್ಯಕ್ತಿ. ಆದ್ದರಿಂದಲೇ ನಾವೆಲ್ಲ ಅವರನ್ನು ಕಾಲೋನಿಯ ಮುಖ್ಯಸ್ಥನನ್ನಾಗಿ ಎರಡು ವರ್ಷಗಳಿಂದ ಆರಿಸಿಕೊಂಡಿದ್ದೆವು" ಎಂದು ತಿಳಿಸಿದ್ದಾರೆ.
ಎಫ್-16 ಜೆಟ್ ಚಲಾಯಿಸಿದ್ದ ಸಾಹಸಿಗ : ಇಡೀ ದೇಶಕ್ಕೆ ಗೊತ್ತು ಏರ್‌ಏಷಿಯಾ ವಿಮಾನ ಕಾಣೆಯಾಗಿರುವುದಕ್ಕೆ ಹವಾಮಾನದ ವೈಪರೀತ್ಯವೇ ಕಾರಣ ಎಂದು. ಪೈಲಟ್‌ನನ್ನು ಯಾರೂ ದೂಷಿಸುತ್ತಿಲ್ಲ. ಏಕೆಂದರೆ ಅವರೊಬ್ಬ ನುರಿತ ಪೈಲಟ್.
ವೃತ್ತಿಪರ ಪೈಲಟ್ ಆಗುವ ಮೊದಲು ಅವರು ದೇಶದ ವಾಯು ಸೇನೆಯಲ್ಲಿ ಕೆಲಸ ಮಾಡಿದ್ದವರು. ಎಫ್-16 ಜೆಟ್ ವಿಮಾನವನ್ನು ವಾಯುವೇಗದಲ್ಲಿ ನುಗ್ಗಿಸುತ್ತ ನಿಯಂತ್ರಿಸುತ್ತಿದ್ದ ಸಾಹಸಿಗರು. [162 ಪ್ರಯಾಣಿಕರಿದ್ದ ಏರ್ ಏಷಿಯಾ ವಿಮಾನ ನಾಪತ್ತೆ]
Angela Anggi Ranastianis, Putri Pilot Air Asia Mencurahkan Isi Hatinya http://t.co/Dpk2UAN9na #QZ8501 #PrayForAirAsia
— Kurio (@KurioID) December 29, 2014 ಸಮುದ್ರದ ಮಧ್ಯೆ ವಿಮಾನದ ಅವಶೇಷ ಪತ್ತೆ? : ಕಾಣೆಯಾಗಿರುವ ವಿಮಾನದ ಹುಡುಕಾಟದಲ್ಲಿ ಭಾರತ ಸೇರಿದಂತೆ ಜಗತ್ತಿನ ಅನೇಕ ದೇಶಗಳು ಕೈಗೂಡಿಸಿವೆ. ಆಸ್ಟ್ರೇಲಿಯಾದ ವಿಮಾನವೊಂದು ಸಮುದ್ರದಲ್ಲಿ ವಿಮಾನಕ್ಕೆ ಸಂಬಂಧಪಟ್ಟಂತಹ ವಸ್ತುವನ್ನು ಗುರುತಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ನಾಂಗ್‌ಕಾ ದ್ವೀಪದ ಸಮೀಪ ವಿಮಾನಕ್ಕೆ ಸಂಬಂಧಪಟ್ಟಂತಹ ಕೆಲವು ವಸ್ತುಗಳು ಕಂಡುಬಂದಿರುವುದಾಗಿ ಆಸ್ಟ್ರೇಲಿಯಾದ ಓರಿಯನ್ ವಿಮಾನ ತಿಳಿಸಿದೆ" ಎಂದು ಜಕಾರ್ತಾ ವಾಯು ಸೇನೆಯ ಬೇಸ್ ಕಮಾಂಡರ್ ಆಗಿರುವ ರೇರ್ ಅಡ್ಮಿರಲ್ ಡ್ವಿ ಪುಟ್ರಾಂಟೊ ಹೇಳಿದ್ದಾರೆ.
"ಈ ವಸ್ತುವು ಕಾಲಿಮಂತನ್ ಸಮೀಪದ ಪಾಂಗ್‌ಕಲನ್ ಬನ್ ದ್ವೀಪದ ನೈಋತ್ಯ ದಿಕ್ಕಿನಲ್ಲಿ 160 ಕಿ.ಮೀ. ದೂರದಲ್ಲಿ ಕಂಡುಬಂದಿದೆ. ಈ ಪ್ರದೇಶವು ವಿಮಾನ ಸಂಪರ್ಕ ಕಳೆದುಕೊಂಡ ಪ್ರದೇಶದಿಂದ 1,120 ಕಿ.ಮೀ. ದೂರದಲ್ಲಿದೆ" ಎಂದು ತಿಳಿಸಿದ್ದಾರೆ.
"ಆದರೆ, ಈ ವಸ್ತು ಕಾಣೆಯಾದ ಏರ್‌ಏಷಿಯಾದ ವಿಮಾನದ್ದೇ ಎಂಬುದು ಇನ್ನೂ ದೃಢಪಟ್ಟಿಲ್ಲ" ಎಂದು ಪುಟ್ರಾಂಟೊ ಹೇಳಿದ್ದಾರೆ.












Click it and Unblock the Notifications