'ಲಂಬೀ ಜುದಾಯಿ' ಗಾಯಕಿ ರೇಷ್ಮಾ ಅಸ್ತಂಗತ
ಲಾಹೋರ್, ನ. 4: ಲಂಬೀ ಜುದಾಯಿ ಅಂತಹ ವಿಷಣ್ಣತೆ, ವ್ಯಾಕುಲತೆಯ ಗೀತೆಗಳನ್ನು ಅದ್ಭುತವಾಗಿ ಹಾಡಿದ್ದರೂ ಭಾರತೀಯ ಚಿತ್ರಪ್ರೇಮಿಗಳಿಂದ ಎಂದೂ ಬೇರ್ಪಡದ ಸಿರಿಕಂಠವೊಂದು ಗಂಟಲು ಕ್ಯಾನ್ಸರಿಗೆ ತುತ್ತಾಗಿದೆ. ಗಾಯಕಿ ರೇಷ್ಮಾ (66) ಭಾನುವಾರ ಇಹಲೋಕ ತ್ಯಜಿಸಿದ್ದಾರೆ. ಇದರೊಂದಿಗೆ ದೀಪಾವಳಿ ಅಮಾವಾಸ್ಯೆಯ ದಿನದಂದು ಚಿತ್ರರಂಗದ ಮೂರು ದೀಪಗಳು ಆರಿವೆ.
ಭಾರತದಲ್ಲಿ ಜನ್ಮ ಪಡೆದು ಅದಾಗತಾನೇ ಇಬ್ಭಾಗವಾದ ಭಾರತದಿಂದ ಬೇರ್ಪಟ್ಟ ಅಪರೂಪದ ಜಾನಪದ ಗಾಯಕಿ ಕರಾಚಿಯಲ್ಲಿ ನೆಲೆ ಕಂಡುಕೊಂಡರಾದರೂ, ಕಲೆಗೆ ಮಿತಿ ಹಾಕದೆ ತಮ್ಮ ಅಪೂರ್ವ ಗಾಯನದಿಂದ ಭಾರತೀಯರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದ್ದರು.

'ದಮಾ ದಮ್ ಮಸ್ತ್ ಖಲಂ ದರ್', 'ಹೈ ಓ ರಬ್ಬಾ' ಮೊದಲಾದ ಹಾಡುಗಳಿಂದ ಅವರು ಹೆಚ್ಚು ಜನಪ್ರಿಯರಾಗಿದ್ದರು. 1983ರಲ್ಲಿ ತೆರೆಕಂಡಿದ್ದ ಜಾಕಿಶ್ರಾಫ್ ಅಭಿನಯದ 'ಹೀರೊ' ಚಿತ್ರದಲ್ಲಿ ಹಾಡಿದ್ದ 'ಲಂಬೀ ಜುದಾಯಿ' ಗೀತೆಯ ಮೂಲಕ ಅವರು ಭಾರತೀಯ ಸಂಗೀತ ಪ್ರೇಮಿಗಳ ಮನದಲ್ಲಿ ಚಿರಸ್ಥಾಯಿಯಾದರು.
ರೇಷ್ಮಾ ಅವರು 1980ರಿಂದ ಗಂಟಲು ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ಕೋಮಾ ಸ್ಥಿತಿಗೆ ತಲುಪಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಭಾನುವಾರ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ರೇಷ್ಮಾ, ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಗಾಯಕಿಯ ನಿಧನಕ್ಕೆ ಬಾಲಿವುಡ್ ಮತ್ತು ಪಾಕಿಸ್ತಾನದ ಹಲವಾರು ಸಂಗೀತ ನಿರ್ದೇಶಕರು ಹಾಗೂ ಗಾಯಕರು ಕಂಬನಿ ಮಿಡಿದಿದ್ದಾರೆ.
1947ರಲ್ಲಿ ರಾಜಸ್ತಾನದ ಬಿಕಾನೇರ್ ನಲ್ಲಿ ಜನಿಸಿದ ರೇಷ್ಮಾ ಅವರು ತಮ್ಮ 12ನೇ ವಯಸ್ಸಿನಲ್ಲೇ ಗಾಯನ ಲೋಕಕ್ಕೆ ಪಾದರ್ಪಣೆ ಮಾಡಿದ್ದರು. ಆ ಸಂದರ್ಭದಲ್ಲಿ ಅವರು ಹಾಡಿದ್ದ 'ಲಾಲ್ ಮೇರಿ' ಹಾಡು ಇಂದಿಗೂ ಪಾಕ್ ದೂರದರ್ಶನ ಮತ್ತು ರೇಡಿಯೋಗಳಲ್ಲಿ ಪ್ರಸಾರವಾಗುತ್ತವೆ ಮತ್ತು ಜನರ ನಾಲಿಗೆ ಮೇಲೆ ನಲಿದಾಡುತ್ತಿವೆ.
ಹಿಂದಿ ಚಿತ್ರಗಳಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಹಾಡುಗಳನ್ನು ಹಾಡಿದ್ದ ರೇಷ್ಮಾ, 'ಲಂಬಿ ಜುದಾಯಿ', 'ದಮಾ ದಮ್ ಮಸ್ತ್ ಕಲಂದರ್' ಸೇರಿದಂತೆ ಹಲವು ಹಾಡುಗಳ ಮೂಲಕ ಭಾರೀ ಪ್ರಮಾಣದಲ್ಲಿ ಜನ ಮನ್ನಣೆ ಪಡೆದುಕೊಂಡಿದ್ದರು.
ಭಾರತ-ಪಾಕ್ ಗಡಿಗಳು ನನಗೆ ಎಂದೂ ಅಡ್ಡಿಯಾಗದು. ಏಕೆಂದರೆ ಕಲಾವಿದರು ಯಾರೊಬ್ಬರ ಸ್ವತ್ತೂ ಅಲ್ಲ. ಅವರು ಎಲ್ಲರಿಗೂ ಸೇರಿದ ಸಂಪತ್ತು ಎನ್ನುವ ಮೂಲಕ ಉಭಯ ದೇಶಗಳ ನಡುವೆ ಸಾಮರಸ್ಯದ ಮಾತುಗಳನ್ನಾಡಿದ್ದ ಅಪ್ಪಟ ಕಲಾವಿದೆ ರೇಷ್ಮಾ ಇನ್ನಿಲ್ಲ. (ಚಿತ್ರ ಕೃಪೆ)












Click it and Unblock the Notifications