ಟಿಂಡರ್ ಸೇರಿದಂತೆ ಐದು ಆನ್ಲೈನ್ ಡೇಟಿಂಗ್ ಆಪ್ ನಿಷೇಧ!
ಇಸ್ಲಾಮಾಬಾದ್, ಸೆ. 1: ಜನಪ್ರಿಯ ಆನ್ಲೈನ್ ಡೇಟಿಂಗ್ ಅಪ್ಲಿಕೇಷನ್ ಟಿಂಡರ್ ಸೇರಿದಂತೆ ಐದು ಅಪ್ಲಿಕೇಷನ್ ಮೇಲೆ ಪಾಕಿಸ್ತಾನ ಸರ್ಕಾರ ನಿಷೇಧ ಹೇರಿದೆ.
Recommended Video
ಪಾಕಿಸ್ತಾನದ ಟೆಲಿಕಾಂ ಪ್ರಾಧಿಕಾರ(ಪಿಟಿಎ) ಕ್ಕೆ ಹಲವಾರು ದೂರುಗಳು ಬಂದಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಮುನ್ನ ಜನಪ್ರಿಯ ಆನ್ ಲೈನ್ ವಿಡಿಯೋ ಗೇಮ್ ಪಬ್ಜಿ ಮೇಲೆ ತಾತ್ಕಾಲಿಕ ನಿಷೇಧ ಹೇರಲಾಗಿತ್ತು. ಪಬ್ಜಿ ಆಡುವುದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂದು ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿತ್ತು.
ಟಿಂಡರ್ ನಿಷೇಧ ಏಕೆ?
ಟಿಂಡರ್ ಹಾಗೂ ಇನ್ನಿತರ ಅಪ್ಲಿಕೇಷನ್ ಗಳಿಂದ ಅನೈತಿಕ ಚಟುವಟಿಕೆಗಳು ಹೆಚ್ಚಾಗಿವೆ. ಅಸಭ್ಯ ಚಿತ್ರ, ಬರಹ, ಧರ್ಮ ವಿರೋಧಿ ಕಾರ್ಯಗಳಲ್ಲಿ ಯುವ ಜನಾಂಗ ತೊಡಗಿದೆ ಎಂದು ದೂರು ಬಂದಿದ್ದರಿಂದ ಈ ಕ್ರಮ ಜರುಗಿಸಲಾಗಿದೆ. ಯೂಟ್ಯೂಬ್ ನಲ್ಲೂ ಇಂಥ ವಿಡಿಯೋಗಳನ್ನು ನಿರ್ಬಂಧಿಸಲು ಕೋರಲಾಗಿದೆ. ಇಲ್ಲದಿದ್ದರೆ ಯೂಟ್ಯೂಬ್ ಬಳಕೆ ಕೂಡಾ ಬಂದ್ ಆಗಲಿದೆ ಎಂದು ಪಿಟಿಎ ಹೇಳಿದೆ.

ಯಾವೆಲ್ಲ ಆಪ್ ಬಳಕೆ ಬಂದ್?
ಟಿಂಡರ್, ಸಲಿಂಗಿಗಳ ಬಳಕೆಗೆ ಇರುವ ಗ್ರಿಂಡ್ರ್, ಸೇಹಾಯ್, ಟ್ಯಾಗ್ಡ್ ಹಾಗೂ ಸ್ಕೌಟ್ ಆಪ್ ಬಳಕೆ ನಿರ್ಬಂಧಿಸಲಾಗಿದೆ. ಸಾಮಾಜಿಕ ಜಾಲ ತಾಣಗಳು ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿವೆ ಎಂದು ಆದೇಶದಲ್ಲಿ ಹೇಳಲಾಗಿದೆ.
ನಿಷೇಧದ ವಿರುದ್ಧ ದನಿ
ಪಾಕಿಸ್ತಾನದ ಡಿಜಿಟಲ್ ಹಕ್ಕುಗಳ ಪರ ಹೋರಾಟ ನಡೆಸುವ ಬೈಟ್ಸ್ ಎಂಬ ಗುಂಪು ಪಿಟಿಎ ಈ ಕ್ರಮವನ್ನು ಬಲವಾಗಿ ಖಂಡಿಸಿದ್ದು, ನೈತಿಕ ಪೊಲೀಸ್ ಗಿರಿಯಿಂದಲೇ ಯುವ ಜನಾಂಗ ದಿಕ್ಕು ತಪ್ಪುತ್ತಿದೆ ಎಂದಿದೆ.
ಯಾವ ಆಪ್ ಬಳಕೆ ಮಾಡಬೇಕು ಮಾಡಬಾರದು ಎಂಬ ಪರಿಜ್ಞಾನ ನಾಗರಿಕರಲ್ಲಿ ಇರುತ್ತದೆ. ಬಳಕೆ ನಿರ್ಬಂಧ, ನಿಷೇಧ ಹೇರುವ ಮೂಲಕ ಯುವ ಜನಾಂಗದ ಮೇಲೆ ಮಾನಸಿಕ ಒತ್ತಡ ಹೇರಲು ಸರ್ಕಾರ ಹೊರಡಿದೆ ಎಂದು ಬೈಟ್ ಗುಂಪಿನ ಷಹಜಾದ್ ಅಹ್ಮದ್ ಪ್ರತಿಕ್ರಿಯಿಸಿದ್ದಾರೆ.











Click it and Unblock the Notifications