24 ಗಂಟೆಯಲ್ಲಿ ಪಾಕ್ ಬಿಟ್ಟು ಹೋಗಿ, ಭಾರತದ ರಾಜತಾಂತ್ರಿಕ ಕಛೇರಿ ಸಿಬ್ಬಂದಿಗೆ ಸೂಚನೆ
ಇಸ್ಲಾಮಾಬಾದ್, ಮೇ 14: ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ, ಭಾರತದ 'ಆಪರೇಷನ್ ಸಿಂಧೂರ್' ಕಾರ್ಯಚರಣೆ ಬಳಿಕ ಭಾರತ, ಪಾಕಿಸ್ತಾನ ನಡುವಿನ ಸಂಬಂಧ ಹಳಸಿದೆ. ರಾಜತಾಂತ್ರಿಕ ಕಛೇರಿಯ ಸಿಬ್ಬಂದಿಗಳಲ್ಲಿಯೂ ಎರಡು ದೇಶಗಳು ಹಲವು ಬದಲಾವಣೆಯನ್ನು ಮಾಡಿವೆ. ಪಾಕಿಸ್ತಾನ ಭಾರತದ ರಾಜತಾಂತ್ರಿಕ ಕಛೇರಿಯಲ್ಲಿರುವ ಸಿಬ್ಬಂದಿಗಳು 24 ಗಂಟೆಯಲ್ಲಿ ದೇಶವನ್ನು ತೊರೆಯಿರಿ ಎಂದು ಸೂಚನೆ ನೀಡಿದೆ.
ಮಂಗಳವಾರ ಈ ಕುರಿತು ಪಾಕಿಸ್ತಾನದ ವಿದೇಶಾಂಗ ಇಲಾಖೆ ಆದೇಶವನ್ನು ಹೊರಡಿಸಿದೆ. ಇಸ್ಲಾಮಾಬಾದ್‌ನಲ್ಲಿರುವ ಭಾರತದ ರಾಜತಾಂತ್ರಿಕ ಕಛೇರಿಯಲ್ಲಿರುವ ಸಿಬ್ಬಂದಿಗಳು 24 ಗಂಟೆಯಲ್ಲಿ ದೇಶವನ್ನು ತೊರೆಯಬೇಕು ಎಂದು ಆದೇಶಿದೆ. ಪಾಕಿಸ್ತಾನ ಕಛೇರಿಯಲ್ಲಿರುವ ಸಿಬ್ಬಂದಿಗಳನ್ನು 'ಪರ್ಸೋನಾ ನಾನ್ ಗ್ರಾಟಾ' ಎಂದು ಘೋಷಣೆ ಮಾಡಿದೆ.

'ಪರ್ಸೋನಾ ನಾನ್ ಗ್ರಾಟಾ' ಎಂದು ಘೋಷಣೆ ಮಾಡಿದ್ದಾರೆ ಎಂದರೆ ತಮ್ಮ ದೇಶದ ಸ್ಥಾನಮಾನಕ್ಕೆ ಹೊಂದಿಕೆಯಾಗದ ಚಟುವಟಿಕೆಗಳಲ್ಲಿ ಅವರು ತೊಡಗಿದ್ದಾರೆ ಎಂದು ಅರ್ಥ. ಆದ್ದರಿಂದ ಅವರನ್ನು ದೇಶಬಿಟ್ಟು ಹೋಗುವಂತೆ ಸೂಚನೆ ನೀಡಲಾಗುತ್ತದೆ. ಭಾರತ ಸರ್ಕಾರ ಸಹ ದೆಹಲಿಯ ಪಾಕಿಸ್ತಾನ ರಾಜತಾಂತ್ರಿಕ ಕಛೇರಿಯ ಕೆಲವು ಸಿಬ್ಬಂದಿಗಳನ್ನು ಇದೇ ಮಾದರಿಯ ಘೋಷಣೆ ಮಾಡಿದ್ದು, 24 ಗಂಟೆಯಲ್ಲಿ ದೇಶಬಿಟ್ಟು ಹೊರಡಿ ಎಂದು ಸೂಚಿಸಿದೆ.
ಪಾಕಿಸ್ತಾನ ಮಂಗಳವಾರ ಭಾರತೀಯ ರಾಜತಾಂತ್ರಿಕ ಕಛೇರಿ ಸಿಬ್ಬಂದಿಯನ್ನು 'ಪರ್ಸೋನಾ ನಾನ್ ಗ್ರಾಟಾ' ಎಂದು ಘೋಷಣೆ ಮಾಡಿದ್ದು, ವಿದೇಶಾಂಗ ಸಚಿವಾಲಯದಿಂದ ಹೊರಡಿಸಲಾದ ಹೇಳಿಕೆಯಲ್ಲಿ ಈ ಸಂಬಂಧಿತ ಅಧಿಕಾರಿ 24 ಗಂಟೆಗಳ ಒಳಗೆ ಪಾಕಿಸ್ತಾನವನ್ನು ತೊರೆಯಬೇಕು ಎಂದು ಸೂಚಿಸಲಾಗಿದೆ. ಇಸ್ಲಾಮಾಬಾದ್‌ನ ಕಛೇರಿಯ ಸಿಬ್ಬಂದಿ ಅವರ ಸ್ಥಾನಮಾನಕ್ಕೆ ಹೊಂದಿಕೆಯಾಗದ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಪಾಕಿಸ್ತಾನ ಸರ್ಕಾರ ಈ ಘೋಷಣೆ ಮಾಡಿದೆ.
ಭಾರತೀಯ ಚಟುವಟಿಕೆಗಳ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿಯನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಸಿ ಪಾಕಿಸ್ತಾನದ ಈ ನಿರ್ಣಯವನ್ನು ತಿಳಿಸಲಾಗಿದೆ. ಭಾರತ ದೆಹಲಿಯಲ್ಲಿರುವ ಪಾಕಿಸ್ತಾನ ರಾಜತಾಂತ್ರಿಕ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನದ ಅಧಿಕಾರಿ ಗುಪ್ತಚರ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ದೇಶದಿಂದ ಹೊರ ಹೋಗುವಂತೆ ಸೂಚಿಸಿತ್ತು.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆ ಅಧಿಕಾರಿ ಭಾರತದಲ್ಲಿ ತನ್ನ ಸ್ಥಾನಕ್ಕೆ ಹೊಂದಿಕೆಯಾಗದ ಚಟುವಟಿಕೆಗಳಲ್ಲಿ ತೊಡಗಿದ್ದನು ಮತ್ತು ಅವನಿಗೆ ದೇಶವನ್ನು ಬಿಡಲು 24 ಗಂಟೆಗಳ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿತ್ತು. ಏಪ್ರಿಲ್ 22ರ ಬಳಿಕ ಎರಡು ದೇಶಗಳ ನಡುವೆ ನಡೆಯುತ್ತಿರುವ ಅನೇಕ ಬೆಳವಣಿಗೆಗಳಲ್ಲಿ ಇದು ಸಹ ಒಂದಾಗಿದೆ.
ರಾಜತಾಂತ್ರಿಕ ಕಛೇರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ರಾಜತಾಂತ್ರಿಕ ಮಾನದಂಡಗಳನ್ನು ಪಾಲನೆ ಮಾಡಬೇಕಾಗುತ್ತದೆ. ಈ ನಿಯಮಗಳನ್ನು ಉಲ್ಲಂಘನೆ ಮಾಡಿ, ಗುಪ್ತಚರರಂತೆ ಕಾರ್ಯ ನಿರ್ವಹಣೆ ಮಾಡಿದರೆ ಅವರನ್ನು ದೇಶಬಿಟ್ಟು ಹೋಗುವಂತೆ ಸೂಚಿಸುವ ಅಧಿಕಾರ ದೇಶಗಳಿಗೆ ಇರುತ್ತದೆ.
ಭಾರತ 'ಪರ್ಸೋನಾ ನಾನ್ ಗ್ರಾಟಾ' ಎಂದು ಘೋಷಣೆ ಮಾಡಿದ ಪಾಕಿಸ್ತಾನದ ರಾಜತಾಂತ್ರಿಕ ಕಛೇರಿ ಸಿಬ್ಬಂದಿ ಪಂಜಾಬ್‌ನಲ್ಲಿ ಕೆಲವು ದಿನಗಳ ಹಿಂದೆ ಬಂಧಿತರಾದ ಕೆಲವು ವ್ಯಕ್ತಿಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಹೇಳಿದೆ. ಈ ಘೋಷಣೆ ಬಳಿಕ ದೆಹಲಿಯಲ್ಲಿರುವ ಪಾಕಿಸ್ತಾನ ರಾಜತಾಂತ್ರಿಕ ಕಛೇರಿ ಸಿಬ್ಭಂದಿಗಳ ಸಂಖ್ಯೆ 29ಕ್ಕೆ ಇಳಿಕೆಯಾಗಿದೆ.
ಕಳೆದ ಭಾನುವಾರ ಪಂಜಾಬ್ ಪೊಲೀಸರು ಮಹಿಳೆ ಸೇರಿ ಇಬ್ಬರನ್ನು ಬಂಧಿಸಿದ್ದರು. ಇವರು ದೆಹಲಿಯಲ್ಲಿರುವ ಪಾಕಿಸ್ತಾನ ರಾಜತಾಂತ್ರಿ ಸಿಬ್ಬಂದಿಗಳ ಜೊತೆ ಗುಪ್ತಚರ ಚಟುವಟಿಕೆಯಲ್ಲಿ ತೊಡಗಿರುವುದು, ಹಣದ ವಹಿವಾಟು ನಡೆದಿರುವುದು ತಿಳಿದುಬಂದಿತ್ತು. ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಅನ್ವಯ ಈ ಇಬ್ಬರನ್ನು ಬಂಧಿಸಲಾಗಿತ್ತು.












Click it and Unblock the Notifications