ಖಮೇನಿ ಆಯ್ತು ಈಗ ಇರಾನ್ ನೂತನ ಸರ್ವಾಧಿಕಾರಿಗೂ ಜೀವಭಯ ಶುರು | Operation Roaring Lion
ಮಧ್ಯಪ್ರಾಚ್ಯ ಎಂಬುದು ಇದೀಗ ಕುಲುಮೆಗೆ ಬಿದ್ದ ಕಬ್ಬಿಣದ ರೀತಿ ಕೆಂಪಗೆ ಆಗಿದೆ, ಒಂದು ಕಡೆ ಈ ಜಾಗದಲ್ಲಿ ಅಮೆರಿಕ ದೊಡ್ಡ ಮಟ್ಟದಲ್ಲಿ ಸೇನಾ ಕಾರ್ಯಾಚರಣೆ ನಡೆಸುತ್ತಿದೆ. ಇನ್ನೊಂದು ಕಡೆ ತನ್ನ ಮೇಲೆ ದಾಳಿ ಮಾಡಿದರು ಎಂಬ ಕಾರಣಕ್ಕೆ ಇರಾನ್ ಕೂಡ ಕಂಡ ಕಂಡ ಅರಬ್ ದೇಶಗಳ ಮೇಲೆ ಅಟ್ಯಾಕ್ ಮಾಡುತ್ತಾ ಸೇಡು ತೀರಿಸಿಕೊಳ್ಳುತ್ತಿದೆ. ಇರಾನ್ ಸರ್ವಾಧಿಕಾರಿ ಖಮೇನಿ ಹತ್ಯೆ ನಂತರದಲ್ಲಿ ದೊಡ್ಡ ಬಿರುಗಾಳಿಯೇ ಇರಾನ್ ನೆಲದಲ್ಲಿ ಈಗ ಸೃಷ್ಟಿಯಾಗಿದ್ದು, ಯಾವುದೇ ಕ್ಷಣದಲ್ಲಿ ಪರಿಸ್ಥಿತಿಯು ಇನ್ನಷ್ಟು ಘೋರವಾಗುವ ಆತಂಕ ಕಾಡುತ್ತಿದೆ. ಇಂತಹ ಸಮಯದಲ್ಲೇ ಖಮೇನಿ ಬಳಿಕ ದಿಢೀರ್ ಇರಾನ್ ನೂತನ ಸರ್ವಾಧಿಕಾರಿಗೂ ಜೀವಭಯ ಶುರುವಾಗಿದೆ.
ಇರಾನ್ ಸರ್ವಾಧಿಕಾರಿಗೆ ಈ ಬಾರಿ ಹೇಗಾದರೂ ಒಂದು ಗತಿ ಕಾಣಿಸಬೇಕು, ಎಂದು ಕಳೆದ ಹಲವಾರು ವರ್ಷಗಳಿಂದ ಪ್ಲಾನ್ ಮಾಡಿತ್ತು ಇಸ್ರೇಲ್. ಅದ್ರಲ್ಲೂ ಇಸ್ರೇಲ್ ಗುಪ್ತಚರ ಸಂಸ್ಥೆ ವರ್ಷಗಟ್ಟಲೇ ಖಮೇನಿ ಇಡುತ್ತಿದ್ದ ಪ್ರತಿ ಹೆಜ್ಜೆ ಹಿಂಬಾಲಿಸುತ್ತಾ ಎಲ್ಲವನ್ನೂ ತಣ್ಣಗೆ ನೋಡುತ್ತಿತ್ತು. ಪ್ರಮುಖವಾಗಿ ಇರಾನ್‌ನ ದೇಶದ ಒಳಗೆ ತನ್ನದೇ ಗುಪ್ತಚರ ಸಿಬ್ಬಂದಿಯನ್ನ ನುಗ್ಗಿಸಿ, ಮಾಹಿತಿ ಕಲೆಹಾಕಿ ಕೊನೆಗೂ ಹತ್ಯೆಯನ್ನ ಮಾಡಿದೆ ಇಸ್ರೇಲ್. ಖಮೇನಿ ಇರುವುದು ಎಲ್ಲಿ? ಖಮೇನಿ ಹೋಗುವುದು ಎಲ್ಲಿಗೆ? ಎಂಬ ಮಾಹಿತಿಗಳ ಕಲೆ ಹಾಕಿ ದಾಳಿ ಮಾಡಿ ಕೊಂದು ಹಾಕಿದೆ. ಹೀಗೆ ಖಮೇನಿ ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ಇರಾನ್ ದೇಶಕ್ಕೆ ಹೊಸ ಸರ್ವಾಧಿಕಾರಿಯ ಆಗಮನ ಆಗಿತ್ತು. ಆದರೆ, ಇದೀಗ ಹೊಸ ಸರ್ವಾಧಿಕಾರಿಗೆ ಕೂಡ ಜೀವಭಯ ಶುರುವಾಗಿದೆ.

ಅಲಿರೆಜಾ ಅರಾಫಿಗೆ ಕೂಡ ಜೀವಭಯ
ಹೌದು, ಇರಾನ್ ಎಂಬ ದೇಶ ನಡೆಯುತ್ತಿರುವುದೇ ಸರ್ವಾಧಿಕಾರಿಗಳ ಆಡಳಿತದ ಮೇಲೆ. ಇರಾನ್‌ಗೆ ಸರ್ವಾಧಿಕಾರಿ ಇಲ್ಲದೆ ಆಡಳಿತ ನಡೆಸಲು ಬರಲ್ಲ ಎನ್ನಬಹುದು. ಹೀಗಿದ್ದಾಗ ಖಮೇನಿ ಇಸ್ರೇಲ್ ಸೇನೆ ದಾಳಿಯಲ್ಲಿ ಜೀವ ಬಿಟ್ಟ ನಂತರ ತಕ್ಷಣವೇ ಮತ್ತೊಬ್ಬ ಸರ್ವಾಧಿಕಾರಿಗೆ ಅಧಿಕಾರ ವಹಿಸಿತ್ತು ಇರಾನ್ ದೇಶ. ಖಮೇನಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹಾಗೂ ಈ ಮೊದಲೇ ಖಮೇನಿಯೇ ನಿರ್ಧಾರ ಮಾಡಿದ್ದಂತೆ ಅಲಿರೆಜಾ ಅರಾಫಿ ಪಾಲಿಗೆ ಇರಾನ್ ಸರ್ವಾಧಿಕಾರಿ ಆಗುವ ಅವಕಾಶ ಬಂದಿತ್ತು. ಹೀಗೆ ಅಲಿರೆಜಾ ಅರಾಫಿ ಅಧಿಕಾರ ವಹಿಸಿಕೊಂಡು ಒಂದು ವಾರ ಕಳೆದಿಲ್ಲ, ಅದಾಗಲೇ ಅರಾಫಿಗೂ ಜೀವ ಭಯ ಕಾಡುತ್ತಿದೆಯಂತೆ. ಏಕೆಂದರೆ ಖಮೇನಿ ರೀತಿಯಲ್ಲೇ ಅಲಿರೆಜಾ ಅರಾಫಿ ಹತ್ಯೆಗೂ ಈಗ ಪ್ಲಾನ್ ನಡೆದಿದೆ ಎಂಬ ಮಾತು ಇರಾನ್‌ನಲ್ಲಿ ಸಂಚಲನ ಸೃಷ್ಟಿಸಿದೆ.
ಅಮೆರಿಕ ಹಾಗೂ ಇಸ್ರೇಲ್ ಪಡೆಗಳ ಹುಡುಕಾಟ
1989 ಸಮಯದಲ್ಲಿ ಖಮೇನಿ ಇರಾನ್ ದೇಶದ ಸರ್ವಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಇಡೀ ಇರಾನ್ ದೇಶ ಖಮೇನಿ ಹಿಡಿತಕ್ಕೆ ಸಿಲುಕಿ ನಲುಗಿ ಹೋಗಿತ್ತು ಎಂಬ ಆರೋಪ ಇದೆ. ಅದರಲ್ಲೂ ಖಮೇನಿ ಸಾವಿನ ನಂತರ ಸ್ವತಃ ಇರಾನ್ ನೆಲದಲ್ಲೇ ಜನರು ಸಂಭ್ರಮಿಸಿದ ವಿಡಿಯೋ & ಫೋಟೋ ವೈರಲ್ ಆಗಿದ್ದವು. ಹೀಗಿದ್ದಾಗ ಇರಾನ್ ದೇಶದ ನೂತನ ಸರ್ವಾಧಿಕಾರಿ ಅಲಿರೆಜಾ ಅರಾಫಿಗೆ ಕೂಡ ಜೀವಭಯ ಶುರುವಾಗಿದ್ದು, ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ಈಗ ಅರಾಫಿ ಇರುವ ಜಾಗಕ್ಕೆ ಭಾರಿ ದೊಡ್ಡ ಮಟ್ಟದಲ್ಲಿ ಹುಡುಕಾಟ ಆರಂಭಿಸಿವೆಯಂತೆ.
ಫೆಬ್ರವರಿ 28 ಶನಿವಾರ ದಿಢೀರ್ ಇಸ್ರೇಲ್ ಸೇನೆ ಇರಾನ್ ಮೇಲೆ ದಾಳಿ ಶುರು ಮಾಡಿತ್ತು ಶನಿವಾರ ಯುದ್ಧ ಶುರುವಾದ ನಂತರ, ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಾ ಇದೆ. ಮತ್ತೊಂದು ಸುತ್ತು ಇರಾನ್ ವಿರುದ್ಧ ದಾಳಿ ನಡೆಸಲು ಹಾಗೂ ಈ ಮೂಲಕ ರಿವೇಂಜ್ ತೆಗೆದುಕೊಳ್ಳಲು ಅಮೆರಿಕ & ಇಸ್ರೇಲ್‌ನ ನಾಯಕರು ಕಾಯುತ್ತಿದ್ದಾರೆ. ಇಂತಹ ಸಮಯದಲ್ಲೇ ಅಲಿರೆಜಾ ಅರಾಫಿ ಪದೇ ಪದೇ ಸ್ಥಳ ಬದಲಾವಣೆ ಮಾಡುತ್ತಿರುವ ಮಾಹಿತಿ ಹರಿದಾಡುತ್ತಿದೆ.












Click it and Unblock the Notifications