ರಷ್ಯಾ-ಉಕ್ರೇನ್ ಜಗಳದಲ್ಲಿ ಭಾರತಕ್ಕೆ ಭರ್ಜರಿ ಲಾಭ!
ನವದೆಹಲಿ: ಇಬ್ಬರ ಜಗಳದಲ್ಲಿ ಮೂರನೇ ವ್ಯಕ್ತಿಗೆ ಲಾಭವಾಗುವುದು ಮಾಮೂಲು. ಹೀಗೆ ರಷ್ಯಾ ಹಾಗೂ ಉಕ್ರೇನ್ ಯುದ್ಧ ಇಡೀ ಜಗತ್ತಿನ ನಿದ್ದೆಗೆಡಿಸಿದ್ದರೆ, ಭಾರತಕ್ಕೆ ಮಾತ್ರ ಭರ್ಜರಿ ಲಾಭವಾಗಿದೆ. ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ ಪರಿಣಾಮ ರಷ್ಯಾದಿಂದ ತೈಲ ಆಮದನ್ನು ಯುರೋಪ್ ದೇಶಗಳು ನಿಷೇಧಿಸಿದ ಪರಿಣಾಮ, ಭಾರತದ ರಿಫೈನರಿಗಳಿಗೆ ಊಹಿಸಲಾಗದಷ್ಟು ಲಾಭ ಸಿಕ್ಕಿದೆ.
2022ರ ಫೆಬ್ರವರಿ 24ರಂದು ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡುತ್ತಿದ್ದಂತೆ ಜಗತ್ತೇ ಒಂದು ಕ್ಷಣ ಸ್ತಬ್ಧವಾಗಿತ್ತು. ಯಾವ ಕ್ಷಣದಲ್ಲಿ ಇದು ಮತ್ತೊಂದು ಮಹಾಯುದ್ಧವಾಗಿ, ಇಡೀ ಜಗತ್ತನ್ನೇ ಬಲಿ ಪಡೆಯುತ್ತದೋ? ಎಂಬ ಚಿಂತೆ ಶುರುವಾಗಿತ್ತು. ಮತ್ತೊಂದು ಕಡೆ ರಷ್ಯಾ ವಿರುದ್ಧ ಆರ್ಥಿಕ ಯುದ್ಧ ಸಾರಿದ್ದ ಅಮೆರಿಕ ಮತ್ತು ಅದರ ಯುರೋಪಿನ ಮಿತ್ರ ರಾಷ್ಟ್ರಗಳು, ಯುರೋಪ್‌ಗೆ ರಷ್ಯಾದಿಂದ ಬರುತ್ತಿದ್ದ ತೈಲವನ್ನು ತಕ್ಷಣ ನಿಲ್ಲಿಸಿದ್ದವು. ಆದರೆ ಇದೇ ನಿರ್ಧಾರ ಭಾರತಕ್ಕೆ ವರವಾಗಿ ಪರಿಣಮಿಸಿದೆ.

ಹಿಂಬಾಗಿಲ ಮೂಲಕ ಎಂಟ್ರಿ:
ಐರೋಪ್ಯ ರಾಷ್ಟ್ರಗಳು ರಷ್ಯಾ ತೈಲಕ್ಕೆ ನಿಷೇಧ ಹೇರಿದ್ದವು ನಿಜ. ಆದರೆ ನೇರವಾಗಿ ತೈಲ ಸರಬರಾಜು ಮಾಡುವ ಬದಲು, ಪರೋಕ್ಷವಾಗಿ ರಷ್ಯಾ ತನ್ನ ತೈಲವನ್ನು ಯುರೋಪ್ ದೇಶಗಳಿಗೆ ಕಳುಹಿಸುತ್ತಿದೆ. ಯುರೋಪ್ ದೇಶಗಳ ತೈಲದ ಹಸಿವು ತುಂಬಾ ಹೆಚ್ಚು. ಯುದ್ಧಕ್ಕೆ ಮೊದಲು ಭಾರತದಿಂದ ನಿತ್ಯ 1 ಲಕ್ಷ 54 ಸಾವಿರ ಬ್ಯಾರಲ್ ತೈಲ ಯುರೋಪ್ ದೇಶಗಳಿಗೆ ಸಪ್ಲೈ ಆಗುತ್ತಿತ್ತು. ಆದರೆ ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ಬಳಿಕ ತೈಲ ರಫ್ತಿನ ಪ್ರಮಾಣ ದಿಢೀರ್ 2 ಲಕ್ಷ ಬ್ಯಾರಲ್ ತಲುಪಿದೆ. ಈ ಮೂಲಕ ರಷ್ಯಾ ಕೂಡ ಭಾರತದ ಸಹಾಯದಿಂದ ಭರ್ಜರಿ ಲಾಭ ಮಾಡಿಕೊಳ್ಳುತ್ತಿದೆ. ರಷ್ಯಾ ತೈಲವೇ ಭಾರತಲ್ಲಿ ಸಂಸ್ಕರಣೆಯಾಗಿ ಭಾರಿ ಪ್ರಮಾಣದಲ್ಲಿ ಯುರೋಪ್ ತಲುಪುತ್ತಿದೆ ಎನ್ನಲಾಗಿದೆ.
2021-22ಕ್ಕೆ ಹೋಲಿಸಿದರೆ 2022-23ರ ಅವಧಿಯಲ್ಲಿ ಭಾರತದಿಂದ ಶೇಕಡಾ 12ರಿಂದ 16ರಷ್ಟು ಹೆಚ್ಚು ಡೀಸೆಲ್ ಯುರೋಪ್ ರಾಷ್ಟ್ರಗಳಿಗೆ ರಫ್ತಾಗಿದೆ. ಹಾಗೇ ಗ್ಯಾಸ್ ಉತ್ಪನ್ನಗಳ ರಫ್ತಿನಲ್ಲಿ ಭರ್ಜರಿ ಶೇ.30ರಷ್ಟು ಏರಿಕೆ ಕಂಡುಬಂದಿದೆ. ಮತ್ತೊಂದು ಕಡೆ ಜೆಟ್ ವಿಮಾನಗಳಿಗೆ ಬಳಸುವ ತೈಲ ರಫ್ತಿನಲ್ಲೂ ಶೇ.50ರಷ್ಟು ಏರಿಕೆ ಕಂಡುಬಂದಿದೆ. ಅಮೆರಿಕ ಕೂಡ ಭಾರತದಿಂದ ರಫ್ತಾಗುತ್ತಿರುವ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದು, 2022-23ರ ಅವಧಿಯಲ್ಲಿ ಆಮದು ಪ್ರಮಾಣ ಭಾರಿ ಏರಿಕೆ ಕಂಡಿದೆ.
ಭಾರತಕ್ಕೆ ಲಾಭ:
ಇದಕ್ಕೆ ಹೇಳುವುದು ಜಾಗತಿಕವಾಗಿ ಯಾವುದೇ ರಾಷ್ಟ್ರದ ದ್ವೇಷ ಕಟ್ಟಿಕೊಳ್ಳದಿದ್ದರೆ, ಆರ್ಥಿಕ ಅಭಿವೃದ್ಧಿ ಸುಲಭ ಅಂತಾ. ಭಾರತದ ಜಾಣ ನಡೆ ಇಲ್ಲಿ ಮತ್ತೊಮ್ಮೆ ಲಾಭ ತಂದುಕೊಟ್ಟಿದೆ. ಅತ್ತ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳ ಜೊತೆ ಸಂಬಂಧವನ್ನು ವೃದ್ಧಿಸಿ, ಇತ್ತ ರಷ್ಯಾ ಜೊತೆಗಿನ ಸ್ನೇಹವನ್ನೂ ಕಾಪಾಡಿಕೊಂಡು ಭಾರತ ಆರ್ಥಿಕವಾಗಿ ಲಾಭ ಮಾಡಿಕೊಂಡಿದೆ. ಆದರೆ ಭಾರತದಲ್ಲಿ ಮಾತ್ರ ತೈಲದ ದರ ಕಡಿಮೆ ಆಗುತ್ತಿಲ್ಲವೇಕೆ? ಎಂಬ ಪ್ರಶ್ನೆಗೆ ಸೂಕ್ತ ಉತ್ತರ ಸಿಗುತ್ತಿಲ್ಲ.
ರಷ್ಯಾ ಅನಿವಾರ್ಯ:
ಯುರೋಪ್ ರಾಷ್ಟ್ರಗಳಿಗೆ ರಷ್ಯಾ ತೈಲ ಅನಿವಾರ್ಯ. ಅಕಸ್ಮಾತ್ ರಷ್ಯಾದಿಂದ ತೈಲ ಸಿಗದಿದ್ದರೆ ಯುರೋಪ್ ಕಥೆ ಮುಗಿದೇ ಹೋಯಿತು ಅಂತಾ ಅರ್ಥ. ಅಮೆರಿಕದ ಕೈಯಲ್ಲಿ ಅಷ್ಟು ಪ್ರಮಾಣದ ತೈಲ ಸರಬರಾಜು ಮಾಡಲು ಸಾಧ್ಯವಿಲ್ಲ. ಹೀಗಾಗಿ ರಷ್ಯಾದಿಂದ ಬಂದ ತೈಲವನ್ನು ಭಾರತದಲ್ಲಿ ಸಂಸ್ಕರಿಸಿ ಯುರೋಪ್‌ಗೆ ರಫ್ತು ಮಾಡಲಾಗುತ್ತಿದೆ. ಇದು ರಷ್ಯಾ, ಭಾರತಕ್ಕೆ ಭರ್ಜರಿ ಲಾಭ ತಂದುಕೊಟ್ಟಿದೆ.
ಒಟ್ಟಾರೆ ಹೇಳುವುದಾದರೆ ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ನಷ್ಟದಲ್ಲಿದ್ದ ಭಾರತದ ತೈಲ ಸಂಸ್ಕರಣಾ ಘಟಕಗಳಿಗೆ ಭರ್ಜರಿ ಲಾಭ ಸಿಕ್ಕಂತಾಗಿದೆ. ಜೊತೆಗೆ ಜಾಗತಿಕವಾಗಿ ತೈಲ ರಫ್ತು ಕ್ಷೇತ್ರವನ್ನು ಕೂಡ ತನ್ನ ವಶ ಮಾಡಿಕೊಳ್ಳುತ್ತಿದೆ ಭಾರತ. ಅದರಲ್ಲೂ ಪ್ರಮುಖವಾಗಿ ತೈಲ ರಫ್ತು ಕ್ಷೇತ್ರದಲ್ಲಿ ಇರಾಕ್ ಸಾಧನೆಯನ್ನೂ ಭಾರತ ಮೀರಿಸುತ್ತಿದೆ.












Click it and Unblock the Notifications