ಏರ್‌ಏಷಿಯಾ ವಿಮಾನ ಜಾವಾ ಸಮುದ್ರದಲ್ಲಿ ಪತನ?
ಜಕಾರ್ತಾ, ಡಿ. 29: ನಾಪತ್ತೆಯಾಗಿರುವ 162 ಜನರಿದ್ದ ಏರ್‌ಏಷಿಯಾ ವಿಮಾನ ಸಮುದ್ರದ ತಳದಲ್ಲಿರಬಹುದು ಎಂದು ಇಂಡೋನೇಷಿಯಾ ನ್ಯಾಶನಲ್ ಸರ್ಚ್ ಆ್ಯಂಡ್ ರೆಸ್ಕ್ಯೂ ಏಜೆನ್ಸಿ ಮುಖ್ಯಸ್ಥ ಬಾಂಬಂಗ್ ಸೋಲಿಸ್ಟ್‌ಯೋ ಅಭಿಪ್ರಾಯಪಟ್ಟಿದ್ದಾರೆ.
"ನಮಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ವಿಮಾನವು ಸಮುದ್ರದ ಅಡಿಯಲ್ಲಿರಬಹುದೆಂದು ಊಹಿಸಲಾಗಿದೆ. ಏಕೆಂದರೆ ವಿಮಾನವು ಕಾಣೆಯಾಗುವಾಗ ಜಾವಾ ಸಮುದ್ರದ ಮೇಲ್ಭಾಗದಲ್ಲಿತ್ತು" ಎಂದು ಬಾಂಬಂಗ್ ಹೇಳಿದರು. [ಎಂಎಚ್370 ಕಣ್ಮರೆ ಪ್ರಕರಣ ದುರಂತ ಅಂತ್ಯ]

"ವಿಮಾನ ಕಾಣೆಯಾಗುವ ಮೊದಲು ಕಲಿಮಂಥನ್ ಮತ್ತು ಬೆಲಿಟಂಗ್ ದ್ವೀಪಗಳ ನಡುವೆ ಚಂಡಮಾರುತ ಕಂಡುಬಂದ ಕಾರಣ ಬೇರೆ ದಾರಿ ಸೂಚಿಸುವಂತೆ ಪೈಲಟ್ ಕೋರಿದ್ದ. ಈ ಸಂದರ್ಭದಲ್ಲಿ ವಿಮಾನವು ಇಂಡೋನೇಶಿಯಾ ಪ್ರಾಂತ್ಯದ ಜಾವಾ ಸಮುದ್ರದ ಮೇಲ್ಭಾಗದಲ್ಲಿ 32,000 ಅಡಿಗಳ ಎತ್ತರದಲ್ಲಿ ಹಾರುತ್ತಿತ್ತು" ಎಂದು ಅಧಿಕಾರಿಗಳು ತಿಳಿಸಿದ್ದಾರೆ. [ಏರ್ ಏಷಿಯಾ ವಿಮಾನ ನಾಪತ್ತೆ]
ಇಂಡೋನೇಷಿಯಾದ ಸುರಬಯಾ ನಗರದಿಂದ ಭಾನುವಾರ ಬೆಳಗ್ಗೆ 5.20 ಗಂಟೆಗೆ ಹೊರಟಿದ್ದ ಕಾಣೆಯಾಗಿರುವ ಏರ್‌ಏಷಿಯಾ ವಿಮಾನ ಸಿಂಗಪುರದ ಚಾಂಗಿ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 8.30ಕ್ಕೆ ಇಳಿಯಬೇಕಾಗಿತ್ತು.












Click it and Unblock the Notifications