ಕ್ಯಾಲಿಫೋರ್ನಿಯಾದಲ್ಲಿ ಹಿಂದೂ ದೇವಾಲಯ ವಿರೂಪಗೊಳಿಸಿದ ದುಷ್ಕರ್ಮಿಗಳು
ಕ್ಯಾಲಿಫೋರ್ನಿಯ, ಡಿಸೆಂಬರ್ 23: ಶಂಕಿತ ಖಲಿಸ್ತಾನ್ ಪರ ಕಾರ್ಯಕರ್ತರು ಕ್ಯಾಲಿಫೋರ್ನಿಯಾದ ನೆವಾರ್ಕ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನವನ್ನು ವಿರೂಪಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾದ ಹಿಂದೂ ದೇವಾಲಯವನ್ನು ಖಲಿಸ್ತಾನ್ ಪರ ಮತ್ತು ಭಾರತ ವಿರೋಧಿ ಘೋಷಣೆಗಳೊಂದಿಗೆ ವಿರೂಪಗೊಳಿಸಿರುವ ಬೆನ್ನಲ್ಲೇ ನೆವಾರ್ಕ್‌ನ ಸ್ವಾಮಿನಾರಾಯಣ ಮಂದಿರ ವಸನಾ ಸಂಸ್ಥೆಯಲ್ಲಿನ ವಿರೂಪ ಮಾಡಿರುವ ಫೋಟೋಗಳನ್ನು ಹಿಂದೂ-ಅಮೆರಿಕನ್ ಫೌಂಡೇಶನ್ ಹಂಚಿಕೊಂಡಿದೆ.

ಹಿಂದೂ ದೇವಾಲಯದ ಹೊರ ಗೋಡೆಯನ್ನು ಭಾರತ ವಿರೋಧಿ ಬರಹದಿಂದ ವಿರೂಪಗೊಳಿಸಲಾಗಿದೆ. ನೆವಾರ್ಕ್ ಪೊಲೀಸ್ ಸೇವೆಯು ವಿಧ್ವಂಸಕ ಕೃತ್ಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ. ದೇವಾಲಯದ ಆಡಳಿತದ ಪ್ರಕಾರ, ಈ ಘಟನೆ ಗುರುವಾರ ರಾತ್ರಿ ನಡೆದಿದೆ. ದೇವಾಲಯದ ಸಮೀಪದಲ್ಲಿ ವಾಸಿಸುವ ಭಕ್ತರಲ್ಲಿ ಒಬ್ಬರು ಕಟ್ಟಡದ ಹೊರ ಗೋಡೆಯ ಮೇಲೆ ಕಪ್ಪು ಶಾಯಿಯಲ್ಲಿ ಹಿಂದೂ ವಿರೋಧಿ ಮತ್ತು ಭಾರತ ವಿರೋಧಿ ಬರಹವನ್ನು ಮೊದಲು ಪತ್ತೆಹಚ್ಚಿದರು. ಆಡಳಿತ ಮಂಡಳಿಗೆ ತಕ್ಷಣ ಮಾಹಿತಿ ನೀಡಲಾಯಿತು ಎಂದು ದೇವಸ್ಥಾನದ ಆಡಳಿತ ವಕ್ತಾರ ಭಾರ್ಗವ್ ರಾವಲ್ ಎಎನ್‌ಐಗೆ ತಿಳಿಸಿದ್ದಾರೆ.
ಈ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಶೀಘ್ರ ಕ್ರಮ ಕೈಗೊಳ್ಳುವಂತೆ ಕೋರಿರುವುದಾಗಿ ಹೇಳಿದೆ. "ಕ್ಯಾಲಿಫೋರ್ನಿಯಾದ ನೆವಾರ್ಕ್‌ನಲ್ಲಿರುವ ಎಸ್‌ಎಂವಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರವನ್ನು ಭಾರತ ವಿರೋಧಿ ಬರಹದ ಮೂಲಕ ವಿರೂಪಗೊಳಿಸಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಈ ಘಟನೆಯು ಭಾರತೀಯ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ. ತ್ವರಿತ ತನಿಖೆ ಮತ್ತು ವಿಧ್ವಂಸಕರ ವಿರುದ್ಧ ಯುಎಸ್ ಅಧಿಕಾರಿಗಳಿಂದ ತ್ವರಿತ ಕ್ರಮಕ್ಕಾಗಿ ನಾವು ಒತ್ತಾಯಿಸಿದ್ದೇವೆ" ಭಾರತೀಯ ರಾಯಭಾರ ಕಚೇರಿ ಎಕ್ಸ್ ನಲ್ಲಿ ಹೇಳಿದೆ.
ಹಿಂದೂ ದೇವಾಲಯವನ್ನು ಗುರಿಯಾಗಿಸಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇದೇ ರೀತಿಯ ಘಟನೆಗಳು ಯುಎಸ್ ಮತ್ತು ಅದರ ನೆರೆಯ ಕೆನಡಾದಲ್ಲಿ ಸಂಭವಿಸಿವೆ. ಖಲಿಸ್ತಾನ್ ಬೆಂಬಲಿಗರಿಂದ ಹೆಚ್ಚುತ್ತಿರುವ ಚಟುವಟಿಕೆಗಳ ಬಗ್ಗೆ ಭಾರತವು ಈ ಹಿಂದೆ ಕಳವಳ ವ್ಯಕ್ತಪಡಿಸಿದೆ. ವಿವಿಧ ದೇಶಗಳಲ್ಲಿ ಪ್ರತ್ಯೇಕತಾವಾದಿ ಭಾವನೆಗಳನ್ನು ಪ್ರಚೋದಿಸಲು ಪ್ರಯತ್ನಿಸುತ್ತಿರುವ ಸಂಘಟನೆಗಳು ಮತ್ತು ವ್ಯಕ್ತಿಗಳ ಮೇಲೆ ಹಿಡಿತ ಸಾಧಿಸಿದೆ.
ಆಗಸ್ಟ್‌ನಲ್ಲಿ ಕೆನಡಾದ ಸರ್ರೆಯ ದೇವಸ್ಥಾನವನ್ನು ಖಲಿಸ್ತಾನಿ ಬೆಂಬಲಿಗರು ವಿರೂಪಗೊಳಿಸಿದ್ದರು. ಬ್ರಿಟಿಷ್ ಕೊಲಂಬಿಯಾದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾದ ಸರ್ರೆಯಲ್ಲಿರುವ ಲಕ್ಷ್ಮಿ ನಾರಾಯಣ ಮಂದಿರದ ಗೋಡೆಗಳು ಮತ್ತು ಗೇಟ್‌ಗಳ ಮೇಲೆ ಖಲಿಸ್ತಾನ್ ಪರ ಪೋಸ್ಟರ್‌ಗಳನ್ನು ಹಾಕಲಾಗಿತ್ತು.












Click it and Unblock the Notifications