ಲಂಡನ್ ಬಳಿಕ ಅಮೆರಿಕದಲ್ಲೂ ಖಲಿಸ್ತಾನಿಗಳ ಉಪಟಳ: ಭಾರತದ ಕಚೇರಿಗೆ ನುಗ್ಗಿ ದಾಂಧಲೆ- ಬೇರೆ ದೇಶಗಳಲ್ಲೂ ಆತಂಕದ ವಾತಾವರಣ
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತದ ಕಾನ್ಸುಲೇಟ್ ಮೇಲೆ ಖಲಿಸ್ತಾನಿ ಬೆಂಬಲಿಗರು ದಾಳಿ ನಡೆಸುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ನವದೆಹಲಿ, ಮಾರ್ಚ್ 20: ಲಂಡನ್‌ನಲ್ಲಿರುವ ( London ) ಭಾರತೀಯ ಹೈಕಮಿಷನ್ ಕಟ್ಟಡದಲ್ಲಿ ಖಲಿಸ್ತಾನ್ ( Khalistan ) ಬೆಂಬಲಿಗರು ಭಾರತದ ರಾಷ್ಟ್ರ ಧ್ವಜವನ್ನು ಕೆಳಗಿಳಿಸಿದ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಅಮೆರಿಕದ ( US ) ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತದ ಕಾನ್ಸುಲೇಟ್ ಮೇಲೆ ಖಲಿಸ್ತಾನಿ ಬೆಂಬಲಿಗರು ದಾಳಿ ನಡೆಸುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಖಲಿಸ್ತಾನ್ ಬೆಂಬಲಿಗರು ದಾಳಿ ನಡೆಸುತ್ತಿರುವುದು ಈ ವಿಡಿಯೊದಲ್ಲಿ ಚಿತ್ರಿಕರಣವಾಗಿದೆ. ಅದರಲ್ಲಿ ಜೋರಾಗಿ ಪಂಜಾಬಿ ಸಂಗೀತ ಮೊಳಗುತ್ತಿರುವುದು ಕೇಳಿಬರುತ್ತಿದೆ. ಖಲಿಸ್ತಾನ್ ಬೆಂಬಲಿಗರು ಕಟ್ಟಡದ ಹೊರ ಗೋಡೆಯ ಮೇಲೆ 'ಫ್ರಿ ಅಮೃತ್‌ಪಾಲ್' ಎಂಬ ಬರಹವನ್ನೂ ಗೋಡೆಗಳ ಮೇಲೆ ಬರೆದಿದ್ದಾರೆ.

ದಾಳಿಕೋರರು ಸ್ವತಃ ಚಿತ್ರೀಕರಿಸಿದ ಹಲವಾರು ವಿಡಿಯೊಗಳು ಹೊರಬಂದಿವೆ. ಪುರುಷರು ಮೊದಲು ಖಲಿಸ್ತಾನದ ಧ್ವಜಗಳನ್ನು ಬೀಸುತ್ತಿರುವುದು ಕಂಡುಬಂದಿದೆ. ಕೋಲು ದೊಣ್ಣೆಗಳಿಂದ ಕಾನ್ಸುಲೇಟ್ ಕಟ್ಟಡದ ಬಾಗಿಲುಗಳು ಮತ್ತು ಕಿಟಕಿಗಳ ಗಾಜಗಳನ್ನು ಒಡೆದು ಹಾಕುತ್ತಿರುವುದೂ ಚಿತ್ರಿಕರಣಗೊಂಡಿದೆ.
ಭಾರತೀಯ ಕಾನ್ಸುಲೇಟ್‌ನ ನೌಕರರು, ಪ್ರವೇಶದ್ವಾರದ ಬಳಿಯ ಕಟ್ಟಡದಲ್ಲಿ ಹಾಕಲಾಗಿದ್ದ ಖಲಿಸ್ತಾನ್ ಧ್ವಜಗಳನ್ನು ತೆಗೆದುಹಾಕುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಇದನ್ನು ನೋಡಿದ ಖಲಿಸ್ತಾನಿ ಬೆಂಬಲಿಗರು ಇದ್ದಕ್ಕಿದ್ದಂತೆ ಬ್ಯಾರಿಕೇಡ್ ಅನ್ನು ಭೇದಿಸಿ ಘೋಷಣೆಗಳನ್ನು ಕೂಗುತ್ತಿರುವುದನ್ನು ಇಲ್ಲಿ ನೋಡಬಹುದು.

ನಂತರ ಧ್ವಜಗಳನ್ನು ತೆಗೆಯುತ್ತಿದ್ದ ಇಬ್ಬರು ವ್ಯಕ್ತಿಗಳು ಕಾನ್ಸುಲೇಟ್ ಒಳಗೆ ಹೋಗಿದ್ದಾರೆ. ಕೆಲವು ಪ್ರತಿಭಟನಾಕಾರರು ಕೈಯಲ್ಲಿ ಧ್ವಜಗಳನ್ನು ಹಿಡಿದು ಅವರನ್ನು ಹಿಂಬಾಲಿಸಿದ್ದಾರೆ. ಬಾಗಿಲು ಮುಚ್ಚಿದ್ದರಿಂದಾಗಿ ಕಟ್ಟಡದ ಒಳಗೆ ಪ್ರವೇಶಿಸಲು ಖಲಿಸ್ತಾನಿ ಬೆಂಬಲಿಗರಿಗೆ ಸಾಧ್ಯವಾಗಿಲ್ಲ.
ಮರದ ಕೋಲುಗಳು ಮತ್ತು ಧ್ವಜಗಳ ರಾಡ್‌ಗಳಿಂದ ಬಾಗಿಲು ಮತ್ತು ಕಿಟಕಿಗಳಿಗೆ ಹೊಡೆಯುವುದನ್ನು ಕಾಣಬಹುದು. ಒಬ್ಬ ವ್ಯಕ್ತಿ ಕತ್ತಿಯಿಂದ ಕಿಟಕಿಗಳನ್ನು ಒಡೆದು ಹಾಕುತ್ತಿರುವುದನ್ನು ನೋಡಬಹುದು.
ಇಂದು ಮುಂಜಾನೆ, ಖಲಿಸ್ತಾನ್ ಬೆಂಬಲಿಗರ ಕ್ರಮಕ್ಕೆ ಪ್ರತಿಕ್ರಿಯೆಯಾಗಿ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಟ್ಟಡದಲ್ಲಿ ಬೃಹತ್ ತ್ರಿವರ್ಣ ಧ್ವಜವನ್ನು ಹಾಕಲಾಯಿತು.
ಲಂಡನ್‌ನ ಆಲ್ಡ್‌ವಿಚ್‌ನಲ್ಲಿರುವ ಇಂಡಿಯಾ ಹೌಸ್‌ನಲ್ಲಿ ಬೃಹತ್ ರಾಷ್ಟ್ರಧ್ವಜದ ಛಾಯಾಚಿತ್ರವು ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಕ್ರಮವನ್ನು ಶ್ಲಾಘಿಸಿದ್ದಾರೆ. ಖಲಿಸ್ತಾನ್ ಧ್ವಜವನ್ನು ಎಸೆಯುತ್ತಿರುವುದನ್ನು ನೋಡಿದ ಹೈಕಮಿಷನ್ ಅಧಿಕಾರಿಯ ದಿಟ್ಟ ಕ್ರಮವನ್ನು ಹಲವರು ಶ್ಲಾಘಿಸಿದ್ದಾರೆ.
ಭಾರತದ ಧ್ವಜವನ್ನು ಕೆಳಗಿಳಿಸಿದ ವಿಡಿಯೊಗಳು ಆನ್‌ಲೈನ್‌ನಲ್ಲಿ ಹರಿದಾಡಲು ಪ್ರಾರಂಭಿಸಿದ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾನುವಾರ ಸಂಜೆ ಬ್ರಿಟಿಷ್ ಡೆಪ್ಯೂಟಿ ಹೈಕಮಿಷನರ್ ಕ್ರಿಸ್ಟಿನಾ ಸ್ಕಾಟ್ ಅವರನ್ನು ಕರೆಸಿತ್ತು.
ಸಚಿವಾಲಯವು ಹೈಕಮಿಷನ್ ಆವರಣದಲ್ಲಿ ಭದ್ರತೆಯ ಕೊರತೆ ಬಗ್ಗೆ ವಿವರಣೆಯನ್ನು ಕೋರಿತು. ಭಾರತದ ರಾಜತಾಂತ್ರಿಕರು ಮತ್ತು ಸಿಬ್ಬಂದಿಗಳ ಬಗ್ಗೆ ಯುಕೆ ಸರ್ಕಾರದ ಉದಾಸೀನತೆ ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.
ಬ್ರಿಟನ್‌ನಲ್ಲಿರುವ ಭಾರತೀಯ ಕಾನ್ಸುಲೇಟ್‌ಗಳ ಮೇಲೆ ನಡೆದ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್, ಈ ರೀತಿಯ ಘಟನೆಗಳು ಜರುಗದಂತೆ ಬ್ರಿಟನ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
'ಇದು ಸಂಭವಿಸಲು ಅವಕಾಶ ನೀಡಿರುವುದು ಸಂಪೂರ್ಣ ಆಘಾತಕಾರಿಯಾಗಿದೆ. ನಿಜವಾದ ಸಮಸ್ಯೆ ಹೈಕಮಿಷನ್ ಒಳಗೆ ಇಲ್ಲ. ಆದರೆ, ಇದು ಹೊರಗಿನ ಆವರಣದಲ್ಲಿ ನಡೆದಿದೆ. ಇದನ್ನು ನಿಯಂತ್ರಿಸುವುದು ಸ್ಥಳೀಯ ಅಧಿಕಾರಿಗಳ ಜವಾಬ್ದಾರಿಯಾಗಿದೆ' ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬ್ರಿಟಿಷ್ ಅಧಿಕಾರಿಗಳು ಹಾಗೂ ಪೊಲೀಸರು ಸಂಪೂರ್ಣವಾಗಿ ತಮ್ಮ ಕರ್ತವ್ಯವನ್ನು ನಿರ್ಲಕ್ಷಿಸಿದ್ದಾರೆ. ಈ ಅಸಂಬದ್ಧ ಘಟನೆಗಳು ಸಂಭವಿಸಲು ಅವಕಾಶ ನೀಡಿದ್ದಾರೆ. ಇದು ನಮಗೆ ಸಹಿಸಲಾಗದ ದೊಡ್ಡ ಅವಮಾನವಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಎಎನ್‌ಐಗೆ ತಿಳಿಸಿದ್ದಾರೆ.
ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಅನ್ನು ಖಾಲಿಸ್ತಾನಿ ಉಗ್ರರು ಭಾನುವಾರ ಧ್ವಂಸಗೊಳಿಸಿದ ನಂತರ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ












Click it and Unblock the Notifications