ಅಮೆರಿಕ & ಇರಾನ್ ತಿಕ್ಕಾಟದಲ್ಲಿ ಹೆಚ್ಚಾಯ್ತು ಪರಮಾಣು ದಾಳಿ ಭೀತಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಆತಂಕ
ಮಧ್ಯಪ್ರಾಚ್ಯ ಭಾಗದಲ್ಲಿ ಶಾಂತಿ ಎಂಬುದು ಮರೀಚಿಕೆಯಾಗಿ ಹೋಗಿದೆ, ಏಕೆಂದರೆ ಒಂದಲ್ಲ ಒಂದು ಯುದ್ಧ ಮಧ್ಯಪ್ರಾಚ್ಯ ಹೊತ್ತಿ ಉರಿಯುವಂತೆ ಮಾಡುತ್ತಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಭಾಗದ ಬಹುತೇಕ ದೇಶಗಳು ಒಬ್ಬರ ಮೇಲೆ ಮತ್ತೊಬ್ಬರು ದಾಳಿ ಮಾಡಿಕೊಂಡಿವೆ. ಇಸ್ರೇಲ್ ಮತ್ತು ಹಲವು ದೇಶಗಳ ನಡುವೆ ಘೋರ ಕದನ ನಡೆದು ಹೋಗಿತ್ತು. ಇರಾನ್ & ಇಸ್ರೇಲ್ ಯುದ್ಧ ಕೊನೆಗೆ ಪರಮಾಣು ದಾಳಿ ಭಯ ಕೂಡ ಹುಟ್ಟುಹಾಕಿತ್ತು. ಆದರೆ ಹೇಗೋ ಅಂತಿಮವಾಗಿ ಎರಡೂ ದೇಶಗಳ ನಡುವೆ ಶಾಂತಿ ಒಪ್ಪಂದ ನಡೆದು ಪರಿಸ್ಥಿತಿ ಶಾಂತವಾಗಿತ್ತು. ಆದರೆ ಈಗ ಇರಾನ್ ಮತ್ತು ಅಮೆರಿಕದ ಮಧ್ಯೆ ಶುರುವಾಗಿರುವ ತಿಕ್ಕಾಟ ಇನ್ನೊಮ್ಮೆ ಪರಮಾಣು ದಾಳಿ ಭಯ ಹುಟ್ಟಿಸಿದೆ.
ಇರಾನ್ ದೇಶದಲ್ಲಿ ನಡೆದ ಪ್ರತಿಭಟನೆಗಳಿಗೆ ಇಸ್ರೇಲ್ ಮತ್ತು ಅಮೆರಿಕ ನಾಯಕರು ಹೊಣೆ ಎಂದಿದ್ದ ಇರಾನ್ ಸರ್ವಾಧಿಕಾರಿ ಖಮೇನಿ, ಈ ಬಗ್ಗೆ ಎಚ್ಚರಿಕೆ ಕೊಟ್ಟ ನಂತರ ಅಮೆರಿಕ ಮತ್ತೆ ಕೆರಳುತ್ತಿದೆ. ಹಾಗೇ ಮತ್ತೊಂದು ಕಡೆ ಇಸ್ರೇಲ್ ಕೂಡ ಈ ವಿಚಾರವಾಗಿ ಎಚ್ಚರಿಕೆಯ ಸಂದೇಶ ರವಾನಿಸಿದೆ. ಇಷ್ಟೆಲ್ಲದರ ನಡುವೆ ಈಗಿನ ಪರಿಸ್ಥಿತಿ ಅವಲೋಕನ ಮಾಡಿರುವ ತಜ್ಞರು ಅಪಾಯದ ಮುನ್ಸೂಚನೆ ನೀಡುತ್ತಿದ್ದಾರೆ. ಪರಮಾಣು ದಾಳಿ ಸಾಧ್ಯತೆ ಹಾಗೂ ಘೋರ ವಿನಾಶದ ಮುನ್ಸೂಚನೆ ಇದೀಗ ಸಿಗುತ್ತಿದೆ, ಅಮೆರಿಕ & ಇರಾನ್ ನಡುವೆ ಇದೇ ರೀತಿ ವಾತಾವರಣ ಇದ್ದರೆ ಇಡೀ ಜಗತ್ತಿಗೆ ಅದು ಸಮಸ್ಯೆ ತಂದೊಡ್ಡಬಹುದು ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ.

ಇರಾನ್ ಬಳಿ ಪರಮಾಣು ಅಸ್ತ್ರ?
ಮಧ್ಯಪ್ರಾಚ್ಯದ ಯಾವುದೇ ದೇಶಗಳ ಬಳಿ ಈವರೆಗೂ ಪರಮಾಣು ಅಸ್ತ್ರ ಇರುವ ಬಗ್ಗೆ ಅಧಿಕೃತವಾಗಿ ಮಾಹಿತಿ ಇಲ್ಲವಾದರೂ, ಇರಾನ್ ಮಾತ್ರ ಮೊಟ್ಟ ಮೊದಲ ಬಾರಿಗೆ ಸ್ವಯಂ ಪರಮಾಣು ಅಸ್ತ್ರಗಳ ಅಭಿವೃದ್ಧಿಗೆ ಮುಂದಾಗಿತ್ತು. ಇದೇ ವಿಚಾರ ಇರಾನ್ ಮತ್ತು ಇಸ್ರೇಲ್ ನಡುವೆ ದೊಡ್ಡ ಗಲಾಟೆಗೂ ಕಾರಣ ಆಗಿತ್ತು. ಅಲ್ಲದೆ ಅಮೆರಿಕ ಕೂಡ ಇರಾನ್‌ಗೆ ಇದೇ ವಿಚಾರವಾಗಿ ಸಾಕಷ್ಟು ಬಾರಿ ಎಚ್ಚರಿಕೆ ಸಂದೇಶವನ್ನು ಕೂಡ ನೀಡಿದೆ. ಇಷ್ಟೆಲ್ಲದರ ನಡುವೆ ಕೂಡ ಇರಾನ್ ಈಗಾಗಲೇ ಗುಟ್ಟಾಗಿ ಪರಮಾಣು ಅಸ್ತ್ರಗಳ ಅಭಿವೃದ್ಧಿ ಮಾಡಿಕೊಂಡಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ರಷ್ಯಾ ಕೆಲ ತಿಂಗಳ ಹಿಂದೆ ಇರಾನ್‌ಗೆ ಪರಮಾಣು ಅಸ್ತ್ರ ಕೊಡುವುದಾಗಿ ಹೇಳಿತ್ತು. ಇದೀಗ ಈ ಎಲ್ಲಾ ವಿಚಾರಗಳ ಆಧಾರದಲ್ಲಿ ಆತಂಕ ಎದುರಾಗಿದ್ದು, ಅಮೆರಿಕ ಮತ್ತು ಇರಾನ್ ತಿಕ್ಕಾಟ ಪರಮಾಣು ದಾಳಿ ಭಯ ಹುಟ್ಟಿಸಿದೆ.
ಸೇನಾ ಕಾರ್ಯಾಚರಣೆಗೆ ಅಮೆರಿಕ ಸಿದ್ಧತೆ?
ಅಮೆರಿಕ ಮತ್ತು ಇಸ್ರೇಲ್‌ಗೆ ಮಧ್ಯಪ್ರಾಚ್ಯ ಭಾಗದಲ್ಲಿ ಮಾತು ಕೇಳದೇ ಇರುವ ಏಕೈಕ ದೇಶವೆಂದರೆ ಅದು ಇರಾನ್ ಮಾತ್ರ. ಇನ್ನುಳಿದ ದೇಶಗಳು ಒಂದೋ ಅಮೆರಿಕ ಹಾಗೂ ಇಸ್ರೇಲ್ ಮಾತು ಕೇಳುತ್ತಿವೆ ಅಥವಾ ಮಾತು ಕೇಳದೆ ವಶವಾಗಿವೆ. ಹೀಗಿದ್ದಾಗ ತಮ್ಮ ಮಾತು ಕೇಳದೆ ಪದೇ ಪದೇ ಕಿರಿಕ್ ಮಾಡಿ ಜಗಳಕ್ಕೆ ಬರುವ ಇರಾನ್ ದೇಶವನ್ನು ಸುಮ್ಮನಾಗಿಸಲು ಇದೀಗ ಅಮೆರಿಕ ಕಸರತ್ತು ಮುಂದುವರಿಸಿದೆ.
ಹೀಗಿದ್ದಾಗ ಸೇನಾ ಕಾರ್ಯಾಚರಣೆ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಈಗಾಗಲೇ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆ ಬಗ್ಗೆ ಯೋಚಿಸಿಲ್ಲ ಎಂದು ಹೇಳಿದ್ದರೂ, ಇರಾನ್ ಹಾಗೂ ಅಮೆರಿಕ ನಡುವೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದೆ. ಹೀಗಾಗಿಯೇ ತಜ್ಞರು ಪರಮಾಣು ಅಸ್ತ್ರಗಳ ಬಳಕೆ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅಕಸ್ಮಾತ್ ಇಬ್ಬರ ನಡುವೆ ಯುದ್ಧ ನಡೆದರೆ ಇರಾನ್ ಹೇಗೋ ಪರಮಾಣು ಅಸ್ತ್ರಗಳನ್ನು ತರಬಹುದು ಎಂಬ ಆತಂಕ ಇದಾಗಿದೆ. ಹೀಗಾಗಿ ಎರಡೂ ದೇಶಗಳ ನಡುವೆ ಶಾಂತ ವಾತಾವರಣ ಮುಂದುವರಿಯಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications