ಇರಾನ್ ಮತ್ತೊಂದು ಯಡವಟ್ಟು; ಬ್ರಿಟನ್ ರಾಯಭಾರಿ ಬಂಧನ
ಲಂಡನ್, ಜನವರಿ 12 : ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕೆ ಇರಾನ್ ಬ್ರಿಟನ್ ರಾಯಭಾರಿಯನ್ನು ಬಂಧಿಸಿದೆ. ಅಂತರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕೆ ಬಂಧಿಸಲಾಗಿದೆ.
ಇರಾನ್ ರಾಜಧಾನಿ ತೆಹ್ರಾನ್‌ನಲ್ಲಿ ಬ್ರಿಟನ್ ರಾಯಭಾರಿಯನ್ನು ಬಂಧಿಸಲಾಗಿದೆ. ಇರಾನ್ ರಾಯಭಾರಿಯನ್ನು ಬಂಧಿಸಿರುವುದನ್ನು ಬ್ರಿಟನ್ ಖಚಿತಪಡಿಸಿದೆ. ಯಾವ ಆಧಾರದ ಮೇಲೆ ಬಂಧಿಸಿದೆ ಎಂಬುದು ತಿಳಿದಿಲ್ಲ ಎಂದು ಹೇಳಿದೆ.
"ಪ್ರಸ್ತುತ ಇರಾನ್ ಕವಲು ದಾರಿಯಲ್ಲಿದೆ. ಮುಂದಿನ ಹಾದಿಯನ್ನು ನೀವು ಆಯ್ಕೆ ಮಾಡಿಕೊಳ್ಳಿ" ಎಂದು ಬ್ರಿಟನ್‌ನ ಸಚಿವರು ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ. ಇರಾನ್-ಅಮೆರಿಕ ನಡುವಿನ ಸಂಬಂಧ ಈಗಾಗಲೇ ಹಳಸಿದೆ.

ಇರಾನ್ ಉಕ್ರೇನ್ ವಿಮಾನ ಹೊಡೆದುಳಿಸಿದ್ದನ್ನು ಖಂಡಿಸಿ ತೆಹ್ರಾನ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಬ್ರಿಟನ್ ರಾಯಭಾರಿ ಪಾಲ್ಗೊಂಡಿದ್ದರು. ಆದ್ದರಿಂದ, ಅವರನ್ನು ಬಂಧಿಸಿ ಒಂದು ಗಂಟೆಯ ಬಳಿಕ ಬಿಡುಗಡೆ ಮಾಡಲಾಗಿದೆ.
176 ಪ್ರಯಾಣಿಕರಿದ್ದ ಉಕ್ರೇನ್ ವಿಮಾನವನ್ನು ಕ್ಷಿಪಣಿ ದಾಳಿ ನಡೆಸಿ ಪತನಗೊಳಿಸಲಾಗಿದೆ ಎಂಬುದು ಈಗಾಗಲೇ ತನಿಖೆಯಲ್ಲಿ ಸಾಬೀತಾಗಿದೆ. ಆಕಸ್ಮಿಕವಾಗಿ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ಇರಾನ್ ಹೇಳಿದ್ದು, ಉಕ್ರೇನ್ ಕ್ಷಮೆ ಕೇಳಿದೆ.
ಅಮೆರಿಕ, ಕೆನಡ ಮತ್ತು ಉಕ್ರೇನ್ ಜಂಟಿಯಾಗಿ ಈಗಾಗಲೇ ವಿಮಾನ ಪತನದ ಬಗ್ಗೆ ತನಿಖೆಯನ್ನು ಕೈಗೊಂಡಿವೆ. ಉಕ್ರೇನ್ ವಿಮಾನದಲ್ಲಿದ್ದ ಬ್ರಿಟನ್ ಪ್ರಜೆಗಳ ಕುಟುಂಬಗಳಿಗೆ ಅಗತ್ಯ ಪರಿಹಾರ ನೀಡುವುದಾಗಿ ಇರಾನ್ ಈಗಾಗಲೇ ಹೇಳಿದೆ.
ಜನವರಿ 8ರಂದು ಇರಾನ್‌ನ ತೆಹ್ರಾನ್‌ನಿಂದ ಉಕ್ರೇನ್‌ಗೆ ಹೊರಟಿದ್ದ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. 9 ಸಿಬ್ಬಂದಿಗಳು ಸೇರಿ 176 ಜನರು ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದರು.
ಉಕ್ರೇನ್ ವಿಮಾನ ಪತನಗೊಳ್ಳುವ ಕೆಲವೇ ಗಂಟೆಗಳ ಮೊದಲು ಇರಾಕ್‌ನಲ್ಲಿರುವ ಅಮೆರಿಕ ಸೇನಾನೆಲೆ ಗುರಿಯಾಗಿಸಿಕೊಂಡು ಇರಾನ್ ಖಂಡಾಂತರ ಕ್ಷಿಪಣಿ ದಾಳಿ ಮಾಡಿತ್ತು. ವಿಮಾನ ಟೇಕಾಫ್‌ಗೂ ಮೊದಲು ಇರಾನ್ ಕ್ಷಿಪಣಿಗಳನ್ನು ಉಡಾಯಿಸಿದ ಚಿತ್ರಗಳನ್ನು ಅಮೆರಿಕದ ಉಪಗ್ರಹಗಳು ಸೆರೆ ಹಿಡಿದಿದ್ದವು.












Click it and Unblock the Notifications