ಸಂಘರ್ಷದಲ್ಲಿ ಸುಡುತ್ತಿರುವ ಸುಡಾನ್‌ನಿಂದ ಭಾರತೀಯರ ರಕ್ಷಣೆ
ಖರ್ಟೋಮ್, ಸುಡಾನ್: ಸೇನಾ ಸಂಘರ್ಷದಲ್ಲಿ ಅಕ್ಷರಶಃ ಸುಡುಗಾಡಿನಂತೆ ಭಾಸವಾಗುತ್ತಿರುವ ಸುಡಾನ್ ದೇಶದಲ್ಲಿ ಭಾರತೀಯರು ಸಿಲುಕಿ ಪರದಾಡುತ್ತಿದ್ದಾರೆ. ತಮ್ಮನ್ನು ರಕ್ಷಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಭಾರತೀಯರು ಮನವಿ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಅಪಾಯದಲ್ಲಿರುವ ಭಾರತೀಯರ ರಕ್ಷಣೆಗೆ ಬಂದಿರುವ ಸೌದಿ ಅರೇಬಿಯಾ, ಭಾರತೀಯರನ್ನ ಸುಡಾನ್‌ನಿಂದ (Sudan) ರಕ್ಷಣೆ ಮಾಡಿದೆ.
500ಕ್ಕೂ ಹೆಚ್ಚು ಜನರು ಸುಡಾನ್ ಸಂಘರ್ಷದಲ್ಲಿ ಮೃತಪಟ್ಟಿದ್ದು, 3,500ಕ್ಕೂ ಹೆಚ್ಚು ಜನ ಸಂಘರ್ಷದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯರ ರಕ್ಷಣೆಗೆ ಭಾರಿ ಒತ್ತಡ ಏರ್ಪಡುತ್ತಿದ್ದು, ಪ್ರಧಾನಿ ಮೋದಿ ಕೂಡ ಈ ಕುರಿತು ಇತ್ತೀಚೆಗೆ ಮಹತ್ವದ ಸಭೆಯನ್ನ ನಡೆಸಿ ಆದೇಶ ನೀಡಿದ್ದರು. ಇಷ್ಟೆಲ್ಲಾ ಬೆಳವಣಿಗೆ ನಡುವೆ ಭಾರತೀಯರ ನೆರವಿಗೆ ಸೌದಿ ಅರೇಬಿಯಾ ಬಂದಿದೆ. ನೂರಾರು ಜನರನ್ನ ಸಂಘರ್ಷ ಪೀಡಿತ ಸುಡಾನ್‌ನಿಂದ ರಕ್ಷಿಸಿ, ಜೆಡ್ಡಾಗೆ ಕರೆತರಲಾಗಿದೆ ಎಂದು ಸೌದಿ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಭಾರತೀಯರಿಗೆ ಸೌದಿ ನೆರವು
ತಿನ್ನಲು ಅನ್ನವಿಲ್ಲದೆ, ಬಡತನದ ಬೇಗೆಯಲ್ಲಿ ಬೇಯುತ್ತಿರುವ ಸುಡಾನ್ ನೆಲದಲ್ಲಿ ಹಿಂಸೆ ಶುರುವಾಗಿದೆ. ಮಿಲಿಟರಿ, ಮುಖ್ಯ ಪ್ಯಾರಾ ಮಿಲಿಟರಿ ಪಡೆ ನಡುವೆ ಉಂಟಾದ ಸಂಘರ್ಷದಲ್ಲಿ ಸಿಲುಕಿ ಲಕ್ಷಾಂತರ ಅಮಾಯಕರು ಪರದಾಡುತ್ತಿದ್ದಾರೆ. ಮನೆಯಿಂದ ಹೊರ ಬಂದರೆ ಹೆಣಗಳು ಬೀಳುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ವಿವಿಧ ಕಾರಣಕ್ಕೆ ಸುಡಾನ್‌ಗೆ ತೆರಳಿದ್ದ ಭಾರತೀಯರು ಕೂಡ ಸಂಕಷ್ಟಕ್ಕೆ ಸಿಲುಕಿ ಜೀವಭಯದಲ್ಲಿ ನರಳುತ್ತಿದ್ದಾರೆ. ಈ ಹೊತ್ತಲ್ಲೇ ಅಂತಾರಾಷ್ಟ್ರೀಯ ಸಮುದಾಯ ಕೂಡ ಭಾರತೀಯರಿಗೆ ನೆರವು ನೀಡಲು ಮುಂದಾಗಿದೆ.
ಹಕ್ಕಿಪಿಕ್ಕಿ ಜನಾಂಗದವರ ಪರದಾಟ
ಸುಡಾನ್ ನೆಲದಲ್ಲಿ ಸಿಲುಕಿ ನರಳುತ್ತಿರುವ ಭಾರತೀಯರ ಪೈಕಿ ಕನ್ನಡಿಗರು ಕೂಡ ಸೇರಿದ್ದಾರೆ. ಅದರಲ್ಲೂ ಹಕ್ಕಿಪಿಕ್ಕಿ ಜನಾಂಗ ಈ ಸಂಕಷ್ಟದ ಬಲೆಯಲ್ಲಿ ನರಳುವಂತಾಗಿದೆ. ಈಗಾಗಲೇ ಹಕ್ಕಿಪಿಕ್ಕಿ ಜನಾಂಗದ ಜನರನ್ನು ಸುಡಾನ್ ನೆಲದಿಂದ ರಕ್ಷಿಸಿ ತರುವಂತೆ ಕೇಂದ್ರದ ಮೇಲೆ ರಾಜ್ಯದ ನಾಯಕರು ಒತ್ತಡ ಹೇರಿದ್ದಾರೆ. ಸುಡಾನ್ ನೆಲದಲ್ಲಿ ಕದನ ವಿರಾಮ ಕೂಡ ಘೋಷಣೆ ಆಗಿದ್ದು, ಭಾರತೀಯರ ರಕ್ಷಣೆಗೂ ಇದರಿಂದ ಸಹಾಯವಾಗಿ ಹಕ್ಕಿಪಿಕ್ಕಿ ಜನಾಂಗದವರು ಮತ್ತೆ ಸುರಕ್ಷಿತವಾಗಿ ಕನ್ನಡ ನಾಡು ಸೇರುವ ನಿರೀಕ್ಷೆ ಇದೆ.
ಸುಡಾನ್ ನೆಲದಲ್ಲಿ ಮಾತೆತ್ತಿದರೆ ಹಿಂಸೆ!
ಈಗ ಸುಡಾನ್‌ನಲ್ಲಿ ನಡೆಯುತ್ತಿರುವ ಹಿಂಸೆ ಮೊದಲೇನಲ್ಲ. ಇಲ್ಲಿ ಪದೇಪದೆ ಹಿಂಸೆ ನಡೆಯುತ್ತಿದೆ. ಇದಕ್ಕೆ ಕಾರಣ ಹಲವು. ಆದರೆ 1956ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ, 1958, 1969, 1985, 1989, 2019 ಮತ್ತು 2021ರಲ್ಲಿ ಸುಡಾನ್ ಭೀಕರ ದಂಗೆ ಹಾಗೂ ಹಿಂಸಾಚಾರ ನೋಡಿದೆ. 1989ರಲ್ಲಿ ನಡೆದ ದಂಗೆ ಪರಿಣಾಮ ಒಮರ್ ಅಲ್-ಬಶೀರ್ ಅಧಿಕಾರಕ್ಕೆ ಬಂದಿದ್ದ. ಸತತ 3 ದಶಕ ಅಂದರೆ 30 ವರ್ಷಕ್ಕೂ ಹೆಚ್ಚು ಕಾಲ ಈತ ಸರ್ವಾಧಿಕಾರಿಯಾಗಿ ಸುಡಾನ್ ನೆಲವನ್ನು ಆಳಿದ್ದ.

ಹೀಗೆ ಒಮರ್ ಅಲ್-ಬಶೀರ್ ಸರ್ವಾಧಿಕಾರಿ ಸರ್ಕಾರವನ್ನು ಕಿತ್ತೊಗೆಯಲು 2019ರಲ್ಲಿ ಹಿಂಸೆ ಭುಗಿಲೆದ್ದಿತ್ತು. ಈ ದಂಗೆಯಲ್ಲಿ ಒಮರ್ ಅಲ್-ಬಶೀರ್ ಅಧಿಕಾರ ಬಿಟ್ಟುಕೊಟ್ಟಿದ್ದ. ಇಷ್ಟೆಲ್ಲಾ ಬೆಳವಣಿಗೆ ಬಳಿಕ ಸುಡಾನ್ ಮತ್ತೆ ಶಾಂತಿಯ ಜೀವನ ನಡೆಸಲಿದೆ ಎಂದೇ ಜಗತ್ತು ಭಾವಿಸಿತ್ತು. ಆದರೆ ಈಗ ಸೇನಾ ಸಂಘರ್ಷ ಶುರುವಾಗಿ, ಮಿಲಿಟರಿ, ಮುಖ್ಯ ಪ್ಯಾರಾ ಮಿಲಿಟರಿ ಪಡೆಯ ಸೈನಿಕರು ಬಡಿದಾಡಿಕೊಳ್ಳುತ್ತಿದ್ದಾರೆ. ಇದರಿಂದ ಜನರು ಕೂಡ ದಿಕ್ಕೇ ತೋಚದ ಪರಿಸ್ಥಿತಿಯಲ್ಲಿದ್ದಾರೆ.
ಒಟ್ಟಾರೆ ಯಾರದ್ದೋ ತಪ್ಪಿಗೆ ಅಮಾಯಕರು ಹಿಂಸೆಯ ಕುಲುಮೆಯಲ್ಲಿ ನರಳುವಂತಾಗಿದೆ. ಸರ್ಕಾರ ಕೂಡ ಭಾರತೀಯರ ರಕ್ಷಣೆಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಇಷ್ಟೆಲ್ಲದರ ಮಧ್ಯೆ ಮತ್ತೊಮ್ಮೆ ಸುಡಾನ್ ವಿನಾಶದ ಅಂಚಿಗೆ ತಲುಪುತ್ತಿರುವ ಭಯ ಅಂತಾರಾಷ್ಟ್ರೀಯ ಸಮುದಾಯಕ್ಕೆ ತಲೆನೋವು ತರಿಸುತ್ತಿದೆ. ಇಡೀ ಆಫ್ರಿಕಾದಲ್ಲೇ ಸುಡಾನ್ ಕಂಡಷ್ಟು ದಂಗೆಯನ್ನ ಬೇರೆ ಯಾವುದೇ ಆಫ್ರಿಕಾ ದೇಶ ಕಂಡಿಲ್ಲ ಎಂಬುದು ಗಮನಾರ್ಹ.












Click it and Unblock the Notifications