ಗೆಟ್ ಔಟ್ ಎಂದು ಕಿರುಚಿ ಅಮೆರಿಕದಲ್ಲಿ ಭಾರತೀಯನ ಹತ್ಯೆ
ಕನ್ಸಾಸ್, ಫೆಬ್ರವರಿ 24 : ಅರಬ್ ಎಂದು ತಪ್ಪು ತಿಳಿದು ಭಾರತೀಯನೊಬ್ಬನನ್ನು ಗುಂಡಿಕ್ಕಿ ಅಮೆರಿಕದ ಕನ್ಸಾಸ್ ನಲ್ಲಿ ಶುಕ್ರವಾರ ಹತ್ಯೆಗೈಯಲಾಗಿದೆ. ಈ ಶೂಟೌಟಲ್ಲಿ ಮತ್ತೊಬ್ಬ ಭಾರತೀಯನಿಗೆ ಗಾಯವಾಗಿದೆ.
ಭಾರತೀಯನ ಮೇಲೆ ಗುಂಡು ಹಾರಿಸುವ ಮುನ್ನ ಹತ್ಯೆ ಮಾಡಿದವ "ನನ್ನ ದೇಶದಿಂದ ಹೊರಹೋಗು" ಎಂದು ಕಿರುಚಿದ ಎಂದು ಕನ್ಸಾಸ್ ಸ್ಟಾರ್ ವರದಿ ಮಾಡಿದೆ.
ಮೃತನನ್ನು ಶ್ರೀನಿವಾಸ ಕುಚಿಭೋತ್ಲಾ ಎಂದು ಗುರುತಿಸಲಾಗಿದೆ. ಗಾಯಾಳು ಅಲೋಕ್ ಮದಸಾನಿ. ಇಬ್ಬರೂ ಜರ್ಮಿನ್ ಕಂಪನಿಯಲ್ಲಿ ಏವಿಯೇಷನ್ ಸಿಸ್ಟಂಸ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

ಸೌತ್ ಓಲೇತ್ ನಲ್ಲಿರುವ ಆಸ್ಟಿನ್ಸ್ ಬಾರ್ ಅಂಡ್ ಗ್ರಿಲ್ ನಲ್ಲಿ ಈ ಘಟನೆ ನಡೆದಿದೆ. ಇಬ್ಬರು ಭಾರತೀಯರನ್ನು ಕಾಣುತ್ತಿದ್ದಂತೆ ಜನಾಂಗೀಯ ನಿಂದನೆ ಆರಂಭಿಸಿದ ಆಡಂ ಪುರಿಂಟೋ ಎಂಬಾತ ಇಬ್ಬರ ಮೇಲೆ ಗುಂಡು ಹಾರಿಸಿದ್ದಾನೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಆಡಂ ಅಮೆರಿಕದಿಂದ ಹೊರಹೋಗಿ ಎಂದು ಕಿರುಚಿಕೊಳ್ಳುತ್ತ ಜನಾಂಗೀಯ ನಿಂದನೆ ಆರಂಭಿಸುತ್ತಿದ್ದಂತೆ, ಇಯಾನ್ ಎಂಬಾತ ಅಡ್ಡ ಬಂದಿದ್ದಾರೆ. ಆಗ ಇಯಾನ್ ಮತ್ತು ಭಾರತೀಯರ ಮೇಲೆ ಆಡಂ ಗುಂಡು ಹಾರಿಸಿದ್ದಾನೆ.
ಈ ಘಟನೆಯ ನಂತರ ಗುಂಡು ಹಾರಿದ ಆಡಂ ಕ್ಲಿಂಟನ್ ನಲ್ಲಿರುವ ಇನ್ನೊಂದು ಬಾರಿಗೆ ಹೋಗಿ ಗುಂಡು ಹಾಕಲು ಆರಂಭಿಸಿದ್ದಾನೆ. ಇಬ್ಬರು ಅರಬ್ ರನ್ನು ಕೊಂದಿರುವುದಾಗಿ ಹೇಳಿದ ಆತ, ತನಗೆ ಅಡಗಿಕೊಳ್ಳಲು ಸ್ಥಳ ಬೇಕಾಗಿರುವುದಾಗಿಯೂ ಹೇಳಿದ್ದಾನೆ. ಆದರೆ, ಬಾರ್ ನವ ಪೊಲೀಸರಿಗೆ ಫೋನ್ ಮಾಡಿ ಹಿಡಿದುಕೊಟ್ಟಿದ್ದಾನೆ.












Click it and Unblock the Notifications