ಪೂರ್ವ ಲಿಬಿಯಾದಲ್ಲಿ ಅಪ್ಪಳಿಸಿದ ಡೇನಿಯಲ್ ಚಂಡಮಾರುತ: 2000ಕ್ಕೂ ಹೆಚ್ಚು ಜನ ಸಾವು!
ಕೈರೋ ಸೆಪ್ಟೆಂಬರ್ 12: ಉತ್ತರ ಆಫ್ರಿಕಾದ ದೇಶದ ಪೂರ್ವ ಭಾಗಗಳಲ್ಲಿ ಪ್ರವಾಹಕ್ಕೆ ಸಿಲುಕಿ ಸುಮಾರು 2,000 ಜನರು ಸಾವನ್ನಪ್ಪಿದ್ದು ನೂರಾರು ಜನರು ಕಾಣೆಯಾಗಿದ್ದಾರೆ. ಪೂರ್ವ ಲಿಬಿಯಾದಲ್ಲಿ ಅಪ್ಪಳಿಸಿದ ಡೇನಿಯಲ್ ಚಂಡಮಾರುತಕ್ಕೆ ಸಾವಿರಾರು ಜನ ಸಾವನ್ನಪ್ಪಿದ್ದು ನೂರಾರು ಜನ ಕಾಣೆಯಾಗಿದ್ದಾರೆ.
ಈ ಬಗ್ಗೆ ಪೂರ್ವ ಲಿಬಿಯಾ ಸರ್ಕಾರದ ಒಸಾಮಾ ಹಮದ್ ಸೋಮವಾರ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 'ಅಲ್ ಮಸರ್ ಟೆಲಿವಿಷನ್'ಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ, ಪ್ರಧಾನ ಮಂತ್ರಿ ಒಸಾಮಾ ಹಮದ್ ಅವರು ಪೂರ್ವ ನಗರವಾದ ಡರ್ನಾದಲ್ಲಿ 2,000 ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ಕಾಣೆಯಾಗಿದ್ದಾರೆ ಎಂದು ಹೇಳಿದರು. ಜೊತೆಗೆ ಅವರು ಸೋಮವಾರ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿರುವುದಾಗಿ ಹೇಳಿದರು. ದೇಶಾದ್ಯಂತ ಧ್ವಜಗಳನ್ನು ಅರ್ಧಮಟ್ಟಕ್ಕೆ ಇಳಿಸಲು ಆದೇಶಿಸಲಾಗಿದೆ.

ಡೇನಿಯಲ್ ಚಂಡಮಾರುತದ ಪ್ರವಾಹಕ್ಕೆ ಸಿಲುಕಿ ಡರ್ನಾ ಭಾರಿ ನಾಶಕ್ಕೆ ಒಳಗಾಗಿದೆ. ಹೀಗಾಗಿ ನಗರವನ್ನು ವಿಪತ್ತು ಪ್ರದೇಶವೆಂದು ಘೋಷಿಸಲಾಗಿದೆ. ಪೂರ್ವ ಲಿಬಿಯಾ ಸರ್ಕಾರದ ಆರೋಗ್ಯ ಸಚಿವ ಓತ್ಮಾನ್ ಅಬ್ದುಲ್ಜಲೀಲ್ ಅವರು ಸೋಮವಾರ ಮಧ್ಯಾಹ್ನ ಸೌದಿ ಒಡೆತನದ ಸುದ್ದಿ ಚಾನೆಲ್ ಅಲ್-ಅರೇಬಿಯಾಗೆ ದೂರವಾಣಿ ಸಂದರ್ಶನದಲ್ಲಿ ಸಾವಿನ ಸಂಖ್ಯೆಯನ್ನು ಘೋಷಿಸಿದರು. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಡರ್ನಾವನ್ನು ದುರಂತ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅನೇಕ ನಗರಗಳಲ್ಲಿ ಜನ ಸಾವು
ಆಂಬ್ಯುಲೆನ್ಸ್ ಮತ್ತು ತುರ್ತು ಪ್ರಾಧಿಕಾರದ ಪ್ರಕಾರ, ಈಶಾನ್ಯ ಲಿಬಿಯಾದ ಕರಾವಳಿ ನಗರವಾದ ಸುಸಾದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಶಾಹತ್ ಮತ್ತು ಒಮರ್ ಅಲ್-ಮುಖ್ತಾರ್ ಪಟ್ಟಣಗಳಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ.
ತುರ್ತು ಪರಿಸ್ಥಿತಿ ಘೋಷಣೆ
ಸ್ಥಳೀಯ ಮಾಧ್ಯಮಗಳ ಪ್ರಕಾರ, ಸಾವಿರಾರು ಜನರು ಪ್ರವಾಹದಲ್ಲಿ ಕಾಣೆಯಾಗಿದ್ದಾರೆ ಮತ್ತು ಅವರು ಪ್ರವಾಹದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಪೂರ್ವ ಲಿಬಿಯಾದ ಹಲವಾರು ನಗರಗಳಲ್ಲಿ ಪ್ರವಾಹಕ್ಕೆ ಮನೆಗಳು ಮತ್ತು ಇತರ ಆಸ್ತಿಗಳನ್ನು ನಾಶವಾಗಿವೆ. ಹೀಗಾಗಿ ಸರ್ಕಾರ ಶನಿವಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ರಾತ್ರಿಯಿಡೀ ಅಪ್ಪಳಿಸಿದ ಚಂಡಮಾರುತದ ಮುನ್ನೆಚ್ಚರಿಕೆಯಾಗಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ. ಚಂಡಮಾರುತದ ಮನ್ನೆಚ್ಚರಿಕೆಯಾಗಿ ಶನಿವಾರವೇ ಶಾಲಾ, ಕಾಲೇಜು ತರಗತಿಗಳಿಗೆ ರಜೆ ನೀಡಲಾಗಿತ್ತು. ಪರಿಸ್ಥಿತಿ ನಿಭಾಯಿಸಲು ಪ್ರಧಾನಿಯು ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು.












Click it and Unblock the Notifications