Donald Trump Tariffs: ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಅಮೆರಿಕದಲ್ಲಿ ಭುಗಿಲೆದ್ದ ಪ್ರತಿಭಟನೆ
ಡೊನಾಲ್ಡ್ ಟ್ರಂಪ್ ಏನೋ ಮಾಡಲು ಹೋಗಿ ಏನೇನೋ ಮಾಡಿಕೊಂಡಂತೆ ಕಾಣುತ್ತಿದ್ದು, ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ತೀವ್ರ ಆಕ್ರೋಶ ಸ್ಫೋಟಗೊಂಡಿದೆ. ಈ ಮೂಲಕ ಡೊನಾಲ್ಡ್ ಟ್ರಂಪ್ ಸರ್ಕಾರ ಕೈಗೊಂಡಿರುವ ನಿಯಮಗಳನ್ನು ಅಮೆರಿಕನ್ನರು ವಿರೋಧಿಸಿ ಹೋರಾಟಕ್ಕೆ ಧುಮುಕಿದ್ದಾರೆ. ಮನಸ್ಸಿಗೆ ಬಂದಂತೆ ತೆರಿಗೆ ಹೇರಿಕೆ ಮಾಡುತ್ತಾ, ಜಗತ್ತಿನ ಹಲವು ದೇಶಗಳನ್ನು ಎದುರು ಹಾಕಿಕೊಂಡಿರುವ ಟ್ರಂಪ್ ಸ್ವತಃ ತಮ್ಮದೇ ದೇಶದ ಪ್ರಜೆಗಳಿಂದಲೂ ವಿರೋಧ ಎದುರಿಸುತ್ತಿದ್ದಾರೆ.
2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ದ ಡೊನಾಲ್ಡ್ ಟ್ರಂಪ್‌ಗೆ ಅಮೆರಿಕದ ಪ್ರಜೆಗಳು 2020 ರಲ್ಲಿ ಸೋಲಿನ ಪಾಠ ಕಲಿಸಿದ್ದರು. ಹೀಗಿದ್ದಾಗ ಬದಲಾಗಬೇಕಿದ್ದ ಟ್ರಂಪ್ ಈಗಲೂ ಅದೇ ರೀತಿ ಆಡಳಿತ ನಡೆಸಲು ಹೋಗುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ವಲಸಿಗರನ್ನು ಹೊರಗೆ ಹಾಕುವ ಮಾತು ಆಡುತ್ತಿದ್ದು, ತಮ್ಮದೇ ದೇಶದ ಪ್ರಜೆಗಳಿಗೂ ಸಮಸ್ಯೆ ಮಾಡ್ತಿದ್ದಾರೆ. ಮತ್ತೊಂದು ಕಡೆ ಅಮೆರಿಕ ಆರ್ಥಿಕವಾಗಿ ಕೂಡ ಕುಸಿದು ಬೀಳುತ್ತಿದ್ದು, ದೊಡ್ಡ ಪ್ರತಿಭಟನೆ ಶುರುವಾಗಿದೆ.

ಟ್ರಂಪ್ ವಿರೋಧಿ ಹೋರಾಟ ಶುರು!
2024ರ ಅಮೆರಿಕ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಹೊಸ ಹೊಸ ರೂಲ್ಸ್ ತಂದು ಸಮಸ್ಯೆ ಮಾಡುತ್ತಿದ್ದಾರೆ ಎಂಬ ಆಕ್ರೋಶ ಸ್ಫೋಟಗೊಂಡಿದೆ. ಹೀಗಾಗಿಯೇ ಅಮೆರಿಕದ ಒಟ್ಟು 50 ರಾಜ್ಯಗಳ 1,200 ಸ್ಥಳಗಳಲ್ಲಿ ಭಾರಿ ದೊಡ್ಡ ಹೋರಾಟ ಶುರುವಾಗಿದೆ. ಸುಮಾರು 150ಕ್ಕೂ ಹೆಚ್ಚು ಸಂಘಟನೆಗಳು ಈ ಹೋರಾಟವನ್ನು ಸಂಘಟಿಸಿ ಪ್ರತಿಭಟನೆಯನ್ನ ಶುರು ಮಾಡಿವೆ. ಕಾರ್ಮಿಕ ಸಂಘಟನೆಗಳು, ಎಲ್‌ಜಿಬಿಟಿ ಕಮ್ಯುನಿಟಿ ಸೇರಿದಂತೆ ಮಾನವ ಹಕ್ಕುಗಳ ಸಂಘಟನೆಗಳು ಕೂಡ ಹೋರಾಟ ಶುರು ಮಾಡಿವೆ. ವಕೀಲರ ಸಂಘ, ಚುನಾವಣಾ ಸಂಘಟನೆಗಳು ಕೂಡ ಸಾಥ್ ನೀಡಿವೆ.
ಚೀನಾ ಕಡೆಯಿಂದಲೂ ಸಿಕ್ಕ ಶಾಕ್!
ಅಮೆರಿಕ ಆರ್ಥಿಕವಾಗಿ ಮಾತ್ರವಲ್ಲ ಇದೀಗ ರಾಜಕೀಯವಾಗಿ ಕೂಡ ಹಾಳಾಗಿ ಹೋಗುತ್ತಿದೆ. ದೊಡ್ಡಣ್ಣ ಅಮೆರಿಕದ ಮೂಲೆ ಮೂಲೆಯಲ್ಲೂ ಇದೀಗ ಹೋರಾಟಗಳು ಶುರುವಾಗಿಬಿಟ್ಟಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಚಾರದಲ್ಲಿ ದೊಡ್ಡ ಎಡವಟ್ಟು ಮಾಡಿಕೊಂಡು ಅವೈಜ್ಞಾನಿಕ ರೀತಿಯಲ್ಲಿ ತೆರಿಗೆ ಹೇರಿಕೆ ಮಾಡಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ.
ಇದೇ ಕಾರಣಕ್ಕೆ ಅಮೆರಿಕದಲ್ಲಿ ಟ್ರಂಪ್ ವಿರುದ್ಧವೇ ಆಕ್ರೋಶ ಮೊಳಗಿದೆ. ಇನ್ನೊಂದು ಕಡೆ ಚೀನಾ ಕೂಡ ಅಮೆರಿಕದ ವಸ್ತುಗಳಿಗೆ ಭಾರಿ ಪ್ರಮಾಣದ ತೆರಿಗೆ ವಿಧಿಸಲು ನಿರ್ಧರಿಸಿದ್ದು, ಆ ಮೂಲಕ ಅಮೆರಿಕ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಭಯ ಕಾಡುತ್ತಿದೆ. ಇದರ ಜೊತೆಯಲ್ಲೇ ಕಾರ್ಮಿಕ ವರ್ಗದ ವಿರೋಧ ಕಟ್ಟಿಕೊಂಡು ಟ್ರಂಪ್ ಒದ್ದಾಡುವ ಸ್ಥಿತಿ ಬಂದಿದೆ. ಇನ್ನೊಂದು ಬದಿಯಲ್ಲಿ ಟ್ರಂಪ್ ಅವರ ರಾಜಕೀಯ ವಿರೋಧಿಗಳು ಒಂದಾಗುತ್ತಿದ್ದಾರೆ.












Click it and Unblock the Notifications