1,600 ವರ್ಷ ಹಳೆಯ ಮರ ಇದು! ವಿಶ್ವದ 2ನೇ ಅತಿದೊಡ್ಡ ಮರವಾದ ಜನರಲ್ ಗ್ರಾಂಟ್ ಎತ್ತರ 268 ಅಡಿ, ವೈರಲ್
ಪ್ರಾಚೀನ ಅರಣ್ಯಗಳಿಂದ ಹಿಡಿದು ರೆಡ್ ವುಡ್ ವರೆಗೆ ಎತ್ತರದಲ್ಲಿ ಬೆಳೆದು ನಿಂತ ಮರಗಳು ಯಾವತ್ತೂ ಪ್ರವಾಸಿಗರು ಮತ್ತು ಪ್ರಕೃತಿ ಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತಲೇ ಇರ್ತಾವೆ. ಈ ಮರಗಳು ಕಾಲದ ಹೊಡೆತಕ್ಕೆ ಸಿಲುಕಿಯೂ ಮಿಸುಕಾಡದೆ ನಿಂತಿರುತ್ತದೆ. ಟ್ರೆಕ್ ಮಾಡುವವರಿಗಂತೂ ಈ ಬೃಹದಾಕಾರದ ಮರದ ನೆರಳಿನಲ್ಲಿ ನಡೆಯುವ ಮಜಾನೇ ಬೇರೆ. ಇಂಥಹ ವಿಶೇಷ ಅನುಭವ ನೀಡುವ ದೈತ್ಯ ಮರವೊಂದು ಇಲ್ಲಿದೆ. ಇದು 1,600 ವರ್ಷಗಳಿಗೂ ಹೆಚ್ಚು ಹಳೆಯದಾದ ಮರವಂತೆ. ಕ್ಯಾಲಿಫೋರ್ನಿಯಾದ ಕಿಂಗ್ಸ್ ಕ್ಯಾನ್ಯನ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಮರ ಇದೆ.
ಗ್ರಾಂಟ್ ಗ್ರೋವ್‌ನ ಕಾಡೊಳಗೆ ಇರುವ ಈ ಮರದ ಹೆಸರು ಜನರಲ್ ಗ್ರಾಂಟ್. ಇದು ವಿಶ್ವದ ಎರಡನೇ ಅತಿದೊಡ್ಡ ಮರ. ಇದನ್ನು ನ್ಯಾಷನಲ್ ಕ್ರಿಸ್‌ಮಸ್ ಟ್ರೀ ಎಂದೂ ಕರೀತಾರೆ. ಅಮೆರಿಕಾದ ನ್ಯಾಷನಲ್ ಪಾರ್ಕ್ ಸರ್ವಿಸ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಜನರಲ್ ಗ್ರಾಂಟ್ ಮರದ ಎತ್ತರ ಸುಮಾರು 268 ಅಡಿ. ಇದರ ಕಾಂಡದ ಪರಿಮಾಣ 46,608 ಘನ ಅಡಿ. ಈ ಭೂಮಿಯ ಪ್ರಮುಖ ನಾಗರಿಕತೆಗಳು ಅಸ್ತಿತ್ವಕ್ಕೆ ಬರುವ ಮುಂಚಿನಿಂದಲೂ ಈ ಮರ ಇಲ್ಲಿದೆ.

ಜನರಲ್ ಗ್ರಾಂಟ್ ಟ್ರೀ ಬಗ್ಗೆ ತಿಳಿದುಕೊಳ್ಳಬೇಕಾಗಿರುವ ಅಂಶ
ಈ ದೈತ್ಯ ಮರ ಕಳೆದ ಅನೇಕ ವರ್ಷಗಳಿಂದ ಲೆಕ್ಕವಿಲ್ಲದಷ್ಟು ಪ್ರವಾಸಿರನ್ನು ಬೆರಗುಗೊಳಿಸಿದೆ. 1924 ರಲ್ಲಿ, ಸ್ಯಾಂಗರ್ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಆರ್‌ಜೆ ಸೀನಿಯರ್ ಪುಟ್ಟ ಮಗುವಿನೊಂದಿಗೆ ಇಲ್ಲಿಗೆ ಬಂದಿದ್ದರಂತೆ. ದೈತ್ಯಾಕಾರವಾಗಿ ಬೆಳೆದು ನಿಂತಿರುವ ಈ ಮರವನ್ನು ನೋಡಿದ ಮಗು ಈ ಮರ ಕ್ರಿಸ್ ಟ್ರೀಯಂತೆ ಎಷ್ಟು ಸುಂದರವಾಗಿದೆ ಎಂದು ಆಶ್ಚರ್ಯ ಪಟ್ಟಿತಂತೆ.
ದಿ ನೇಷನ್ಸ್ ಕ್ರಿಸ್‌ಮಸ್ ಟ್ರೀಯ ಅಧಿಕೃತ ಘೋಷಣೆ
ಈ ಮುಗ್ಧ ಮಗುವಿನ ಮಾತಿನಿಂದ ಪ್ರೇರೇಪಿತರಾದ ಆರ್‌ಜೆ ಸೀನಿಯರ್ ಈ ಮರವನ್ನು ಒಂದು ಶಾಶ್ವತ ಸಂಪ್ರದಾಯವಾಗಿ ಯಾಕೆ ಪರಿವರ್ತಿಸವಾರದು ಅಂದುಕೊಂಡರಂತೆ. ಅವರು ಚೇಂಬರ್‌ನ ಕಾರ್ಯದರ್ಶಿ ಚಾರ್ಲ್ಸ್ ಇ. ಲೀ ಜೊತೆ ಸೇರಿ 1925 ರ ಕ್ರಿಸ್‌ಮಸ್ ಅನ್ನು ಈ ಮರದ ಕೆಳಗೆ ಆಚರಿಸೋದಕ್ಕೆ ನಿರ್ಧಾರ ಮಾಡ್ತಾರೆ. ಈ ಸಮಾರಂಭಕ್ಕೆ ಔಪಚಾರಿಕ ಮನ್ನಣೆ ಪಡೆಯಲು, ಲೀ ಶ್ವೇತಭವನದ ಬಾಗಿಲು ತಟ್ಟುತ್ತಾರೆ. ಇದಾದ ನಂತರ ಅಧ್ಯಕ್ಷ ಕ್ಯಾಲ್ವಿನ್ ಕೂಲಿಡ್ಜ್ ಏಪ್ರಿಲ್ 28, 1926 ರಂದು ಜನರಲ್ ಗ್ರಾಂಟ್ ಟ್ರೀಯನ್ನು ದಿ ನೇಷನ್ಸ್ ಕ್ರಿಸ್‌ಮಸ್ ಟ್ರೀ ಎಂದು ಅಧಿಕೃತವಾಗಿ ಘೋಷಿಸ್ತಾರೆ.
ರಾಷ್ಟ್ರೀಯ ಸ್ಮಾರಕವಾಗಿ ಘೋಷಣೆ
ದಶಕಗಳ ನಂತರ, ಮತ್ತೊಮ್ಮೆ ಈ ಮರಕ್ಕೆ ರಾಷ್ಟ್ರೀಯ ಗೌರವ ಸಿಗ್ತದೆ. 1956 ರಲ್ಲಿ, ಅಧ್ಯಕ್ಷ ಡ್ವೈಟ್ ಡಿ. ಐಸೆನ್‌ಹೋವರ್ ಈ ಮರವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸ್ತಾರೆ. ಅಮೆರಿಕಾದ ಸ್ವಾತಂತ್ರ್ಯವನ್ನು ರಕ್ಷಿಸಲು ಹೋರಾಡಿ ಮಡಿದ ಯುಎಸ್ ಸಶಸ್ತ್ರ ಪಡೆಗಳ ಸೈನಿಕರು ಮತ್ತು ಸೇವಾ ಮಹಿಳೆಯರಿಗೆ ಸಮರ್ಪಿತವಾಗಿ ಈ ಗೌರವ ನೀಡಲಾಯ್ತು. ಇವತ್ತಿಗೂ ಅಮೆರಿಕಾದಲ್ಲಿ ಜೀವಂತವಾಗಿರುವ ಏಕೈಕ ರಾಷ್ಟ್ರೀಯ ಸ್ಮಾರಕ ಇದಾಗಿದೆ.
ಪ್ರವಾಸಿಗರು ಈ ಜಾಗಕ್ಕೆ ಬರುವುದು ಅಷ್ಟೇನೂ ಕಷ್ಟದ ಕೆಲಸವಲ್ಲ. ಇಲ್ಲಿಗೆ ಬರಲು 0.6-ಮೈಲಿ ಉದ್ದದ ಸುಸಜ್ಜಿತ ಮಾರ್ಗವಿದೆ. ಸುಮಾರು 30 ಅಡಿಗಳಷ್ಟು ಎತ್ತರದಲ್ಲಿ ಈ ಮಾರ್ಗವನ್ನು ನಿರ್ಮಿಸಲಾಗಿದೆ. ಎಲ್ಲಾ ವಯಸ್ಸಿನ ಪಾದಯಾತ್ರಿಗಳು ಇಲ್ಲಿಗೆ ಯಾವುದೇ ಕಷ್ಟವಿಲ್ಲದೆ ಆರಾಮಾಗಿ ಬರಬಹುದು. ಇಲ್ಲಿಗೆ ಬರುವ ದಾರಿ ಮಧ್ಯೆ ಇನ್ನೂ ಅನೇಕ ಐತಿಹಾಸಿಕ ವಿಸ್ಮಯಗಳನ್ನು ಕೂಡಾ ನೋಡಬಹುದು.
ದಿ ಫಾಲನ್ ಮೊನಾರ್ಕ್: ಶತಮಾನಗಳ ಹಿಂದೆ ಕುಸಿದು ಬಿದ್ದ ದೈತ್ಯ ಮರದ ದಿಮ್ಮಿ ಇದು. ಇದು ಸಂಪೂರ್ಣ ಟೊಳ್ಳು. ಈ ಬೃಹತ್ ಮರದ ಸುರಂಗವನ್ನು ಸೇನೆಯ ಆಸ್ಪತ್ರೆಯಾಗಿ, ಅಶ್ವದಳದ ಕುದುರೆಗಳಿಗೆ ಲಾಯವಾಗಿ ಮತ್ತು ತಾತ್ಕಾಲಿಕ ಸಲೂನ್ ಆಗಿಯೂ ಬಳಸಲಾಗ್ತಿತ್ತು. ಇವತ್ತು ಈ ಟೊಳ್ಳು ದಿಮ್ಮಿಯ ಒಳಗೆಲ್ಲಾ ನಡೆದಾಡಬಹುದಾಗಿದೆ.
ಗ್ಯಾಮ್ಲಿನ್ ಕ್ಯಾಬಿನ್: 1872 ರಲ್ಲಿ ಇಸ್ರೇಲ್ ಗ್ಯಾಮ್ಲಿನ್ ನಿರ್ಮಿಸಿದ ಮರದ ದಿಮ್ಮಿ ಕ್ಯಾಬಿನ್. ಇದನ್ನು ಸಣ್ಣ ಮನೆ ಎಂದು ಕರೆದರೂ ತಪ್ಪಲ್ಲ. ಇಸ್ರೇಲ್ ಗ್ಯಾಮ್ಲಿನ್ ದನಗಳನ್ನು ಮೇಯಿಸುತ್ತಿದ್ದ ಆರಂಭಿಕ ವಸಾಹತುಗಾರ. ಈ ಕ್ಯಾಬಿನ್ ಅಥವಾ ಮನೆ ಉದ್ಯಾನವನದ ಮೊಟ್ಟಮೊದಲ ರೇಂಜರ್ ನಿಲ್ದಾಣವಾಗಿ ಕೆಲಸ ಮಾಡಿದೆ.
ದಿ ಸೆಂಟೆನಿಯಲ್ ಸ್ಟಂಪ್: 1875ರಲ್ಲಿ ಈ ಬೃಹತ್ ಮರದ ಉಳಿದ ಭಾಗವನ್ನು ಕತ್ತರಿಸಲಾಯಿತು. ಕತ್ತರಿಸಿದ ಕಾಂಡವನ್ನು 1876 ರಲ್ಲಿ ಫಿಲಡೆಲ್ಫಿಯಾದಲ್ಲಿ ನಡೆದ ವಿಶ್ವ ಮೇಳಕ್ಕೆ ತೆಗೆದುಕೊಂಡು ಹೋಗಲಾಯಿತು. ಇದು ಇಷ್ಟು ದೊಡ್ಡ ಮರಗಳು ನಿಜವಾಗಿಯೂ ಅಸ್ತಿತ್ವದಲ್ಲಿವೆಯಾ ಎಂದು ಸಂಶಯ ವ್ಯಕ್ತಪಡಿಸುತ್ತಿದ್ದವರಿಗೆ ಇದೊಂದು ಸಾಕ್ಷಿಯಾಗಿತ್ತು.


Click it and Unblock the Notifications
