Donald Trump: ಜಗತ್ತು ಶೀಘ್ರವೇ ಪರಮಾಣು ಯುದ್ದವನ್ನು ಎದುರಿಸಲಿದೆ- ಡೊನಾಲ್ಡ್ ಟ್ರಂಪ್ ಬಿಚ್ಚಿಟ್ಟ ಭಯಾನಕ ಮಾಹಿತಿ
ವಾಷಿಂಗ್ಟನ್, ಏಪ್ರಿಲ್ 05: ಅಮೆರಿಕ ( US ) ಅಧ್ಯಕ್ಷ ಜೋ ಬೈಡನ್ ( Joe Biden ) ಆಡಳಿತದಲ್ಲಿ ಜಗತ್ತು ಪೂರ್ಣ ಪ್ರಮಾಣದ ಪರಮಾಣು ಯುದ್ದವನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ( Donald Trump ) ಎಚ್ಚರಿಸಿದ್ದಾರೆ. ಪ್ರಸ್ತುತ ಯುಎಸ್ ಸರ್ಕಾರವು ದೇಶವನ್ನು ನಾಶಪಡಿಸುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.
76 ವರ್ಷದ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ವಿಚಾರಣೆಗೆ ಒಳಗಾದರು. ನಂತರ ಅವರು ಮಾಡಿದ ಸಾರ್ವಜನಿಕ ಭಾಷಣದಲ್ಲಿ ಈ ಸ್ಪೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.

ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ರಿಮಿನಲ್ ಆರೋಪಕ್ಕೆ ಒಳಗಾಗಿದ್ದಾರೆ. ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್‌ಗೆ ಮಾಡಿದ ಹಣದ ಪಾವತಿಗೆ ಸಂಬಂಧಿಸಿದ ಆರೋಪದ ಮೇಲೆ ಮ್ಯಾನ್‌ಹ್ಯಾಟನ್ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಸುಳ್ಳು ವ್ಯವಹಾರ ದಾಖಲೆಗಳನ್ನು ಡೊನಾಲ್ಡ್ ಟ್ರಂಪ್ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ತಮ್ಮ ಮೇಲಿರುವ ಆಪಾದನೆಗಳನ್ನು ತಳ್ಳಿಹಾಕಿದ ಟ್ರಂಪ್, ನಾನು ತಪ್ಪಿತಸ್ಥನಲ್ಲ ಎಂದು ವಾದ ಮಾಡಿದ್ದಾರೆ.
ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ವಿವಿಧ ದೇಶಗಳಿಂದ ಅಮೆರಿಕಕ್ಕೆ ಬಹಿರಂಗ ಬೆದರಿಕೆಗಳಿವೆ ಎಂದು ಮಾಜಿ ಅಧ್ಯಕ್ಷರು ತಿಳಿಸಿದ್ದಾರೆ. ತಮ್ಮ ಆಡಳಿತದ ಅವಧಿಯಲ್ಲಿ ಇತರ ರಾಷ್ಟ್ರಗಳು ಎಂದಿಗೂ ಈ ಬಗ್ಗೆ ಪ್ರಸ್ತಾಪಿಸಲಿಲ್ಲ ಅಥವಾ ಚರ್ಚಿಸಲಿಲ್ಲ ಎಂದೂ ಅವರು ಹೇಳಿದ್ದಾರೆ.
'ಬೈಡನ್ ಆಡಳಿತದ ನಾಯಕತ್ವದಲ್ಲಿ ಸಂಪೂರ್ಣ ಪರಮಾಣು ಮಹಾಯುದ್ಧ ಸಂಭವಿಸಬಹುದು. ನಾವು ಅದರಿಂದ ಬಹಳ ದೂರದಲ್ಲಿಲ್ಲ. ನೀವು ಇದನ್ನು ನಂಬಿರಿ ಅಥವಾ ಬಿಡಿ' ಎಂದು ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.

ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು ಬೈಡನ್ ವಿರುದ್ಧ ಹರಿಹಾಯ್ದಿದ್ದಾರೆ. ಅಧ್ಯಕ್ಷ ಜೋ ಬೈಡೆನ್ ಅಡಿಯಲ್ಲಿ ಅಮೆರಿಕವು ಈಗ ಗೊಂದಲದಲ್ಲಿದೆ ಎಂದು ಹೇಳಿದ್ದಾರೆ.
'ನಮ್ಮ ಆರ್ಥಿಕತೆ ಕುಸಿಯುತ್ತಿದೆ. ಹಣದುಬ್ಬರ ನಿಯಂತ್ರಣದಲ್ಲಿಲ್ಲ. ರಷ್ಯಾ ಚೀನಾದೊಂದಿಗೆ ಸೇರಿಕೊಂಡಿದೆ. ನೀವು ನಂಬುತ್ತೀರಾ? ಸೌದಿ ಅರೇಬಿಯಾ ಇರಾನ್‌ನೊಂದಿಗೆ ಸೇರಿಕೊಂಡಿದೆ' ಎಂದೂ ಟ್ರಂಪ್ ತಿಳಿಸಿದ್ದಾರೆ.
ಚೀನಾ, ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾ ಒಟ್ಟಿಗೆ ಸೇರಿಕೊಂಡಿವೆ. 'ಭಯಾನಕ ಮತ್ತು ವಿನಾಶಕಾರಿ ಒಕ್ಕೂಟ' ವಾಗಿ ರೂಪುಗೊಂಡಿವೆ. ಇದು ತಮ್ಮ ನಾಯಕತ್ವದಲ್ಲಿ ಎಂದಿಗೂ ಸಂಭವಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

'ನಾನು ನಿಮ್ಮ ಅಧ್ಯಕ್ಷನಾಗಿದ್ದರೆ ಅದು ಎಂದಿಗೂ ಸಂಭವಿಸುತ್ತಿರಲಿಲ್ಲ. ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡುತ್ತಿರಲಿಲ್ಲ. ಆ ಯುದ್ಧದಲ್ಲಿ ಸತ್ತಿರುವ ಎಲ್ಲಾ ಜೀವಗಳನ್ನು ಉಳಿಸಲಾಗುತ್ತಿತ್ತು. ಆ ಎಲ್ಲಾ ಸುಂದರ ನಗರಗಳು ಹಾಗೆಯೇ ಇರುತ್ತಿದ್ದವು' ಎಂದು ಅವರು ತಿಳಿಸಿದ್ದಾರೆ.
'ನಮ್ಮ ಕರೆನ್ಸಿ ಕುಸಿಯುತ್ತಿದೆ. ಇದು 200 ವರ್ಷಗಳಲ್ಲಿ ನಾವು ಕಾಣುತ್ತಿರುವ ಅತೀ ದೊಡ್ಡ ಸೋಲು' ಎಂದು ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ (ಏಪ್ರಿಲ್ 4) ಮ್ಯಾನ್‌ಹ್ಯಾಟನ್ ಕ್ರಿಮಿನಲ್ ನ್ಯಾಯಾಲಯದಲ್ಲಿ ಹಾಜರಾದರು. 2016 ರ ಚುನಾವಣಾ ಪ್ರಚಾರದ ಸಮಯದಲ್ಲಿ ವಯಸ್ಕ ಚಲನಚಿತ್ರ ನಟಿ ಸ್ಟ್ರೋಮಿ ಡೇನಿಯಲ್ಸ್‌ಗೆ ಹಣ ಪಾವತಿ ಮಾಡಿದ ಪ್ರಕರಣವನ್ನು ಅವರು ಎದುರಿಸುತ್ತಿದ್ದಾರೆ.
ರಾಜಕಾರಣಿ ಹಾಗೂ ಉದ್ಯಮಿಯಾಗಿರುವ ಡೊನಾಲ್ಡ್ ಟ್ರಂಪ್ ಅವರು 2017 ರಿಂದ 2021 ರ ವರೆಗೆ ಯುನೈಟೆಡ್ ಸ್ಟೇಟ್ಸ್‌ನ 45 ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.












Click it and Unblock the Notifications