ಭಾರತೀಯರನ್ನು ಕರೆತರಲು ಕತಾರ್ ಗೆ ಹೆಚ್ಚುವರಿ ವಿಮಾನ
ನವದೆಹಲಿ, ಜೂನ್ 22: ರಾಜತಾಂತ್ರಿಕ ಬಿಕ್ಕಟ್ಟಿಗೆ ಸಿಲುಕಿರುವ ಕತಾರ್ ನಿಂದ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳಲು ಹೆಚ್ಚುವರಿ ವಿಮಾನದ ವ್ಯವಸ್ಥೆ ಮಾಡಲಾಗಿದೆ.
ಇಂದಿನಿಂದ ಹೆಚ್ಚುವರಿ ವಿಮಾನಗಳು ಭಾರತ ಮತ್ತು ಕತಾರ್ ರಾಜಧಾನಿ ದೋಹಾ ನಡುವೆ ಓಡಾಡಲಿವೆ.
ಜೂನ್ 19ರಂದು ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಜತೆ ಮಾತನಾಡಿದ್ದ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕತಾರ್ ನಿಂದ ಭಾರತಕ್ಕೆ ಹೆಚ್ಚುವರಿ ವಿಮಾನ ವ್ಯವಸ್ಥೆ ಕಲ್ಪಿಸುವಂತೆ ಕೇಳಿಕೊಂಡಿದ್ದರು. ಅದರಲ್ಲೂ ಗಲ್ಫ್ ದೇಶಗಳಲ್ಲಿ ಹೆಚ್ಚಾಗಿ ಕೇರಳಿಗರು ನೆಲೆಸಿದ್ದು, ಕೇರಳಕ್ಕೆ ಹೆಚ್ಚಿನ ವಿಮಾನಯಾನ ಸಂಪರ್ಕ ನೀಡುವಂತೆ ಕೇಳಿಕೊಂಡಿದ್ದರು.

ಇದೀಗ ತಿರುವನಂತಪುರಂ-ದೋಹಾ, ದೋಹಾ-ಕೊಚ್ಚಿ ನಡುವೆ ಜೂನ್ 25ರಿಂದ ಜುಲೈ 8ರ ವರೆಗೆ 186 ಆಸನ ವ್ಯವಸ್ಥೆಯ ಏರ್ ಇಂಡಿಯಾ ವಿಮಾನ ಓಡಾಡಲಿದೆ.
ಇನ್ನು ಜೂನ್ 22 ಮತ್ತು 23ರಂದು 168 ಆಸನ ಸಾಮರ್ಥ್ಯದ ಜೆಟ್ ಏರ್ವೇಸ್ ವಿಮಾನ ಮುಂಬೈ ದೋಹಾ ನಡುವೆ ಓಡಾಡಲಿದೆ.
ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಸೌದಿ ಅರೇಬಿಯಾ, ಈಜಿಪ್ಟ್, ಬಹ್ರೇನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳು ಕತಾರ್ ಜತೆ ರಾಜತಾಂತ್ರಿಕ ಸಂಬಂಧವನ್ನು ಕೊನೆಗೊಳಿಸಿವೆ. ಹೀಗಾಗಿ ಮಧ್ಯಪೂರ್ವ ದೇಶಗಳಲ್ಲಿ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಿಸಿದ್ದು ಭಾರತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.












Click it and Unblock the Notifications