ರಷ್ಯಾ & ಚೀನಾ ಮತ್ತಷ್ಟು ಹತ್ತಿರ.. ಇಸ್ರೇಲ್ ಯುದ್ಧದ ಪರಿಣಾಮ?
ಇಸ್ರೇಲ್ ಮತ್ತು ಹಮಾಸ್ ನಡುವಿನ ಭೀಕರ ಕಾಳಗಕ್ಕೆ ಮಧ್ಯಪ್ರಾಚ್ಯ ಸಾಕ್ಷಿಯಾಗಿದೆ. ಇದೇ ಸಮಯದಲ್ಲಿ ಏಷ್ಯಾ ಖಂಡದ ಪೂರ್ವ ಭಾಗ ಮಹತ್ವದ ಬೆಳವಣಿಗೆಗೆ ಇಂದು ಸಾಕ್ಷಿಯಾಗಿ ನಿಂತಿತ್ತು. ಒಂದು ಕಡೆ 2 ದೇಶಗಳು ಯುದ್ಧದಲ್ಲಿ ಮುಳುಗಿದ್ದರೆ, ರಷ್ಯಾ ಅಧ್ಯಕ್ಷರು ಮಾತ್ರ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಜೊತೆ ಸೇರಿ ಏನೋ ತಂತ್ರ ಹೆಣೆಯುತ್ತಿರುವ ಸೂಚನೆ ಸಿಕ್ಕಿದೆ. ಹಾಗಾದರೆ ಪುಟಿನ್ ಮುಂದಿನ ನಡೆ ಏನು?
ಅಕ್ಟೋಬರ್ 17 & 18 ರಂದು ಚೀನಾದಲ್ಲಿ 'ಬೆಲ್ಟ್ & ರೋಡ್' ಸಮ್ಮೇಳನ ನಡೆಯಿತು. ಈ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಚೀನಾಗೆ ಭೇಟಿ ನೀಡಿದ್ದರು. ಈ ವೇಳೆ ತಮ್ಮ ಆಪ್ತ ಸ್ನೇಹಿತ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆಗೆ ಇಸ್ರೇಲ್ ಮತ್ತು ಹಮಾಸ್ ಕಾಳಗದ ಬಗ್ಗೆಯೂ ಪುಟಿನ್ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಅಮೆರಿಕ ಇದೀಗ ರಷ್ಯಾ ಮತ್ತು ಚೀನಾ ವಿರುದ್ಧ ಇನ್ನಷ್ಟು ಗುಡುಗುತ್ತಿರುವ ಸಮಯದಲ್ಲೇ, ಚೀನಾ ಜೊತೆಗೆ ರಷ್ಯಾ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ತೀರ್ಮಾನಕ್ಕೆ ಬಂದಿದ್ದಾರಂತೆ ಪುಟಿನ್.

ಇಸ್ರೇಲ್ ಯುದ್ಧದಲ್ಲಿ ರಷ್ಯಾ ಪಾತ್ರವೇನು?
ಅಷ್ಟಕ್ಕೂ, ರಷ್ಯಾ ಸೇನೆ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ಸಮಯದಲ್ಲಿ ವಿಶ್ವಸಂಸ್ಥೆ ಹಾಗೂ ಅಮೆರಿಕ ನಾಯಕರು ಅದನ್ನು ಮಾನವ ವಿರೋಧಿ ಎಂದು ಕರೆದಿದ್ದರು. ಆದರೂ ಪುಟಿನ್ ಯುದ್ಧ ಮುಂದುವರಿಸಿದರು. ಇದೀಗ ಇಸ್ರೇಲ್ ಸೇನೆ ಹಮಾಸ್ ಉಗ್ರರ ವಿರುದ್ಧದ ಹೋರಾಟದ ಕಾರಣ ನೀಡಿ ಗಾಜಾಪಟ್ಟಿ ಮೇಲೆ ಭೀಕರ ದಾಳಿ ನಡೆಸುತ್ತಿದೆ. ಹೀಗಾಗಿ ಎಲ್ಲ ವಿಚಾರಗಳ ಬಗ್ಗೆ ಹಾಗೂ ಯುದ್ಧದ ಬೆಳವಣಿಗೆ ಬಗ್ಗೆ ಪುಟಿನ್ ಅವರು ಇದೀಗ ಜಿನ್‌ಪಿಂಗ್ ಜೊತೆಗೆ ಚರ್ಚೆ ನಡೆಸಿದ್ದಾರೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ.
ಪುಟಿನ್ ಚೀನಾ ಭೇಟಿ ಮಹತ್ವ
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿವರಣೆಯಂತೆ ರಷ್ಯಾ & ಚೀನಾ ಸಂಬಂಧ ಮತ್ತಷ್ಟು ಗಟ್ಟಿಯಾದರೆ ಇದೆಲ್ಲವನ್ನ ಎದುರಿಸಬಹುದು. ಹಾಗೇ ಮುಂಬರುವ ದಿನಗಳಲ್ಲಿ ಅಭಿವೃದ್ಧಿ ಕೂಡ ಸಾಧ್ಯವಾಗುತ್ತದೆ ಎಂಬ ಚಿಂತನೆ ನಡೆದಿದೆ. ಹೀಗಾಗಿ ರಷ್ಯಾ ಅಧ್ಯಕ್ಷರ ಚೀನಾ ಭೇಟಿ ಸಾಕಷ್ಟು ಗಮನ ಸೆಳೆದಿದೆ. ಇನ್ನು ಚೀನಾ ಮತ್ತು ರಷ್ಯಾಗೆ ಅಮೆರಿಕ ಸಮಾನ ಶತ್ರುವಾಗಿ, ಇಬ್ಬರಿಂದಲೂ ಆಕ್ರೋಶ ಎದುರಿಸುತ್ತಿದೆ. ಇದೀಗ ಇಸ್ರೇಲ್ ಪರವಾಗಿ ಅಮೆರಿಕ ನಿಂತಿದ್ದು, ಪ್ಯಾಲೆಸ್ತೀನ್ ಪರ ಚೀನಾ ಮತ್ತು ರಷ್ಯಾ ನಿಂತಿವೆ. ಹೀಗಾಗಿ ಪುಟಿನ್ ಅವರ ಚೀನಾ ಭೇಟಿ ಮಹತ್ವ ಪಡೆದಿದೆ.
ಗಾಜಾಪಟ್ಟಿ ಸಂಪೂರ್ಣ ಛಿದ್ರ ಛಿದ್ರ
ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿದ ಬಳಿಕ, ಇಸ್ರೇಲ್ ಸೇನೆ ಮರುದಾಳಿ ಶುರುಮಾಡಿದೆ. ನೋಡ ನೋಡುತ್ತಲೇ ಗಾಜಾದಲ್ಲಿ 3500 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 12,500 ಕ್ಕೂ ಹೆಚ್ಚು ಜನ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಗಾಜಾದ ಆಸ್ಪತ್ರೆ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಿದ್ದು, 500 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆಂಬ ಆರೋಪ ಕೇಳಿಬಂದಿದೆ. ಒಟ್ನಲ್ಲಿ ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವೆ ಭೀಕರ ಕಾಳಗ ನಡೆಯುವಾಗ ಪುಟಿನ್ ಬೇರೆ ಏನೊ ತಂತ್ರ ಹೂಡಿದ್ದಾರೆ. ಈ ಬಗ್ಗೆ ಇನ್ನು ಕೆಲವೇ ದಿನದಲ್ಲಿ ಸಂಪೂರ್ಣ ಮಾಹಿತಿ ಸಿಗುವ ಸಾಧ್ಯತೆ ಇದೆ.

ಚೀನಾ ಈಗಾಗಲೇ ರಷ್ಯಾ ಜತೆ ಅತ್ಯುತ್ತಮ ಸಂಬಂಧ ಹೊಂದಿದೆ. ಅಲ್ಲದೆ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಬಳಿಕ ರಷ್ಯಾಗೆ ಬೆಂಬಲ ನೀಡುತ್ತಿರುವ ಕೆಲವೇ ದೇಶಗಳಲ್ಲಿ ಚೀನಾ ಕೂಡ ಒಂದು. ಈ ಎಲ್ಲಾ ಬೆಳವಣಿಗೆ ಮಧ್ಯೆ ಎರಡೂ ದೇಶಗಳು ಮತ್ತಷ್ಟು ಹತ್ತಿರವಾಗುವ ಮುನ್ಸೂಚನೆ ಸಿಗುತ್ತಿದೆ. ಅದರಲ್ಲೂ ಇಸ್ರೇಲ್ ಮತ್ತು ಹಮಾಸ್ ನಡುವೆ ಗಲಾಟೆ ನಡೆದು, ಸಾವಿರಾರು ಜನರ ನೆತ್ತರು ಹರಿಯುವಾಗ ಜಗತ್ತಿನ ಗಮನ ಪುಟಿನ್ ತೀರ್ಮಾನದ ಮೇಲೆಯೆ ಕೇಂದ್ರಿಕೃತವಾಗಿದೆ.












Click it and Unblock the Notifications