ಸರ್ವಾಧಿಕಾರಿಯನ್ನ ‘ಅಪ್ಪ.. ಅಪ್ಪ..’ ಅಂತಾ ಕರೆಯಬೇಕಂತೆ!
ಪ್ಯೊಂಗ್ಯಾಂಗ್: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಾಡೋ ರೂಲ್ಸ್, ಹಾಕೋ ಶರತ್ತು ಒಂದೆರಡಲ್ಲ. ಏನೇನೋ ನಿಯಮ ತಂದು ಜಗತ್ತಿನಲ್ಲಿ ಫೇಮಸ್ ಆಗ್ತಾನೆ ಈ ಕಿಮ್ ಜಾಂಗ್ ಉನ್. ಇಂತಿಪ್ಪ ಸರ್ವಾಧಿಕಾರಿ ಉತ್ತರ ಕೊರಿಯಾದಲ್ಲಿ ಹೊಸದೊಂದು ಆದೇಶ ಹೊರಡಿಸಿದ್ದು, ಎಲ್ರೂ ಈತನನ್ನ ಇನ್ಮುಂದೆ 'ಅಪ್ಪ.. ಅಪ್ಪ..' ಅಂತಾ ಕರೆಯಬೇಕಂತೆ!
ಬಾಂಬ್ ಮತ್ತು ಮಿಸೈಲ್ ಮೂಲಕ ಸೌಂಡ್ ಮಾಡುತ್ತಿದ್ದ ಕಿಮ್ ಇಡೀ ಉತ್ತರ ಕೊರಿಯಾಗೆ 'ಅಪ್ಪ'ನಾಗುವ ಕನಸು ಕಂಡಿದ್ದಾನೆ. ಉ.ಕೊರಿಯಾದಲ್ಲಿ (North Korea) ಕಿಮ್ ಅಪ್ಪನಿಂದ ಹಿಡಿದು ತಾತನ ತನಕ ಅವರ ಫ್ಯಾಮಿಲಿ ತಂದಿದ್ದೇ ರೂಲ್ಸ್, ಕೊಟ್ಟಿದ್ದೇ ಆದೇಶ. ಅದರ ಬಗ್ಗೆ ಯಾರಾದ್ರೂ ಕೆಮ್ಮಿದ್ರೆ ಸಾಕು ಕತ್ತು ಕಚಕ್, ಅವರ ಜೀವನ ಖತಂ! ಇಷ್ಟು ಖತರ್ನಾಕ್ ಕಿಮ್ ಇನ್ಮುಂದೆ ತನ್ನನ್ನ 'ಅಪ್ಪ.. ಅಪ್ಪ..' ಅಂತಾ ಕರೆಯಲು ಆದೇಶಿಸಿದ್ದಾನೆ. ಹಾಗಾದರೆ ಈ ರೂಲ್ಸ್ ಯಾರಿಗೆಲ್ಲಾ ಅಪ್ಲೈ ಆಗುತ್ತೆ ಗೊತ್ತಾ? ಅದನ್ನ ತಿಳಿಯೋಣ ಬನ್ನಿ.

ಯಾರೆಲ್ಲಾ 'ಅಪ್ಪ.. ಅಪ್ಪ..' ಅನ್ನಬೇಕು?
ಅಂದಹಾಗೆ ಕಿಮ್ ಜಾಂಗ್ ಉನ್‌ಗೆ 38 ವರ್ಷ, ಮತ್ತೊಂದ್ಕಡೆ ಉತ್ತರ ಕೊರಿಯಾ ಜನಸಂಖ್ಯೆ ಸುಮಾರು 2.5 ಕೋಟಿ. ಹಾಗಾದ್ರೆ 2.5 ಕೋಟಿ ಜನರಿಗೆ ಸರ್ವಾಧಿಕಾರಿ ಕಿಮ್ ಅಪ್ಪ ಆಗೋದ್ನಾ? ಅಂತಾ ಯೋಚಿಸಬೇಡಿ. ಯಾಕಂದ್ರೆ ಕಿಮ್ ಜಾಂಗ್ ಉನ್ ತಂದಿರುವ ಹೊಸ ರೂಲ್ಸ್ ಪ್ರಕಾರ, ಅವನಿಗಿಂತಲೂ ಚಿಕ್ಕ ವಯಸ್ಸಿನವರು ಇನ್ನು ಮುಂದೆ ಅವನನ್ನ 'ಅಪ್ಪ.. ಅಪ್ಪ..' ಅಂತಾ ಕರೆಯಬೇಕಂತೆ. 14 ರಿಂದ 35 ವರ್ಷ ವಯಸ್ಸಿನ ಯುವಕರು ಕಿಮ್‌ಗೆ ಮಕ್ಕಳಾಗಿ ಬದುಕುವಂತೆ ಆದೇಶಿಸಲಾಗಿದೆ.
ದೌರ್ಜನ್ಯ ಒಂದೇ ಇವರಿಗೆ ಗೊತ್ತು!
ಕಿಮ್ ಜಾಂಗ್ ಉನ್ ಕುಟುಂಬ ಉತ್ತರ ಕೊರಿಯಾ ದೇಶವನ್ನ ಆಳುತ್ತಿಲ್ಲ, ಬದಲಾಗಿ ಅಳಿಸುತ್ತಿದೆ. ಕಳೆದ 7 ದಶಕಗಳಿಂದ ಇವರ ಕೈಯಲ್ಲಿ ಸಿಲುಕಿ ಒದ್ದಾಡಿ ಹೋಗಿದ್ದಾರೆ ಉತ್ತರ ಕೊರಿಯಾ ಜನ. ದಿನಕ್ಕೊಂದು ಹೊಸ ರೂಲ್ಸ್, ಮನಸ್ಸಿಗೆ ಬಂದಿದ್ದೇ ಆದೇಶ ಎನ್ನುತ್ತಾನೆ ಈ ತಲೆಕೆಟ್ಟ ಸರ್ವಾಧಿಕಾರಿ. ಈಗಾಗಲೇ ಕಿಮ್ ಅಪ್ಪನನ್ನ 'ಅಜ್ಜ' ಎಂದು ಕರೆಯಲು ಆದೇಶಿಸಲಾಗಿದೆ. ಇದೀಗ ಕಿಮ್ ಜಾಂಗ್ ಉನ್‌ನ 14 ರಿಂದ 35 ವರ್ಷ ವಯಸ್ಸಿನ ಯುವಕರು 'ಅಪ್ಪ' ಅನ್ನಬೇಕಂತೆ. ಉತ್ತರ ಕೊರಿಯಾ ಜನರದ್ದು ಏನು ಹಣೆಬರಹವೋ? ಅಲ್ವಾ.

ಸರ್ವಾಧಿಕಾರಿ ಸಂಪಾದನೆ ಹೇಗೆ?
ಕಿಮ್ ಜಾಂಗ್ ಉನ್ ವಿರುದ್ಧ ಸಾಕಷ್ಟು ಆರೋಪಗಳಿವೆ. ಅದರಲ್ಲೂ ಕಿಮ್ ಜಾಂಗ್ ಉನ್ ದೇಶದಲ್ಲಿ ತಿನ್ನೋದಕ್ಕೆ ಅನ್ನವಿಲ್ಲದೆ ಜನ ಸಾಯುತ್ತಿದ್ದರೂ ಹೇಗೆ ಐಷಾರಾಮಿ ಜೀನವವನ್ನು ನಡೆಸುತ್ತಿದ್ದಾನೆ? ಅನ್ನೋ ಪ್ರಶ್ನೆ ಬಹುಪಾಲು ಜನರನ್ನ ಕಾಡುತ್ತಿದೆ. ಆದರೆ ಕಿಮ್ ಜಾಂಗ್ ಉನ್ ತನ್ನಲ್ಲಿರುವ ಬಹುಪಾಲು ಹಣವನ್ನ ಅಕ್ರಮವಾಗಿ ಸಂಪಾದನೆ ಮಾಡುತ್ತಿರುವ ಗಂಭೀರ ಆರೋಪ ಇದೆ. ಡ್ರಗ್ ಡೀಲ್ ಅಕ್ರಮ ಶಸ್ತ್ರಾಸ್ತ್ರ ಪೂರೈಕೆಯೂ ಸೇರಿ ಹಲವು ಅಕ್ರಮಗಳ ಮೂಲಕ ಕಳ್ಳದಾರಿಯಲ್ಲಿ ಕಿಮ್ ಜಾಂಗ್ ಉನ್ ಹಣ ಸಂಪಾದನೆ ಮಾಡುತ್ತಿದ್ದಾನೆ ಎಂಬ ಆರೋಪವಿದೆ.
ಪ್ರಜೆಗಳಿಗೆ ಬಡತನ, ಸರ್ವಾಧಿಕಾರಿಗೆ ಮೃಷ್ಟಾನ್ನ!
ಬರೀ ಮಿಸೈಲ್ ಟೆಸ್ಟ್ ಮಾಡೋದು, ಬಾಂಬ್ ಇಟ್ಕೊಂಡು ಬೆದರಿಕೆ ಹಾಕೋದು. ಇದೆನ್ನೆಲ್ಲಾ ನೋಡುತ್ತಿದ್ರೆ ಕಿಮ್ ಜಾಂಗ್ ಉನ್ ಪ್ರಜೆಗಳ ಬಗ್ಗೆ ತಲೆಕೆಡಸಿಕೊಂಡಂತೆ ಕಾಣ್ತಿಲ್ಲ. ಇಲ್ಲಿನ ಜನರು ಒಂದು ಹೊತ್ತಿನ ಊಟಕ್ಕೂ ಪರದಾಟ ಪಡುತ್ತಿದ್ದರೆ, ತಾನು ಮಾತ್ರ ತನ್ನಿಷ್ಟದಂತೆ ಶ್ರೀಮಂತವಾಗಿ ಬದುಕುತ್ತಿದ್ದಾನೆ ಕಿಮ್. ತನ್ನ ಮಕ್ಕಳಿಗೆ ಮನೆಯಲ್ಲೇ ಅತ್ಯುತ್ತಮ ದರ್ಜೆಯ ಶಿಕ್ಷಣ ಕೊಡಿಸುತ್ತಿದ್ದಾನೆ. ಈತನಿಗೆ ಒಟ್ಟು 3 ಮಕ್ಕಳಿದ್ದಾರೆ ಎನ್ನಲಾಗಿದ್ದು, ಎಲ್ಲಿಯೂ ಅಧಿಕೃತವಾಗಿ ಬಹಿರಂಗವಾಗಿಲ್ಲ.

ಒಟ್ನಲ್ಲಿ ಇಡೀ ಉತ್ತರ ಕೊರಿಯಾ ಬಡತನದ ಕೂಪದಲ್ಲಿ ಬಳಲುತ್ತಿದ್ದರೆ, ಇನ್ನೊಂದ್ಕಡೆ ಕಿಮ್ ಮಾತ್ರ ತನಗೆ ಬೇಕಾದಂತೆ ಬದುಕುತ್ತಿದ್ದಾನೆ. ಅವನ ಕುಟುಂಬ ಶ್ರೀಮಂತವಾಗಿ ಜೀವನ ನಡೆಸುತ್ತಿದ್ದು, ಪ್ರಜೆಗಳ ಹೊಟ್ಟೆ ಉರಿಸಿ ಜೀವನ ಸಾಗಿಸುತ್ತಿದ್ದಾನೆ. ಈಗ ಬೇರೆ ತನ್ನನ್ನ ಉತ್ತರ ಕೊರಿಯಾದ ಯುವಕರು 'ಅಪ್ಪ.. ಅಪ್ಪ..' ಅನ್ನಬೇಕು ಅಂತಾ ಆದೇಶ ಹೊರಡಿಸಿದ್ದಾನೆ. ಇದು ಜಗತ್ತಿನಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.












Click it and Unblock the Notifications