ಆಗಸ್ಟ್ ತಿಂಗಳಿನಲ್ಲೇ ರಷ್ಯಾದ ಕೊವಿಡ್ 19 ಲಸಿಕೆ
ಮಾಸ್ಕೋ, ಜುಲೈ 30: ಕೊವಿಡ್19 ಗೆ ಲಸಿಕೆ ಕಂಡು ಹಿಡಿಯಲು ಅನೇಕ ದೇಶಗಳು ಹಗಲಿರುಳು ಶ್ರಮಿಸುತ್ತಿವೆ. ಅಮೆರಿಕ ಭಾರತ, ರಷ್ಯಾ, ಯುಕೆ ಪ್ರಮುಖವಾಗಿ ಲಸಿಕೆ ತಯಾರಿಕೆ, ಕ್ಲಿನಿಟಲ್ ಟ್ರಯಲ್ ನಲ್ಲಿ ತೊಡಗಿವೆ.
ರಷ್ಯಾದ ಗಮಾಲೆಯಾ ಸಂಶೋಧನಾ ಕೇಂದ್ರ ಲಸಿಕೆ ಆಗಸ್ಟ್ 10-12ರಂದು ನೋಂದಣಿಯಾಗಲಿದೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.
ಮಾಸ್ಕೋದ ಸೆಚೆನೋವ್ ವಿಶ್ವವಿದ್ಯಾಲಯ ಸರ್ಕಾರಿ ಅಧೀನದ ಗಮಾಲೆಯಾ ಸಾಂಕ್ರಾಮಿಕ ರೋಗ ಹಾಗೂ ಸೂಕ್ಷ್ಮ ಜೀವಶಾಸ್ತ್ರ ಸಂಸ್ಥೆಯೊಂದಿಗೆ ಸೇರಿ ಲಸಿಕೆ ಅಭಿವೃದ್ಧಿ ಪಡಿಸಲಾಗಿದ್ದು, ಇನ್ನೊಂದು ವಾರದಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆದರೆ, ಪೂರ್ಣ ಪ್ರಮಾಣದ ಕ್ಲಿನಿಕಲ್ ಟ್ರಯಲ್ ಆಗಿಲ್ಲ ಎಂದು ಟಾಸ್ ಸುದ್ದಿ ಸಂಸ್ಥೆ ವರದಿಯೂ ಇದೆ.

ಲಸಿಕೆಯ ಕ್ಲಿನಿಕಲ್ ಟ್ರಯಲ್ ಮುಕ್ತಾಯ?
ಈಗಾಗಲೇ ಈ ಲಸಿಕೆಯ ಕ್ಲಿನಿಕಲ್ ಟ್ರಯಲ್ ಮುಕ್ತಾಯವಾಗಿದ್ದು, ಲಸಿಕೆ ಪರಿಣಾಮಕಾರಿ ಹಾಗೂ ಮಾನವರ ಬಳಕೆಗೆ ಸುರಕ್ಷಿತವಾಗಿದೆ ಎಂದು ಸಂಸ್ಥೆಯ ತಜ್ಞರು ಮಾಹಿತಿ ನೀಡಿದ್ದಾರೆ. ರಕ್ಷಣಾ ಇಲಾಖೆಯ ಯೋಧರ ಮೇಲೆ ಲಸಿಕೆ ಪ್ರಯೋಗ ಮಾಡಲಾಗಿದೆ. ಲಸಿಕೆ ಪರಿಣಾಮಕಾರಿಯಾಗಿದೆ ಎನ್ನುವ ಫಲಿತಾಂಶ ದೊರೆತಿದೆ ಎಂದು ಸಂಶೋಧಕಿ ಎಲೆನಾ ಸ್ಮೊಲ್ಯಾರ್ಚುಕ್ ರಷ್ಯನ್ ಸುದ್ದಿ ಸಂಸ್ಥೆ ತಾಸ್ಗೆ ತಿಳಿಸಿದ್ದಾರೆ.

ಆಗಸ್ಟ್ ಮಧ್ಯದ ವೇಳೆಗೆ ಜನರ ಬಳಕೆಗೆ
ಲಸಿಕೆ ಆಗಸ್ಟ್ ಮಧ್ಯದ ವೇಳೆಗೆ ಜನರ ಬಳಕೆಗೆ ಲಭ್ಯವಾಗಲಿದೆ ಎಂದು ಗಮಾಲೆಯಾ ಸಂಸ್ಥೆ ನಿರ್ದೇಶಕ ಅಲೆಕ್ಸಾಂಡರ್ ಗಿಂಟ್ಸ್ಬರ್ಗ್ ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್ ವೇಳಗೆ ಖಾಸಗಿ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಇದರ ಉತ್ಪಾದನೆ ಆರಂಭಿಸಲಿವೆ ಎಂದು ತಿಳಿಸಿದ್ದಾರೆ.
ಕೊರೊನಾ ಲಸಿಕೆ ಬಳಕೆಗೆ ಸಿದ್ಧವಿದೆ ಎಂದ ರಷ್ಯಾ

ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಇಲ್ಲ
ರಷ್ಯಾದ ಲಸಿಕೆಯು ಎರಡು ಹಂತದ ಕ್ಲಿನಿಕಲ್ ಪ್ರಯೋಗವನ್ನು ಮಾತ್ರ ಕಂಡಿದೆ ವಿಶ್ವಸಂಸ್ಥೆ ಮಾನದಂಡದ ಪ್ರಕಾರ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ನಡೆಸಬೇಕು. ಆದರೆ, ಖಚಿತ ಫಲಿತಾಂಶಗಳು ದೊರೆತಲ್ಲಿ ಮಾತ್ರ ಬೃಹತ್ ಪ್ರಮಾಣದಲ್ಲಿ ಉತ್ಪಾದನೆಗೆ ಅವಕಾಶ ನೀಡಲಾಗುತ್ತದೆ. ಮೂರನೆ ಹಂತದ ಪ್ರಯೋಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಬೇಕಾಗುತ್ತದೆ. ಕೆಲವು ತಿಂಗಳುಗಳೇ ಹಿಡಿಯಲಿದೆ.

ಆಕ್ಸ್ ಫರ್ಡ್ ಲಸಿಕೆ ಮುಂಚೂಣಿಯಲ್ಲಿದೆ
ಆಕ್ಸ್ ಫರ್ಡ್ ವಿವಿ ಹಾಗೂ ಆಸ್ಟ್ರಾ ಜೆನೆಕಾ ಸಂಸ್ಥೆಯ ಲಸಿಕೆಯು ರೇಸಿನಲ್ಲಿ ಮುಂದಿದೆ. ಚಿಂಪಾಂಜಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು, ವೈರಸ್ ಸೋಂಕು ತಗ್ಗಿದೆ. ಸದ್ಯ ಯುಕೆ, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಕೊನೆ ಹಂತದ ಕ್ಲಿನಿಕಲ್ ಟ್ರಯಲ್ ನಲ್ಲಿದೆ. ಇದಲ್ಲದೆ ಅಮೆರಿಕದ ಮಾಡೆರ್ನಾ ಸಂಶ್ಥೆ ಲಸಿಕೆ ಕೂಡಾ ಪ್ರಾಣಿಗಳ ಮೇಲೆ ಪ್ರೀ ಕ್ಲಿನಿಕಲ್ ಟ್ರಯಲ್ ನಡೆಸಿದೆ. ಇನ್ನೂ ಮಾನವರ ಮೇಲೆ ಮೂರು ಹಂತದ ಕ್ಲಿನಿಕಲ್ ಟಯಲ್ ನಡೆಸಬೇಕಿದೆ.