ರೀಲ್ಸ್ ಮಾಡೋದನ್ನ ಕಲಿಯುವುದಕ್ಕೂ ಲಕ್ಷ ಲಕ್ಷ ಫೀಸ್ : ಇದಕ್ಕೂ ಡಿಗ್ರಿ ಬೇಕಾ ಅನ್ನೋದೇ ನೆಟ್ಟಿಗರ ಪ್ರಶ್ನೆ
ರೀಲ್ ಮಾಡುವುದು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದು ಬರೀ ಟೈಂ ಪಾಸಲ್ಲ. ಇದರಿಂದಲೇ ತುಂಬಾ ಮಂದಿ ಹಣ ಸಂಪಾದನೆ ಮಾಡ್ತಾರೆ. ಅದೆಷ್ಟೋ ಜನ ಇದನ್ನೇ ತಮ್ಮ ಜೀವನೋಪಾಯದ ಮಾರ್ಗವಾಗಿ ಮಾಡಿಕೊಂಡಿದ್ದಾರೆ. iದ್ದ ಕೆಲಸವನ್ನೂ ಬಿಟ್ಟು ಇದನ್ನೇ ಫುಲ್ ಟೈಂ ವರ್ಕ್ ಆಗಿಯೇ ಮಾಡಿಕೊಂಡವರಿದ್ದಾರೆ. ಕೆಲಸದಿಂದ ಸಿಗುವ ಸಂಬಳದ ಎರಡು ಪಟ್ಟು ಮೂರುಪಟ್ಟು ಈ ಸೋಶಿಯಲ್ ಮಿಡಿಯಾದಿಂದಲೇ ದುಡಿಯುವವರು ಇದ್ದಾರೆ. ಅನೇಕ ಯುವಕರು ಇದರಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ.
ಇದೀಗ ಯುಕೆ ವಿಶ್ವವಿದ್ಯಾಲಯದಲ್ಲಿ ಕಂಟೆಂಟ್ ಕ್ರಿಯೇಟಿಂಗನ್ನು ಕೂಡಾ ಕಲಿಸಲಾಗುತ್ತಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ವೀಡಿಯೊ ಹೇಗೆ ಮಾಡುವುದು? ಕಂಟೆಂಟನ್ನು ಜನರಿಗೆ ಹೇಗೆ ರೀಚ್ ಮಾಡಿಸುವುದು, ಸಣ್ಣ, ದೊಡ್ಡ ಬ್ರ್ಯಾಂಡ್ ಜೊತೆಗೆ ಹೇಗೆ ಕೆಲಸ ಮಾಡುವುದು ಎಲ್ಲವನ್ನೂ ಹೇಳಿಕೊಡಲಾಗುತ್ತದೆ. ವಿಶೇಷತೆ ಎಂದರೆ ಈಗ ಈ ಕ್ಷೇತ್ರದಲ್ಲಿ ಪದವಿ ಪಡೆಯುವ ಆಯ್ಕೆಯೂ ಇದೆ. ಆದರೆ ಇಲ್ಲಿ ದೊಡ್ಡ ಮೊತ್ತದ ಫೀಸ್ ಕೂಡಾ ಕಟ್ಟಬೇಕಾಗುತ್ತದೆ.

ಆದರೆ ಇಲ್ಲಿ ಏಳುವ ಪ್ರಶ್ನೆ ಅಂದರೆ, ಕಂಟೆಂಟ್ ಕ್ರಿಯೇಟರ್ ಆಗಲು ಪ್ರತ್ಯೇಕ ಡಿಗ್ರಿ ತೆಗೆದುಕೊಳ್ಳುವ ಅಗತ್ಯ ಇದೆಯಾ ಎನ್ನುವುದು. ಯಾಕೆಂದರೆ ಇಲ್ಲಿವರೆಗೆ ಸಾವಿರಾರು, ಲಕ್ಷಾಂತರ ಮಂದಿ ಕಂಟೆಂಟ್ ಕ್ರಿಯೇಟ್ ಮಾಡ್ತಾ ಇದ್ದಾರೆ. ಮಾತ್ರವಲ್ಲ ಅದರಿಂದ ಸಾಕಷ್ಟು ಹಣ ಕೂಡಾ ಗಳಿಸ್ತಾ ಇದ್ದಾರೆ. ಇವರ್ಯಾರೂ ಕಂಟೆಂಟ್ ಕ್ರಿಯೇಷನಿನಲ್ಲಿ ಡಿಗ್ರಿ ತೆಗೆದುಕೊಂಡಿಲ್ಲ. ಅನುಭವವೇ ಇವರ ಡಿಗ್ರಿ. ಆದರೂ ಗಮನಿಸಬೇಕಾದ ಅಂಶ ಒಂದಿದೆ. ಯಾವುದೇ ಯುನುವರ್ಸಿಟಿ ಸುಮ್ಮನೆ ಈ ಸಬ್ಜೆಕ್ಟ್ ಇಡುವುದಕ್ಕೂ ಸಾಧ್ಯವಿಲ್ಲ. ಒಂದು ಯುನಿವರ್ಸಿಟಿ ಡಿಗ್ರಿ ಅಡಿಯಲ್ಲಿ ಕಂಟೆಂಟ್ ಕ್ರಿಯೇಷನ್ ಎನ್ನುವ ಸಬ್ಜೆಕ್ಟ್ ಇದೆ ಎಂದಾದರೆ ಈ ಡಿಗ್ರಿಯಿಂದ ಏನೋ ಪ್ರಯೋಜನ ಕೂಡಾ ಇರಲೇ ಬೇಕು. ಹಾಗಿದ್ದರೆ ಈ ವಿಷಯದಲ್ಲಿ ಡಿಗ್ರಿ ತೆಗೆದುಕೊಂಡರೆ ಅವರಿಗೆ ಹೇಗೆ ಲಾಭವಾಗುತ್ತದೆ ನೋಡೋಣ.
Content Creator Degree: ಹೊಸ ಅವಕಾಶಕ್ಕೆ ದಾರಿ
ಕಂಟೆಂಟ್ ಕ್ರಿಯೇಶನಿನಲ್ಲಿ ಡಿಗ್ರಿ ಪಡೆಯುವುದರಿಂದ ಹೊಸ ಅವಕಾಶ ಸಿಗುತ್ತವೆ. ಯುಕೆಯ ನಾಟಿಂಗ್ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾಲಯದಿಂದ ಕಂಟೆಂಟ್ ಕ್ರಿಯೇಶನಿನಲ್ಲಿ ಹಾನರ್ಸ್ ಪದವಿ ಪಡೆದಿರುವ ಡೆಸ್ಟಿನಿ ಮೆಕ್ ಗೋವನ್ ಇದಕ್ಕೆ ಉದಾಹರಣೆ. ಬಿಬಿಸಿಯೊಂದಿಗಿನ ಮಾತುಕತೆಯಲ್ಲಿ ಅವರು ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ಕಾರ್ಯಕ್ರಮ ಮತ್ತು ಪ್ಯಾನೆಲ್ ಮೂಲಕ, ಉದ್ಯಮಕ್ಕೆ ಸಂಬಂಧಿಸಿದ ಅನೇಕ ಜನರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು ಎಂದು ಹೇಳೀದ್ದಾರೆ.
ಡೆಸ್ಟಿನಿಯ ಪ್ರಕಾರ, ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಅಂತಹ ಕಾಂಟ್ಯಾಕ್ಟ್ ಮಾಡಲು ಐದರಿಂದ ಹತ್ತು ವರ್ಷ ಬೇಕಾಗಬಹುದು. ಅವರ ಕೋರ್ಸ್ ಸಮಯದಲ್ಲಿ, ಕಂಟೆಂಟ್ ಕ್ರಿಯೇಟ್ ಮಾಡಲು ಉದ್ಯಮದ ಜನರೊಂದಿಗೆ ಕಾಂಟ್ಯಾಕ್ಟ್ ಬೆಳೆಸಲು ಯಾವ ಮಾರ್ಗ ಅನುಸರಿಸಬೇಕು. ಯಾವ ಟೆಕ್ನಾಲಜಿ ಫಾಲೋ ಮಾಡಬೇಕು ಎನ್ನುವುದನ್ನು ಚೆನ್ನಾಗಿ ಕಲಿತುಕೊಂಡರು. ಈ ಮೂಲಕ ಅವರಿಗೆ ಹೊಸ ಅವಕಾಶ ಸಿಕ್ಕಿ ಇದೀಗ ಅವರು ಕಂಟೆಂಟ್ ಕ್ರಿಯೇಟರ್ ಆಗಿ ಸಂಪಾದಿಸುತ್ತಿದ್ದಾರೆ.
ಹಣ ಗಳಿಸುವ ಮಾರ್ಗ ಸರಳ :
ಇತ್ತೀಚಿನ ದಿನಗಳಲ್ಲಿಯಂತೂ ಕಂಟೆಂಟ್ ಕ್ರಿಯೇಟರ್ ಗಳಿಗೆ ಬೇಡಿಕೆ ಹೆಚ್ಚಾಗ್ತಾ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು, ಅನೇಕ ಶಿಕ್ಷಣ ಸಂಸ್ಥೆಗಳು ಇದಕ್ಕೆ ಸಂಬಂಧಿಸಿದಂತೆ ವಿಶೇಷ ಕೋರ್ಸ್ (professional courses) ಗಳನ್ನು ನೀಡುತ್ತಿವೆ. ಬ್ರೈಟನ್ ವಿಶ್ವವಿದ್ಯಾಲಯದಲ್ಲಿ, ಇಂಟರ್ ನೆಟಿನಲ್ಲಿ ಲಕ್ಷಾಂತರ ಜನರ ಗಮನ ಸೆಳೆಯುವ ಪೋಸ್ಟ್ ಅನ್ನು ಹೇಗೆ ಕ್ರಿಯೇಟ್ ಮಾಡುವುದು ಅನ್ನೋದನ್ನು ಕಲಿಸಲಾಗ್ತದೆ. ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ವ್ಯೂವರ್ಸ್ ಜೊತೆ ಕನೆಕ್ಟ್ ಆಗಿರುವಂತೆ ನಿಮ್ಮ ಕ್ರಿಯೇಟಿವಿಟಿಯನ್ನು ಹೇಗೆ ಬಳಸಿಕೊಳ್ಳುವುದು ಎನ್ನುವುದನ್ನು ಕಲಿಸಲಾಗುತ್ತದೆ.
ಸ್ವಂತ ವ್ಯವಹಾರವನ್ನು ಪ್ರಾರಂಭಿಸುವ ಆಯ್ಕೆಗಳು :
ನಾಟಿಂಗ್ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾಲಯದ ಕಂಟೆಂಟ್ ಕ್ರಿಯೇಟರ್ ಕೋರ್ಸ್ ಲೀಡರ್ ಮತ್ತು ಹಿರಿಯ ಉಪನ್ಯಾಸಕ ಜಾಕಿ ಗುರ್ ಅವರ ಪ್ರಕಾರ, ಕಂಟೆಂಟ್ ಕ್ರಿಯೇಟಿಂಗ್ ಎನ್ನುವುದು ಈಗ ವೃತ್ತಿಪರ ಕೌಶಲ್ಯವಾಗಿದೆ. ಇದು ಕಂಪನಿಗಳು ಮತ್ತು ವೈಯಕ್ತಿಕ ಸಂಸ್ಥೆಗಳಿಗೂ ಅಗತ್ಯವಾಗಿದೆ. ಈ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಜನರು ಏಜೆನ್ಸಿಯಲ್ಲಿ ಕೆಲಸ ಮಾಡಬಹುದು. ಸ್ವತಂತ್ರ ಉದ್ಯೋಗಿಯಾಗಿ ಕೆಲಸ ಮಾಡಬಹುದು ಅಥವಾ ತಮ್ಮದೇ ಆದ ವ್ಯವಹಾರ ಪ್ರಾರಂಭಿಸಬಹುದು. ವರ್ಕ್ ಫ್ರಮ್ ಹೋಮ್ ಆಯ್ಕೆ ಕೂಡಾ ಇದರಲ್ಲಿ ಲಭ್ಯವಿದೆ.
ಕಂಟೆಂಟ್ ಕ್ರಿಯೇಟರ್ ಆಗಲು ಡಿಗ್ರಿ ಬೇಕೇ ?:
ಫುಡ್, ಫ್ಯಾಷನ್ ಮತ್ತು ಲೈಫ್ ಸ್ಟೈಲ್ ಬಗ್ಗೆ 36 ವರ್ಷದ ಕಂಟೆಂಟ್ ಕ್ರಿಯೇಟರ್ ಆಯಿಶಾ ಬೀಸ್ಲೆ ಮಾತನಾಡಿದ್ದಾರೆ. ಈ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕೋರ್ಸ್ ಮಾಡಿದರೆ ಒಳ್ಳೆದು ಎಂದು ಹೇಳಿದ್ದಾರೆ. ಇಂಥಹ ಕೋರ್ಸ್ ಇದ್ದರೆ ಖಂಡಿತವಾಗಿಯೂ ತಾನೂ ಅದನ್ನು ಮಾಡುವುದಾಗಿ ಹೇಳಿದ್ದಾರೆ.
ಆದರೆ, ಎಲ್ಲಾ ಕಂಟೆಂಟ್ ಕ್ರಿಯೇಟರ್ ಗಳು ಒಂದೇ ರೀತಿಯ ಅಭಿಪ್ರಾಯ ಹೊಂದಿಲ್ಲ. ನೈಟ್ ನೆಟ್ಟರ್ ಎಂಬ ಕಂಟೆಂಟ್ ಕ್ರಿಯೇಟರ್ ಕಂಪನಿಗಳು ಕೆಲಸಕ್ಕೆ ಸೇರಿಸಿಕೊಳ್ಳುವಾಗ ಡಿಗ್ರಿಗೆ ಪ್ರಾಮುಖ್ಯತೆ ನೀಡುವುದು ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಕೌಶಲ್ಯ ಮತ್ತು ಅನುಭವವೂ ಪ್ರಮುಖ ಪಾತ್ರ ವಹಿಸುತ್ತದೆ :
ಕಂಟೆಂಟ್ ಕ್ರಿಯೇಟಿಂಗಿನಲ್ಲಿ ಡಿಗ್ರಿ ಪಡೆದರೆ ವಿದ್ಯಾರ್ಥಿಗಳು ತಾಂತ್ರಿಕ ಜ್ಞಾನ ಪಡೆಯುವುದು ಸಾಧ್ಯವಾಗುತ್ತದೆ. ಪ್ರಾಕ್ಟಿಸಿಗೆ, ಕಾಂಟ್ಯಾಕ್ಟ್ ಬೆಳೆಸಲು ಇದು ಅವಕಾಶ ನೀಡುತ್ತದೆ. ಆದರೆ ಡಿಗ್ರಿ ಪಡೆದ ತಕ್ಷಣ ಸಕ್ಸಸ್ ( uccess) ಸಿಕ್ಕೇ ಬಿಟ್ಟಿತು ಎಂದರೂ ಸುಳ್ಳು. ಹೊಸ ಆಲೋಚನೆ, ನಿರಂತರ ಕಠಿಣ ಪರಿಶ್ರಮ, ಪ್ರೇಕ್ಷಕರ ಆಯ್ಕೆಯ ತಿಳುವಳಿಕೆ ಮತ್ತು ಒಳ್ಳೆಯ ಕಂಟೆಂಟಿನ ಪೋರ್ಟ್ಫೋಲಿಯೊ ಸಹ ಈ ಕ್ಷೇತ್ರದಲ್ಲಿ ಮುಖ್ಯವಾಗಿದೆ.


Click it and Unblock the Notifications
