ಭಾರತದ ಸುತ್ತಲೂ ಬಲೆ ಎಣೆಯುತ್ತಿದೆಯಾ ಡ್ರ್ಯಾಗನ್ ಚೀನಾ?
ಶ್ರೀಲಂಕಾ: ಅತ್ತ ಭಾರತದ ಜೊತೆ ಸ್ನೇಹ ಗಟ್ಟಿಗೊಳಿಸಲು ಚೀನಾಗೆ ರಷ್ಯಾ ಕಿವಿಮಾತು ಹೇಳುತ್ತಿದ್ದರೆ, ಮತ್ತೊಂದು ಕಡೆ ಚೀನಾ ಭಾರತದ ವಿರುದ್ಧ ಸಮರ ಸಿದ್ಧತೆ ನಡೆಸಿದಂತೆ ಕಾಣುತ್ತಿದೆ. ಶ್ರೀಲಂಕಾ ನಾಯಕರನ್ನು ಬುಟ್ಟಿಗೆ ಹಾಕಿಕೊಂಡು, ಭಾರತದ ಸುತ್ತಲೂ ಚೀನಾ ಬಲೆ ಎಣೆಯುತ್ತಿದೆಯಾ? ಎಂಬ ಅನುಮಾನ ಶುರುವಾಗಿದೆ. ಈ ಮೂಲಕ ಹಂಬಂಟೋಟ ಬಂದರು ಹಿಡಿತಕ್ಕೆ ಪಡೆದ ನಂತರ ಮತ್ತೊಂದು ಕುತಂತ್ರ ಶುರುವಾದಂತೆ ಕಾಣುತ್ತಿದೆ.
ಶ್ರೀಲಂಕಾ ಸಾಲದ ಸುಳಿಗೆ ಸಿಲುಕಿ ಚೀನಾ ಕೈಗೆ ಸಿಲುಕಿರುವುದು ಗೊತ್ತಿರುವ ಸಂಗತಿ. ಪರಿಸ್ಥಿತಿ ಹೀಗಿರುವಾಗ ಚೀನಾ ಮಾತು ಕೇಳದೆ ಶ್ರೀಲಂಕಾಗೆ ಬೇರೆ ದಾರಿ ಇಲ್ಲ. ತನ್ನ ಪ್ರಮುಖ ಬಂದರು ಪ್ರದೇಶ ಹಂಬಂಟೋಟ ಪೋರ್ಟ್ ಅನ್ನು ಚೀನಾಗೆ ಈಗಾಗಲೇ ಬಾಡಿಗೆ ಕೊಟ್ಟಿದೆ ಶ್ರೀಲಂಕಾ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶ್ರೀಲಂಕಾದಲ್ಲಿ ರಾಡಾರ್ ಕೇಂದ್ರ ಸ್ಥಾಪಿಸಲು ಚೀನಾ ಮುಂದಾಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಅಕಸ್ಮಾತ್ ಇದು ಸಾಧ್ಯವಾದರೆ ಭಾರತದ ಭವಿಷ್ಯಕ್ಕೆ ಗಂಡಾಂತರ ಎದುರಾಗುವುದು ಪಕ್ಕಾ.

ಭಾರತದ ಮೇಲೆ ಕಣ್ಣು: ಚೀನಾ ರಾಡಾರ್ ಕೇಂದ್ರವನ್ನ ಶ್ರೀಲಂಕಾ ನೆಲದಲ್ಲಿ ಸ್ಥಾಪಿಸಿದರೆ, ಭಾರತದ ದಕ್ಷಿಣ ಭಾಗದ ಮೇಲೆ ಹದ್ದಿನ ಕಣ್ಣಿಡಲಿದೆ. ಅದರಲ್ಲೂ ತಮಿಳುನಾಡಿನ ಕೂಡಂಕುಳಂ ಹಾಗೂ ಕಲ್ಪಾಕಂ ಅಣುಸ್ಥಾವರಗಳ ಮೇಲೂ ಚೀನಾ ದೃಷ್ಟಿ ನೆಡಲು ಇದರಿಂದ ಸಾಧ್ಯವಾಗಲಿದೆ. ಪ್ರಮುಖವಾಗಿ ಭಾರತ ಸೇನೆ ಹಿಂದೂ ಮಹಾಸಾಗರದ ಮೇಲೆ ಹೊಂದಿರುವ ಹಿಡಿತ ತಪ್ಪಿಸುವುದೇ ಚೀನಾ ಉದ್ದೇಶವಾಗಿದೆ ಎಂದು ಆರೋಪಿಸಲಾಗುತ್ತಿದೆ. ಹಂಬಂಟೋಟ ಬಂದರನ್ನು ಹಿಡಿತಕ್ಕೆ ತೆಗೆದುಕೊಂಡಿರುವ ಜೊತೆಗೆ ರಾಡಾರ್ ಕೇಂದ್ರವನ್ನೂ ಭಾರತದ ಪಕ್ಕದಲ್ಲೇ ಚೀನಾ ಸ್ಥಾಪಿಸಿದರೆ ಕಷ್ಟಕಷ್ಟ.
ಹೆಜ್ಜೆ ಹೆಜ್ಜೆಗೂ ಮುಳ್ಳು: ಶ್ರೀಲಂಕಾದಲ್ಲಿ ಚೀನಾ ರಾಡಾರ್ ಕೇಂದ್ರ ಸ್ಥಾಪಿಸಲು ಯಶಸ್ವಿಯಾದರೆ, ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ಮೇಲೆ ಕೂಡ ಕಣ್ಣು ಬೀಳಲಿದೆ. ಭಾರತದ ಜಲಾಂತರ್ಗಾಮಿ ನೌಕೆಗಳು ಹಾಗೂ ಯುದ್ಧ ನೌಕೆಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಕಡೆ ಚಲಿಸಿದರೂ ಚೀನಾಗೆ ಗೊತ್ತಾಗಲಿದೆ. ಈ ಮೂಲಕ ಭಾರತದ ಹಿಡಿತದಲ್ಲಿರುವ ಪ್ರದೇಶಗಳು ಕೂಡ ಚೀನಾ ಕಣ್ಣಿಗೆ ಬೀಳಲಿವೆ. ಸುಲಭವಾಗಿ ದಕ್ಷಿಣ ಭಾರತದ ಸುತ್ತಮುತ್ತ ನಡೆಯುತ್ತಿರುವ ಘಟನೆಗಳನ್ನು ಗುರುತಿಸಲಿದೆ ಚೀನಾ.

ಅಮೆರಿಕ ಸೇನೆಗೂ ಎಫೆಕ್ಟ್: ಶ್ರೀಲಂಕಾದಲ್ಲಿ ರಾಡಾರ್ ಸ್ಥಾಪಿಸುವುದರಿಂತ ಭಾರತದ ಮೇಲೆ ಮಾತ್ರವಲ್ಲ, ಅಮೆರಿಕದ ಸೇನೆ ಮೇಲೂ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ ಎಂಬುದು ಚೀನಾ ಲೆಕ್ಕಾಚಾರ. ಹಿಂದೂ ಮಹಾಸಾಗರದ ವಿಚಾರದಲ್ಲಿ ಚೀನಾಗೆ ಬಿಸಿ ಮುಟ್ಟಿಸುವ ಅಮೆರಿಕಗೆ ಈ ಮೂಲಕ ಪಾಠ ಕಲಿಸುವುದು ಚೀನಾ ಲೆಕ್ಕಾಚಾರ. ಹೀಗಾಗಿ ಹೇಗಾದರೂ ಮಾಡಿ ಶ್ರೀಲಂಕಾ ಸರ್ಕಾರದ ಮನವೊಲಿಸಿ, ದ್ವೀಪರಾಷ್ಟ್ರದ ನೆಲದಲ್ಲಿ ರಾಡಾರ್ ಸ್ಥಾಪಿಸಲು ಸರ್ಕಸ್ ಮಾಡುತ್ತಿದೆ ಚೀನಾ.
ಬಂದರು ಬಾಡಿಗೆಗೆ: ಅಂದಹಾಗೆ 2017ರಲ್ಲಿ ಹಂಬಂಟೋಟ ಬಂದರನ್ನು 99 ವರ್ಷಕ್ಕೆ ಬಾಡಿಗೆಗೆ ಪಡೆದ ಚೀನಾ, ಸುಮಾರು 1.12 ಬಿಲಿಯನ್ ಡಾಲರ್ ಪಾವತಿ ಮಾಡಿತ್ತು. ಆರ್ಥಿಕವಾಗಿ ದಿವಾಳಿಯಾದ ಶ್ರೀಲಂಕಾಗೆ ಇದು ಅನಿವಾರ್ಯವೂ ಆಗಿತ್ತು. ಆದರೆ ಈಗ ಚೀನಾ ಮಾಡುತ್ತಿರುವ ಕೆಲಸ, ಲಂಕಾದ ರಾಜಕೀಯ ತಜ್ಞರಿಗೂ ಇಷ್ಟವಾಗುತ್ತಿಲ್ಲ. 'ಭಾರತ ಮೊದಲು' ಎಂಬ ತನ್ನ ನಿಲುವಿಗೆ ಶ್ರೀಲಂಕಾ ಬದ್ಧವಾಗಿರಲಿ ಎಂಬ ಒತ್ತಾಯ ರಾಜಕೀಯ ತಜ್ಞರಿಂದಲೂ ಕೇಳಿಬಂದಿದೆ.
ಚೀನಾ ಅದೆಷ್ಟೇ ಚಾಣಾಕ್ಷತನದಿಂದ ಭಾರತದ ವಿರುದ್ಧ ಬಲೆ ಎಣೆಯುತ್ತಿದ್ದರೂ, ಭಾರತ ಇದಕ್ಕೆಲ್ಲಾ ಪ್ರತಿತಂತ್ರ ರೂಪಿಸುತ್ತಿದೆ. ಬೀಜಿಂಗ್ ನಡೆಸುತ್ತಿರುವ ಕುತಂತ್ರವನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈಗಾಗಲೇ ಲಂಕಾಗೆ ಸಾಕಷ್ಟು ಬಾರಿ ನೆರವು ನೀಡಿರುವ ಭಾರತ, ಶ್ರೀಲಂಕಾ ಸಂಪೂರ್ಣವಾಗಿ ಚೀನಾ ಜೊತೆ ಸೇರದಂತೆ ಕ್ರಮ ವಹಿಸಿದೆ. ಮತ್ತೊಂದು ಕಡೆ ಅಮೆರಿಕ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications