ಐಸಿಯುನಿಂದ ಹೊರಬಂದ ಕೊವಿಡ್ ಸೋಂಕಿತ ಬ್ರಿಟನ್ ಪ್ರಧಾನಿ
ಲಂಡನ್, ಏಪ್ರಿಲ್ 10: ಕೊರೊನಾ ಸೋಂಕಿನಿಂದ ಬಳಲುತ್ತಿರುವ ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಐಸಿಯು ವಾರ್ಡ್‌ನಿಂದ ಹೊರಬಂದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಕಳೆದ ಎರಡು ವಾರದ ಹಿಂದೆ ಕೊವಿಡ್ ಸೋಂಕಿಗೆ ತುತ್ತಾಗಿದ್ದ ಬ್ರಿಟನ್ ಪ್ರಧಾನಿ ಆರಂಭದಲ್ಲಿ ಐಸೋಲೇಶನ್ ವಾರ್ಡ್‌ನಲ್ಲಿದ್ದರು.
Recommended Video
ನಂತರ ಅವರ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಇದೀಗ, ಬೋರಿಸ್ ಜಾನ್ಸನ್ ಅವರ ಆರೋಗ್ಯದಲ್ಲಿ ಸುಧಾರಿಕೆ ಕಂಡುಬಂದಿದ್ದು, ಐಸಿಯುನಿಂದ ಅವರನ್ನು ಮತ್ತೆ ವಾರ್ಡ್‌ಗೆ ಸ್ಥಳಾಂತರಿಸಿದ್ದಾರೆ.
'ಗುರುವಾರ ಸಂಜೆ ಪ್ರಧಾನಿ ಅವರನ್ನು ಐಸಿಯುವಿಂದ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ. ಅವರ ಆರೋಗ್ಯ ಈಗ ಸುಧಾರಿಸಿದೆ. ಸದ್ಯಕ್ಕೆ ಅವರ ಮೇಲೆ ಹೆಚ್ಚು ನಿಗಾ ವಹಿಸಲಾಗಿದೆ. ಅದನ್ನು ಬಿಟ್ಟು ಅವರು ಬಹಳ ಆರಾಮಾಗಿದ್ದಾರೆ' ಎಂದು ಪ್ರಧಾನಿ ಕಚೇರಿಯ ವಕ್ತಾರ ಮಾಹಿತಿ ನೀಡಿದ್ದಾರೆ.

55 ವರ್ಷದ ಬೋರಿಸ್ ಜಾನ್ಸನ್ ಅವರು ಐಸಿಯುಗೆ ಹೋಗಿದ್ದಾರೆ ಎಂದು ತಿಳಿಯುತ್ತಿದ್ದಂತೆ ವಿಶ್ವದ ಇತರೆ ರಾಷ್ಟ್ರ ನಾಯಕರು ತೀವ್ರ ಆತಂಕಗೊಂಡಿದ್ದರು. ಏಕಂದ್ರೆ, ಕೊರೊನಾ ಸೋಂಕಿಗೆ ತುತ್ತಾಗಿ, ಐಸೋಲೇಶನ್‌ಗೆ ಹೋಗಿದ್ದ ವಿಶ್ವದ ಮೊದಲ ನಾಯಕರಾಗಿದ್ದರು.
ಮಾರ್ಚ್ 27 ರಂದು ಬೊರೀಸ್ ಜಾನ್ಸನ್‌ಗೆ ಕೊವಿಡ್ ಸೋಂಕು ತಗುಲಿರುವುದು ದೃಢವಾಗಿತ್ತು. ಕಳೆದ ಸೋಮವಾರನ್ನು ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಮೂರು ದಿನಗಳ ಚಿಕಿತ್ಸೆ ಬಳಿಕ ಮತ್ತೆ ಗುರುವಾರ ಸಂಜೆ ಅವರನ್ನು ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ.
ಇನ್ನು ಯುಕೆದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದುವರೆಗೂ 65,077 ಜನರಲ್ಲಿ ಕೊವಿಡ್ ಸೋಂಕು ಪತ್ತೆಯಾಗಿತ್ತು. 7,978 ಜನರು ಮೃತಪಟ್ಟಿದ್ದರು.












Click it and Unblock the Notifications