ಬಾಂಗ್ಲಾದೇಶದಲ್ಲಿ ಹಿಂಸಾಚಾರ: 2024ರ ವಿಶ್ವಕಪ್ ಆತಿಥ್ಯಕ್ಕೆ ಕುತ್ತು?
ಭಾರತದ ನೆರೆಯ ರಾಷ್ಟ್ರವಾದ ಬಾಂಗ್ಲಾದೇಶದಲ್ಲಿ ಹಲವು ದಿನಗಳಿಂದ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿವೆ. ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯಿಂದಾಗಿ ಗಲಭೆಗಳು ಆರಂಭವಾಗಿವೆ. ಈ ಎಲ್ಲ ಪರಿಸ್ಥಿತಿಗಳನ್ನು ಅವಲೋಕಿಸಿದಾಗ ಬಾಂಗ್ಲಾದಲ್ಲಿ ನಡೆಯಲಿರುವ 2024ರ ವಿಶ್ವಕಪ್ ಗತಿ ಏನು ಎಂಬ ಚಿಂತೆ ಕಾಡದೇ ಇರದು.
2024 ರ ಮಹಿಳಾ ಟಿ 20 ವಿಶ್ವಕಪ್ ಬಾಂಗ್ಲಾದೇಶದಲ್ಲಿ ಆಯೋಜಿಸಲಾಗುತ್ತಿದೆ. ಬಾಂಗ್ಲಾದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶೀಘ್ರದಲ್ಲೇ ವಿಶ್ವಕಪ್ ಆಯೋಜನೆಯ ಬಗ್ಗೆ ದೊಡ್ಡ ನಿರ್ಧಾರವನ್ನು ಕೈ ಗೊಳ್ಳಲಿದೆ. ಈ ವರ್ಷ ಅಕ್ಟೋಬರ್ 3 ರಿಂದ ಅಕ್ಟೋಬರ್ 20 ರವರೆಗೆ ಬಾಂಗ್ಲಾದೇಶದಲ್ಲಿ ಮಹಿಳಾ ಟಿ 20 ವಿಶ್ವಕಪ್ ನಡೆಯಲಿದೆ. ಕ್ರಿಕ್‌ಬಜ್ ಪ್ರಕಾರ, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಭೆಗಳ ಮೇಲೆ ಐಸಿಸಿ ಸೂಕ್ಷ್ಮವಾಗಿ ಗಮನಿಸುತ್ತಿದೆ.

ಕ್ರಿಕ್‌ಬಜ್ ಪ್ರಕಾರ, ಐಸಿಸಿ ಮೂಲವೊಂದು, "ಬಾಂಗ್ಲಾದೇಶದ ಗಲಭೆಗಳ ಮೇಲೆ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ, ಆದರೆ ಪಂದ್ಯಾವಳಿ ನಡೆಯಲು ಇನ್ನೂ ಸಾಕಷ್ಟು ಸಮಯವಿದೆ. ಕಳೆದ 24 ಗಂಟೆಗಳಲ್ಲಿ ಅಲ್ಲಿನ ಪರಿಸ್ಥಿತಿ ಸುಧಾರಿಸಿದೆ ಎಂದು ತಿಳಿದು ಬಂದಿದೆ ಎಂದು ವಿವರಿಸಿದ್ದಾರೆ.
ಇತ್ತೀಚೆಗೆ ಕೊಲಂಬೊದಲ್ಲಿ ಐಸಿಸಿ ಸಭೆಯನ್ನು ಕರೆಯಲಾಗಿತ್ತು. ಅದರಲ್ಲಿ ಮಹಿಳಾ ಟಿ20 ವಿಶ್ವಕಪ್ ಬಗ್ಗೆ ಪ್ರಸ್ತಾಪಿಸಲಾಗಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಪರಿಸ್ಥಿತಿಯನ್ನು ಅರಿತುಕೊಂಡಿದೆ. ಅಲ್ಲದೆ ಅಗತ್ಯ ತೀರ್ಮಾನ ಹಾಗೂ ಮುನ್ನೆಚ್ಚರಿಕೆ ವಹಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ವಿಶ್ವಕಪ್ ಯಾವಾಗ ?
ಮಹಿಳೆಯರ ಟಿ20 ವಿಶ್ವಕಪ್ ಬಾಂಗ್ಲಾದೇಶದಲ್ಲಿ ಅಕ್ಟೋಬರ್ 3 ರಿಂದ ಅಕ್ಟೋಬರ್ 20 ರವರೆಗೆ ನಡೆಯಲಿದೆ. ಆತಿಥೇಯ ಬಾಂಗ್ಲಾದೇಶದ ಹೊರತಾಗಿ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಒಟ್ಟು 10 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದು, ಇದನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ ತಂಡ ಸ್ಥಾನ ಪಡೆದಿದೆ. ಆಯಾ ಗುಂಪಿನಲ್ಲಿ ಅಗ್ರ-2 ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ ಮತ್ತು ಪಂದ್ಯಾವಳಿಯ ಫೈನಲ್ ಅಕ್ಟೋಬರ್ 20 ರಂದು ನಡೆಯಲಿದೆ. 2026 ರ ವಿಶ್ವಕಪ್‌ನಲ್ಲಿ 12 ತಂಡಗಳ ನಿಬಂಧನೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.

ಬಾಂಗ್ಲಾದೇಶದ ಗಲಭೆಗೆ ಕಾರಣವೇನು?
1971 ರ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದ ಹೋರಾಟಗಾರರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ 30 ಪ್ರತಿಶತ ಮೀಸಲಾತಿಯನ್ನು ಒದಗಿಸಲಾಗಿದೆ. ಈ ಮೀಸಲಾತಿಯ ವಿರೋಧದಿಂದಾಗಿ ಬಾಂಗ್ಲಾದೇಶ ಗಲಭೆಯಿಂದ ತತ್ತರಿಸಿದೆ. ಹಿಂಸಾಚಾರದಿಂದಾಗಿ ಇದುವರೆಗೆ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ದೇಶದಲ್ಲಿ ಸದ್ಯ ಇಂಟರ್ನೆಟ್ ಸೇವೆಗಳನ್ನು ನಿಲ್ಲಿಸಲಾಗಿದೆ ಮತ್ತು ಪ್ರಸ್ತುತ ದೇಶಾದ್ಯಂತ ಪ್ರಮುಖ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ.












Click it and Unblock the Notifications