ಕ್ಲಬ್‌ನಲ್ಲಿ ಕಾಲ್ತುಳಿತಕ್ಕೆ ಸಿಲುಕಿ 13 ಕುಡುಕರ ಸಾವು
ಲಿಮಾ. ಆ. 24: ಕೊರೊನಾ ವೈರಸ್ ಭೀತಿ ನಡುವೆಯೂ ಕ್ಲಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ಕುಡುಕರ ಪೈಕಿ 13 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಪೆರು ರಾಜಧಾನಿಯಲ್ಲಿ ನಡೆದಿದೆ. ದಕ್ಷಿಣ ಅಮೆರಿಕ ದೇಶಗಳಲ್ಲಿ ಕೊರೊನಾ ರುದ್ರನರ್ತನ ಮುಂದುವರಿದಿದೆ.
Recommended Video
ಅದರಲ್ಲೂ ಪೆರು ಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿದೆ. ಈಗಾಗಲೇ ಪೆರು ದೇಶದಲ್ಲಿ 5 ಲಕ್ಷ 90 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದೇ ಕಾರಣಕ್ಕೆ ಅಲ್ಲಿ ಲಾಕ್‌ಡೌನ್ ಹೇರಲಾಗಿದೆ. ಹೀಗಾಗಿ ಬಾರ್‌ಗಳನ್ನು ತೆರೆಯಲು ಅನುಮತಿ ನೀಡಿಲ್ಲ. ಆದರೆ ಎಣ್ಣೆಗಾಗಿ ಹಪಹಪಿಸುತ್ತಿದ್ದ ಕುಡುಕರ ಗ್ಯಾಂಗ್ ಒಂದೆಡೆ ಸೇರಲು ಪ್ಲಾನ್ ಮಾಡಿತ್ತು.
ಹೀಗೆ ಪೆರು ರಾಜಧಾನಿ ಲಿಮಾ ನಗರದ ಪಾಸ್ ಓಲಿವೋಸ್ ಪ್ರದೇಶದಲ್ಲಿ ಥಾಮಸ್ ರೆಸ್ಟೋಬಾರ್ ಕ್ಲಬ್ ಎಂಬ ತಾಣವೊಂದಿದೆ. ಇದು ಕುಡುಕರಿಗೆ ಹಾಟ್ ಫೇವರಿಟ್. ಇಲ್ಲಿ ನೂರಾರು ಕುಡುಕರು ಪ್ರೀ ಪ್ಲಾನ್ ಮಾಡಿ ಗುಟ್ಟಾಗಿ ಪಾರ್ಟಿ ಮಾಡುತ್ತಿದ್ದರು.

ಆದರೆ ಕ್ಲಬ್ ಇದ್ದ ಬಿಲ್ಡಿಂಗ್‌ನಿಂದ ಜೋರಾಗಿ ಮ್ಯೂಸಿಕ್ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಪೆರು ಪೊಲೀಸರ ಎಂಟ್ರಿ ಆಗಿದ್ದು, ಪೊಲೀಸರನ್ನು ನೋಡುತ್ತಲೇ ಕ್ಲಬ್‌ನಲ್ಲಿ ನೂಕುನುಗ್ಗಲು ಉಂಟಾಗಿದೆ. ಆಗ ಸಂಭವಿಸಿದ ಕಾಲ್ತುಳಿತದಲ್ಲಿ 13 ಮಂದಿ ಮೃತಪಟ್ಟು, 6 ಮಂದಿ ಗಾಯಗೊಂಡಿದ್ದಾರೆ.
ಕಿರಿದಾದ ಬಾಗಿಲು, ಸಣ್ಣಸಣ್ಣ ಮೆಟ್ಟಿಲು..!
ದುರಂತ ಸಂಭವಿಸಿದ ಕ್ಲಬ್‌ನ ಮುಖ್ಯದ್ವಾರ ತುಂಬಾ ಚಿಕ್ಕದಾಗಿತ್ತು. ಹಾಗೇ ಈ ಕ್ಲಬ್ ಇದ್ದಿದ್ದು 2ನೇ ಮಹಡಿಯಲ್ಲಿ. ದಿಢೀರ್ ನೂರಕ್ಕೂ ಹೆಚ್ಚು ಜನರು ಈ ಕಿರಿದಾದ ಬಾಗಿಲಿನಿಂದ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಹೀಗೆ ಓಡುವಾಗಲೇ ಹಲವರು ಪ್ರಾಣಬಿಟ್ಟಿದ್ದರೆ, ಬಾಗಿಲು ಹಾಗೂ ಮೆಟ್ಟಿಲಿನ ಮೂಲೆಗೆ ಸಿಲುಕಿ ಕೆಲವರು ಮೃತಪಟ್ಟಿದ್ದಾರೆ. ಪೊಲೀಸರು ಕೂಡ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.
ಪೊಲೀಸರ ಜೊತೆ ಫೈಟಿಂಗ್..!
ಕ್ಲಬ್‌ನಲ್ಲಿದ್ದ 13 ಮಂದಿ ಕಾಲ್ತುಳಿತಕ್ಕೆ ಬಲಿಯಾದರೆ, ಇನ್ನೂ ಕೆಲವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆಗ ಪೊಲೀಸರಿಂದ ತಪ್ಪಿಸಿಕೊಳ್ಳಲು, ಖಾಕಿ ಪಡೆ ಜೊತೆಯಲ್ಲೇ ಜಗಳಕ್ಕೆ ಇಳಿದಿದ್ದಾರೆ. ಪೊಲೀಸರು ಹಾಗೂ ಕುಡುಕರ ಮಧ್ಯೆ ದೊಡ್ಡ ಮಾರಾಮಾರಿ ನಡೆದಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೆರು ಸರ್ಕಾರ ಸೂಕ್ತ ತನಿಖೆಗೆ ಆದೇಶಿಸಿದೆ. ಅಲ್ಲದೆ ಸಿಕ್ಕಿಬಿದ್ದಿರುವ 20ಕ್ಕೂ ಹೆಚ್ಚು ಕುಡುಕರ ವಿಚಾರಣೆ ನಡೆಯುತ್ತಿದ್ದು, ತಪ್ಪಿಸಿಕೊಂಡ ಹಲವರಿಗೆ ಶೋಧ ಮುಂದುವರಿದಿದೆ. ಅದೇನೆ ಇರಲಿ ಹೀಗೆ ಕುಡುಕರು ಸೃಷ್ಟಿಸಿದ ಅವಾಂತರಕ್ಕೆ ಹತ್ತಾರು ಮಂದಿ ಬಲಿಯಾಗಿದ್ದು ಮಾತ್ರ ವಿಪರ್ಯಾಸ.












Click it and Unblock the Notifications