Asim Munir: ಅರ್ಧ ಜಗತ್ತನೇ ನಾಶ ಮಾಡುತ್ತೇವೆ- ಪಾಕ್ ಸೇನಾ ಮುಖ್ಯಸ್ಥನಿಂದ ಪರಮಾಣು ದಾಳಿಯ ಬೆದರಿಕೆ
Asim Munir: ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮತ್ತೊಮ್ಮೆ ಭಾರತ ವಿರೋಧಿ ಭಾಷಣ ಮಾಡಿದ್ದಾರೆ. ಈ ಬಾರಿ ಅಮೆರಿಕದ ನೆಲದಲ್ಲಿ ನಿಂತು ಮತ್ತೊಂದು ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ. ಕಾಶ್ಮೀರವು ಭಾರತದ ಆಂತರಿಕ ವಿಚಾರವಲ್ಲ, ಅದೊಂದು ಬಗೆಹರಿಯದ ಅಂತರರಾಷ್ಟ್ರೀಯ ಸಮಸ್ಯೆಯಾಗಿದೆ ಎಂಬ ಮಾತುಗಳನ್ನು ಆಡಿದ್ದಾರೆ. ಅಸಿಮ್ ಮುನೀರ್ ಭಾಷಣಕ್ಕೆ ಈಗ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಫ್ಲೋರಿಡಾದ ಟ್ಯಾಂಪಾದಲ್ಲಿ ಪಾಕಿಸ್ತಾನ ಮೂಲದ ವಲಸಿಗರನ್ನು ಉದ್ದೇಶಿಸಿ ಮಾತನಾಡಿದ ಮುನೀರ್, ಸಿಂಧೂ ನದಿ ಭಾರತೀಯರ ಕುಟುಂಬದ ಆಸ್ತಿಯಲ್ಲ. ನದಿಯ ಹರಿವನ್ನು ನಿಲ್ಲಿಸಲು ಭಾರತವು ಯೋಜನೆಗಳನ್ನು ರೂಪಿಸುತ್ತಿದೆ. ಆ ಯೋಜನೆಗಳನ್ನು ನಾಶಮಾಡಲು ನಮ್ಮಲ್ಲಿ ಅಪಾರ ಸಂಪನ್ಮೂಲಗಳಿವೆ' ಎಂದು ಬೆದರಿಕೆಯೊಡ್ಡಿದ್ದಾರೆ.

'ಭಾರತ ಅಣೆಕಟ್ಟು ನಿರ್ಮಿಸುವವರೆಗೆ ನಾವು ಕಾಯುತ್ತೇವೆ. ಒಂದು ವೇಳೆ, ಅದು ನಿರ್ಮಾಣವಾದಾಗ ನಾವು ಅದನ್ನು ನಾಶಪಡಿಸುತ್ತೇವೆ' ಎಂದು ಮುನೀರ್ ಹೇಳಿದ್ದಾರೆ. ಮುಂದುವರಿದು ಮಾತನಾಡಿದ ಅವರು, 'ಕಾಶ್ಮೀರವು ಪಾಕಿಸ್ತಾನದ ಕತ್ತಿನಲ್ಲಿರುವ ರಕ್ತನಾಳವಾಗಿದೆ. ಅದು ಭಾರತದ ಆಂತರಿಕ ವಿಚಾರವಲ್ಲ. ಅದೊಂದು ಬಗೆಹರಿಸಲಾರದ ಅಂತರರಾಷ್ಟ್ರೀಯ ಸಮಸ್ಯೆಯಾಗಿದೆ' ಎಂದು ಪ್ರತಿಪಾದಿಸಿದ್ದಾರೆ.
ಆಪರೇಷನ್ ಸಿಂಧೂರ್ ನೆಪದಲ್ಲಿ ಭಾರತವು ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಲು ಮುಂದಾಯಿತು. ಇದು ಪಾಕಿಸ್ತಾನದ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ. ಆದರೆ, ಎರಡೂ ದೇಶಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯತ್ನಿಸಿದರು. ಅವರು ಧನ್ಯವಾದಗಳು ಎಂದು ಹೇಳಿದ್ದಾರೆ.
ಪರಮಾಣು ಯುದ್ಧದ ಬೆದರಿಕೆ
ಅಮೆರಿಕದಲ್ಲಿ ಭಾಷಣ ಮಾಡಿರುವ ಅಸಿಮ್ ಮುನೀರ್ ಪರಮಾಣು ಯುದ್ಧದ ಕುರಿತು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. 'ಭಾರತದೊಂದಿಗಿನ ಭವಿಷ್ಯದ ಯುದ್ಧದಲ್ಲಿ ನನ್ನ ದೇಶವು ಅಸ್ತಿತ್ವದ ಬೆದರಿಕೆಯನ್ನು ಎದುರಿಸಿದರೆ, ಅರ್ಧ ಜಗತ್ತನ್ನು ನಾಶಪಡಿಸಿ ನಾವು ನಾಶವಾಗಲಿದ್ದೇವೆ' ಎಂದು ಬೆದರಿಕೆ ಹಾಕಿದ್ದಾರೆ. ಪಾಕಿಸ್ತಾನವು ಪರಮಾಣು ಹೊಂದಿದ ರಾಷ್ಟ್ರವಾಗಿದೆ. ನಾವು ನಾಶವಾಗಲಿದ್ದೇವೆ ಎಂದು ನಮಗೆ ಅನ್ನಿಸಿದರೆ, ನಮ್ಮೊಂದಿಗೆ ಅರ್ಧ ಜಗತ್ತನ್ನು ನಾಶಪಡಿಸುತ್ತೇವೆ ಎಂದು ಹೇಳಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ ನಡೆದ ಪಹಲ್‌ಗಾಮ್ ದಾಳಿಯ ನಂತರ ಭಾರತವು ಆಪರೇಷನ್ ಸಿಂದೂರವನ್ನು ಕೈಗೊಂಡಿತು. ಇದಾದ ಬಳಿಕ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಉಂಟಾಯಿತು. ಆ ನಂತರ, ಅಸಿಮ್ ಮುನೀರ್ ಭಾರತದ ವಿರುದ್ಧ ಹಲವು ಬಾರಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ.












Click it and Unblock the Notifications