ಭಾರತದ ಶತ್ರು ಪಾಕಿಸ್ತಾನದ ಪ್ರಥಮ ಮಹಿಳೆ ಯಾರು ಅಂತಾ ನೋಡಿದ್ರಾ?
ಸದಾ ಒಂದಲ್ಲ ಒಂದು ಕಾರಣಕ್ಕೆ ಭಾರತದ ಜೊತೆಗೆ ಕಿರಿಕ್ ತೆಗೆಯುವ ಪಾಕಿಸ್ತಾನ ಹೊಸ ಪ್ರಧಾನಿಯನ್ನು ನೋಡುತ್ತಿದೆ. ಹಾಗೇ ಹೊಸ ಅಧ್ಯಕ್ಷರೂ ಅಲ್ಲಿ ಆಯ್ಕೆಯಾಗಿದ್ದಾರೆ. ಈಗ ಹೊಸ ಪ್ರಥಮ ಮಹಿಳೆಯ ಎಂಟ್ರಿ ಕೂಡ ಆಗಿದೆ. ಅದು ಬೇರೆ ಯಾರೂ ಅಲ್ಲ ಈ ಹಿಂದೆ ಪಾಕಿಸ್ತಾನ ನೆಲವನ್ನ ಆಳಿ, ಅದೇ ಪಾಕಿಸ್ತಾನಿ ಉಗ್ರರ ಕೈಯಲ್ಲಿ ಸತ್ತು ಹೋಗಿದ್ದ ನಾಯಕಿ ಬೆನಜೀರ್ ಬುಟ್ಟೋ ಅವರ ಮಗಳು ಈಗ ಪಾಕಿಸ್ತಾನದ ಪ್ರಥಮ ಮಹಿಳೆ ಆಗಿದ್ದಾರೆ.
ಫೆಬ್ರವರಿ 8 ರಂದು ನಡೆದಿದ್ದ ಪಾಕಿಸ್ತಾನ ಚುನಾವಣೆ ಯುದ್ಧದ ರೀತಿ ಕಗ್ಗಂಟಾಗಿ ಇತ್ತು. ಕೇವಲ ಚುನಾವಣೆ ನಡೆಸಲು ಕೂಡ ತಾಕತ್ ಇಲ್ಲದ ಈ ದೇಶದಲ್ಲಿ ಇದೀಗ, ಹಂಗೋ ಹಿಂಗೋ ಒಂದು ಸಮ್ಮಿಶ್ರ ಸರ್ಕಾರ ಕೂಡ ರಚನೆ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಹೊಸ ರಾಷ್ಟ್ರಪತಿ ಅಂದ್ರೆ ಪಾಕಿಸ್ತಾನದ ರಾಷ್ಟ್ರಾಧ್ಯಕ್ಷನ ಆಯ್ಕೆ ಕೂಡ ಆಗಿದೆ. ಇದರ ಜೊತೆಗೆ ಪ್ರಥಮ ಮಹಿಳೆ ಪಟ್ಟಕ್ಕೆ ಬುಟ್ಟೋ ಅವರ ಮಗಳನ್ನು ಆಯ್ಕೆ ಮಾಡಲಾಗಿದೆ. ಹಾಗಾದರೆ ಬುಟ್ಟೋ ಪುತ್ರಿಗೆ ಈ ಸ್ಥಾನ ಒಲಿದಿದ್ದು ಹೇಗೆ? ಬನ್ನಿ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.

ಅಧ್ಯಕ್ಷನ ಮಗಳು ಪ್ರಥಮ ಮಹಿಳೆ!
ಐತಿಹಾಸಿಕ ಬೆಳವಣಿಗೆಯಲ್ಲಿ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಜರ್ದಾರಿ, ತಮ್ಮ 31 ವರ್ಷದ ಮಗಳು ಆಸೀಫಾ ಭುಟ್ಟೊ ಅವರನ್ನು ಪಾಕಿಸ್ತಾನದ ಪ್ರಥಮ ಮಹಿಳೆಯಾಗಿ ಆಯ್ಕೆ ಮಾಡಿದ್ದಾರೆ. ಈ ಮೂಲಕ ಹೊಸ ಬೆಳವಣಿಗೆಗೆ ಪಾಕಿಸ್ತಾನ ಈಗ ಸಾಕ್ಷಿಯಾಗಿದೆ. ಅಷ್ಟಕ್ಕೂ ಯಾವುದೇ ದೇಶದ ಅಧ್ಯಕ್ಷರ ಹೆಂಡತಿ ಅಂದ್ರೆ ಪತ್ನಿಗೆ ಪ್ರಥಮ ಮಹಿಳೆ ಸ್ಥಾನಮಾನ ನೀಡುವುದು ವಾಡಿಕೆ ಆಗಿದೆ. ಹೀಗಿದ್ದಾಗ ಆಸಿಫ್ ಅಲಿ ಜರ್ದಾರಿ ಅವರಿಗೆ ಪತ್ನಿ ಇಲ್ಲ. ಜರ್ದಾರಿ ಅವರ ಪತ್ನಿ, ಬೆನಜಿರ್ ಭುಟ್ಟೊ ಅವರನ್ನ 2007 ರಲ್ಲಿ ಉಗ್ರರು ಪಾಕಿಸ್ತಾನ ನೆಲದಲ್ಲೇ ಭೀಕರವಾಗಿ ಹತ್ಯೆ ಮಾಡಿದ್ದರು.
ಪ್ರಥಮ ಮಹಿಳೆ ಸ್ಥಾನ ಖಾಲಿ ಇತ್ತು
ಅಂದಹಾಗೆ ಹೀಗೆ ತಮ್ಮ ಪತ್ನಿಯನ್ನು ಕಳೆದುಕೊಂಡಿದ್ದ, ಆಸಿಫ್ ಅಲಿ ಜರ್ದಾರಿ ಅವರಿಗೆ ಮತ್ತೊಂದು ಮದುವೆ ಆಗಿಲ್ಲ. ಹೀಗಾಗಿ ಜರ್ದಾರಿ ಅವರು ವಿಧುರನಾದರು. ಇದೇ ಕಾರಣ ಜರ್ದಾರಿ ಅವರು ಪಾಕಿಸ್ತಾನ ರಾಷ್ಟ್ರಾಧ್ಯಕ್ಷರಾಗಿದ್ದ ಈ ಹಿಂದಿನ ಅವಧಿ, ಅಂದ್ರೆ 2008 ರಿಂದ 2013 ರವರೆಗೆ ಮೊದಲ ಅವಧಿಯಲ್ಲೂ, ಪಾಕಿಸ್ತಾನ ದೇಶದ ಪ್ರಥಮ ಮಹಿಳೆಯ ಸ್ಥಾನ ಖಾಲಿ ಇತ್ತು. ಆದರೆ ಈ ಬಾರಿ ಜರ್ದಾರಿ ಅವರು ತಮ್ಮ ಪುತ್ರಿಗೆ ಪ್ರಥಮ ಮಹಿಳೆಯ ಸ್ಥಾನಮಾನ ನೀಡಿದ್ದಾರೆ. ಈ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ.
ಪಾಕಿಸ್ತಾನದ ಇತಿಹಾಸದಲ್ಲೇ ಮೊದಲು
ಆಸೀಫಾ ಅವರನ್ನ ಪಾಕಿಸ್ತಾನದ ಪ್ರಥಮ ಮಹಿಳೆ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಇದೀಗ ಬಿಸಿ ಬಿಸಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಮತ್ತೊಂದು ಕಡೆ ಅಮೆರಿಕದಲ್ಲಿ ಇಂತಹದ್ದೆ ಒಂದು ಘಟನೆ ನಡೆದಿತ್ತು. ಅದು ಏನೆಂದರೆ, ವಿಧುರನಾಗಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಆಂಡ್ರ್ಯೂ ಜಾಕ್ಸನ್ ಪ್ರಥಮ ಮಹಿಳೆಯಾಗಿ ಕಾರ್ಯ ನಿರ್ವಹಿಸಲು ಸೊಸೆ ಎಮಿಲಿ ಡೊನೆಲ್ಸನ್ ಅವರನ್ನು ಕೇಳಿಕೊಂಡಿದ್ದರು. ಇದೀಗ ಜರ್ದಾರಿ ಅವರ ಈ ನಿರ್ಧಾರ ಪಾಕಿಸ್ತಾನದಲ್ಲಿ ಹೊಸ ಚರಿತ್ರೆ ಬರೆದಿದೆ.

ಒಟ್ನಲ್ಲಿ ಹೀಗೆ ಪಾಕಿಸ್ತಾನದಲ್ಲಿ ಒಂದು ಮಹತ್ವದ ಬೆಳವಣಿಗೆ ಇದೀಗ ನಡೆದಿದೆ. ಇತ್ತೀಚೆಗೆ ಆಯ್ಕೆ ಆಗಿದ್ದ ಆಸಿಫ್ ಜರ್ದಾರಿ ಅವರು ಮಹತ್ವದ ಹೆಜ್ಜೆ ಈಗ ಇಟ್ಟಿದ್ದಾರೆ. ಭವಿಷ್ಯದಲ್ಲಿ ಈ ನಿರ್ಧಾರ ಪಾಕಿಸ್ತಾನದಲ್ಲಿ ಯಾವೆಲ್ಲಾ ರೀತಿಯ ಬದಲಾವಣೆಗೆ ನಾಂದಿ ಹಾಡುತ್ತೆ? ಪಾಕ್‌ನ ರಾಜಕಾರಣಿಗಳು ಮಹಿಳೆಯರಿಗೆ ಮತ್ತಷ್ಟು ಸ್ವಾತಂತ್ರ್ಯ ನೀಡುತ್ತಾರಾ? ಅಂತಾ ಇದೀಗ ಕಾದು ನೋಡಬೇಕಿದೆ.












Click it and Unblock the Notifications