India & America: ಪ್ರಧಾನಿ ಮೋದಿ ಭೇಟಿ ಸಖತ್ & ಸಕ್ಸಸ್ ಎಂದ ಅಮೆರಿಕ!
ವಾಷಿಂಗ್ಟನ್: ಜಾಗತಿಕವಾಗಿ ಆಧುನಿಕ ಕಾಲಘಟ್ಟದಲ್ಲಿ ಭಾರತದ ಸ್ನೇಹ ಎಲ್ಲರಿಗೂ ಈಗ ಅನಿವಾರ್ಯ. ಅದ್ರಲ್ಲೂ ಅಮೆರಿಕ ಭಾರತದ ಜತೆ ಸಂಬಂಧ ವೃದ್ಧಿಗೆ ಸಾಕಷ್ಟು ಪ್ರಯತ್ನ ಪಡುತ್ತಿದೆ. ಈಗಾಗಲೇ ಉತ್ತಮವಾಗಿರುವ ಭಾರತ ಮತ್ತು ಅಮೆರಿಕ ಸ್ನೇಹವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಅಮೆರಿಕ ಯತ್ನಿಸುತ್ತಿದೆ. ಇನ್ನು ಈ ಸಂದರ್ಭದಲ್ಲೇ ಪ್ರಧಾನಿ ಮೋದಿ ಅವರ ಭೇಟಿ ಬಗ್ಗೆಯೂ ಹೆಮ್ಮೆಯ ಮಾತನ್ನಾಡಿದೆ ದೊಡ್ಡಣ್ಣ ಅಮೆರಿಕ.
ಅಂದಹಾಗೆ ಪಿಎಂ ಮೋದಿ ಅವರ ಅಮೆರಿಕ ಭೇಟಿ ಆರ್ಥಿಕತೆ ದೃಷ್ಟಿಯಿಂದ ಯಶಸ್ವಿಯಾಗಿದೆ ಎಂದು, ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಆರ್ಥಿಕ ಸಲಹೆಗಾರ ಜಾರ್ಡ್ ಬರ್‌ಸ್ಟೀನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅವರು ಭಾರತ ಹಾಗೂ ಅಮೆರಿಕ ಸ್ನೇಹವನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ. ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಜೂನ್ 21 ಮತ್ತು 23ರ ಮಧ್ಯೆ ನರೇಂದ್ರ ಮೋದಿ ಅಮೆರಿಕಗೆ ತೆರಳಿದ್ದರು. ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಪೂರಕವಾಗಿ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿತ್ತು. ಈಗ ಪ್ರಧಾನಿ ಮೋದಿ ಭೇಟಿಯ ಒಂದು ತಿಂಗಳ ನಂತರವೂ ಅಮೆರಿಕ ಅದನ್ನು ಶ್ಲಾಘಿಸುತ್ತಿದೆ.

ಭಾರತದ ಜೊತೆ ಸಂಬಂಧ ವೃದ್ಧಿ
ಅಮೆರಿಕ ಅಧ್ಯಕ್ಷ ಜೋ ಬೈಡನ್‌ರ ಆರ್ಥಿಕ ಸಲಹೆಗಾರ ಜಾರ್ಡ್ ಬರ್‌ಸ್ಟೀನ್ ತಮ್ಮ ಮಾತನ್ನ ಮುಂದುವರಿಸಿ, ಭಾರತವನ್ನು ಮಿತ್ರ ರಾಷ್ಟ್ರವಾಗಿ & ಜೊತೆಗೆ ಅಭಿವೃದ್ಧಿ ಹೊಂದುತ್ತಿರುವ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಅಮೆರಿಕ ಪರಿಗಣಿಸುತ್ತದೆ. ಹಲವು ಭೇಟಿಗಳ ಫಲವಾಗಿ ಎರಡೂ ರಾಷ್ಟ್ರಗಳ ಸಂಬಂಧ ಗಟ್ಟಿಯಾಗಿದೆ. ಆರ್ಥಿಕತೆ ದೃಷ್ಟಿಯಿಂದ ನಾವು ಜಾಗತಿಕ ವ್ಯಾಪಾರಕ್ಕೆ ಮುಕ್ತವಾಗಿದ್ದೇವೆ. ಕೆಲ ರಾಷ್ಟ್ರಗಳೊಂದಿಗೆ ವ್ಯಾಪಾರಕ್ಕೆ ಸದಾ ಸಿದ್ಧ ಎಂದಿದ್ದಾರೆ. ಅಲ್ಲದೆ ಭಾರತದೊಂದಿಗೆ ಕೆಲ ಚರ್ಚೆ ಸಾಗುತ್ತಿವೆ. ನಾವು ದೇಶೀಯವಾಗಿ ಹೂಡಿಕೆ ಮಾಡುತ್ತಿದ್ದೇವೆ. ಇತರ ದೇಶಗಳಿಂದ ವಿದೇಶಿ ನೇರ ಹೂಡಿಕೆಯನ್ನು ಕೂಡ ಸ್ವಾಗತಿಸುತ್ತಿದ್ದೇವೆ ಎಂದಿದ್ದಾರೆ.
ಇತಿಹಾಸ ನಿರ್ಮಿಸಿದ ಪ್ರಧಾನಿ ಮೋದಿ!
ಪ್ರಧಾನಿ ಮೋದಿ ಕಳೆದ ತಿಂಗಳು ಅಮೆರಿಕಗೆ ಭೇಟಿ ನೀಡಿದ್ದು ಇತಿಹಾಸ ಸೃಷ್ಟಿಸಿತ್ತು. 2ನೇ ಬಾರಿಗೆ ಅಮೆರಿಕನ್ ಕಾಂಗ್ರೆಸ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದಾರೆ. ಈ ಹಿಂದೆ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕೂಡ ಪ್ರಧಾನಿ ಮೋದಿ ಅಮೆರಿಕಗೆ ಭೇಟಿ ನೀಡಿ, ಅಮೆರಿಕನ್ ಕಾಂಗ್ರೆಸ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದರು. ಈ ಮೂಲಕ 2 ಬಾರಿ ಅಮೆರಿಕನ್ ಕಾಂಗ್ರೆಸ್ ಅಧಿವೇಶನ ಉದ್ದೇಶಿಸಿ ಮಾತನಾಡಿದ ಭಾರತದ ಮೊದಲನೇ ಪ್ರಧಾನಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ ಪ್ರಧಾನಿ ಮೋದಿ ಅವರು. ಹೀಗೆ ಭಾರತದ ಪ್ರಧಾನಿ ಅಮೆರಿಕದಲ್ಲಿ ಭಾರತದ ಪವರ್ ತೋರಿಸಿದ್ದಾರೆ ಎಂಬುದು ಮೋದಿ ಅಭಿಮಾನಿಗಳ ಮಾತು.

ಅಂದು ಸಾಮಾನ್ಯ ವ್ಯಕ್ತಿ ಇಂದು ಪ್ರಧಾನಿ!
1993ರ ಘಟನೆಯನ್ನು ಪ್ರಧಾನಿ ಮೋದಿ ಅಮೆರಿಕ ಭೇಟಿ ಸಂದರ್ಭ ಮೆಲುಕು ಹಾಕಿದ್ದರು. 3 ದಶಕದ ಹಿಂದೆ ನಾನು ಸಾಮಾನ್ಯ ವ್ಯಕ್ತಿಯಾಗಿ ಅಮೇರಿಕಾ ಪ್ರವಾಸಕ್ಕೆ ಬಂದಿದ್ದೆ. ಆಗ ವೈಟ್ ಹೌಸ್‌ನ ಹೊರಗಡೆಯಿಂದ ನೋಡಿದ್ದೆ. ಈಗ ಪ್ರಧಾನಿಯಾಗಿ ಇಲ್ಲಿಗೆ ಬಂದಿದ್ದೇನೆ ಎಂದಿದ್ದರು. ಹಾಗೇ ಭಾರತೀಯ ಸಮುದಾಯದ ಜನರು ತಮ್ಮ ಜ್ಞಾನ, ಶಕ್ತಿ, ಸಾಮರ್ಥ್ಯ, ನಿಷ್ಠೆಯಿಂದ ಅಮೇರಿಕಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮೆರಿಕ ಮತ್ತು ಭಾರತದ ಸ್ನೇಹ ಇನ್ನಷ್ಟು ಗಟ್ಟಿ ಆಗಲು ಭಾರತೀಯರ ಕೊಡುಗೆ ಸಾಕಷ್ಟಿದೆ ಎಂದು ಬಣ್ಣಿಸಿದ್ದರು. ಹೀಗೆ ಪ್ರಧಾನಿ ಮೋದಿ ಐತಿಹಾಸಿಕ ಅಮೆರಿಕ ಭೇಟಿಗೆ ಒಂದು ತಿಂಗಳು ತುಂಬಿದ್ದು, ಅಮೆರಿಕ ಕೂಡ ಆ ಭೇಟಿಯನ್ನ ಮೆಲುಕು ಹಾಕುತ್ತಿದೆ.
ಒಟ್ನಲ್ಲಿ ಕಳೆದ ತಿಂಗಳು ಪ್ರಧಾನಿ ಮೋದಿ ಅಮೆರಿಕಗೆ ಭೇಟಿ ನೀಡಿದ್ದಾಗ, ದೀರ್ಘಕಾಲದ ಸ್ನೇಹ ಸಂಬಂಧ ಮತ್ತು ಹೂಡಿಕೆ, ಸೇನಾ ಒಪ್ಪಂದ, ಇಂಧನ, ಹವಾಮಾನ ಬದಲಾವಣೆ, ದ್ವಿಪಕ್ಷೀಯ ಸಹಕಾರ ಸಂಬಂಧ ಪ್ರಧಾನಿ ಮೋದಿ ಮತ್ತು ಜೋ ಬೈಡನ್ ನಡುವೆ ಮಹತ್ವದ ಚರ್ಚೆ ನಡೆದಿತ್ತು. ಅಲ್ಲದೆ ಇದೇ ಸಂದರ್ಭದಲ್ಲಿ ಹಲವು ಪ್ರಮುಖ ಒಪ್ಪಂದಕ್ಕೆ ಎರಡೂ ದೇಶಗಳು ಅಂತಿಮ ಮುದ್ರೆ ಒತ್ತಿದ್ದವು. ಇದೀಗ ಪ್ರಧಾನಿ ಮೋದಿ ಭೇಟಿಯನ್ನು ಅಮೆರಿಕ ಪದೇ ಪದೆ ನೆನಪಿಸಿಕೊಳ್ಳುತ್ತಾ ಹೆಮ್ಮೆ ವ್ಯಕ್ತಪಡಿಸುತ್ತಿದೆ.












Click it and Unblock the Notifications