ಅಳಿಯ ಅಲ್ಲ ಮಗಳ ಗಂಡ: ಇದು ಪಾಶ್ಚಿಮಾತ್ಯ ರಾಷ್ಟ್ರಗಳ ಲೆಕ್ಕಾಚಾರ!
ಮಗು ಚಿವುಟೋದು.. ತೊಟ್ಟಿಲು ತೂಗೋದು.. ಈ ಮಾತು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಸರಿಯಾಗಿ ಹೊಂದಿಕೆ ಆಗುತ್ತೆ ಅನಿಸುತ್ತೆ. ಯಾಕೆ ಅಂದ್ರೆ ಭಾರತ & ರಷ್ಯಾ ನಡುವೆ ತೈಲ ವ್ಯವಹಾರ ನಡೆಯುತ್ತಿರುವ ಬಗ್ಗೆ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳು ಪದೇ ಪದೆ ಕಿರಿಕ್ ಮಾಡುತ್ತಿವೆ. ಈಗ ನೋಡಿದರೆ ರಷ್ಯಾಗೆ ಅಮೆರಿಕ ಹಾಗೂ ಯುರೋಪ್ ದೇಶಗಳು ಸಾವಿರಾರು ಕೋಟಿ ರೂಪಾಯಿ ಪಾವತಿ ಮಾಡಿದ ವಿಚಾರ ಬಟಾಬಯಲಾಗಿದೆ.
ರಷ್ಯಾ ಯಾವಾಗ ಉಕ್ರೇನ್ ವಿರುದ್ಧ ಯುದ್ಧ ಶುರು ಮಾಡಿತ್ತೋ ಅಂದಿನಿಂದಲೇ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳು ಒಟ್ಟಾಗಿ ನಿರ್ಬಂಧ ಹೇರಿದ್ದವು. ಅಲ್ಲದೆ ತಮ್ಮ ಮಿತ್ರರು ಕೂಡ ಹೀಗೆ ರಷ್ಯಾ ಜತೆ ಯಾವುದೇ ವ್ಯವಹಾರ ನಡೆಸಬಾರದು ಎಂದಿದ್ದವು. ಭಾರತಕ್ಕೂ ಪಾಶ್ಚಿಮಾತ್ಯ ರಾಷ್ಟ್ರಗಳು ಎಚ್ಚರಿಕೆ ನೀಡಿದ್ದವು. ಆದರೆ ಭಾರತ ಮಾತ್ರ ಇದಕ್ಕೆ ಸರಿಯಾದ ರೀತಿ ಉತ್ತರ ನೀಡಿ, ನಿಮ್ಮ ಕೆಲಸ ನೀವು ನೋಡಿಕೊಳ್ಳಿ ಎಂದಿತ್ತು. ಬೇರೆಯವರಿಗೆ ಬುದ್ಧಿ ಹೇಳುವ ಪಾಶ್ಚಿಮಾತ್ಯ ರಾಷ್ಟ್ರಗಳೇ ರಷ್ಯಾ ಜೊತೆ ಪರೋಕ್ಷವಾಗಿ ವ್ಯವಹಾರ ನಡೆಸುತ್ತಿವೆ. ಅದು ಎಷ್ಟು ಪ್ರಮಾಣದಲ್ಲಿ ಗೊತ್ತಾ? ಅದರ ಮೊತ್ತ ಕೇಳಿದರೆ ತಲೆ ಗಿರ್ ಅನ್ನುತ್ತೆ!

ಹೇಳೋದು ವೇದಾಂತ, ತಿನ್ನೋದು...
ಹೌದು, ಮಾತೆತ್ತಿದರೆ ಸಾಕು ಜಗತ್ತಿಗೆ ಬುದ್ಧಿ ಹೇಳುವ ದೊಡ್ಡಣ್ಣ ಅಮೆರಿಕ ಆಗಲಿ, ತಮ್ಮ ಒಳಗೆ ಸಾವಿರ ಸಮಸ್ಯೆ ಇಟ್ಟುಕೊಂಡಿರುವ ಯುರೋಪ್ ರಾಷ್ಟ್ರಗಳೇ ಆಗಲಿ ಹೇಳಿದ್ದನ್ನು ಮಾಡಲ್ಲ. ತಮ್ಮ ಅನುಕೂಲವನ್ನ ತಾವು ನೋಡಿಕೊಳ್ಳುತ್ತವೆ ಅನ್ನೊದು ಮತ್ತೆ ಪ್ರೂವ್ ಆಗಿದೆ. ಅಷ್ಟಕ್ಕೂ ಉಕ್ರೇನ್ ವಿರುದ್ಧದ ಸೇನಾ ಕಾರ್ಯಾಚರಣೆಗೆ ಪ್ರತಿಯಾಗಿ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳು ರಷ್ಯಾ ವಿರುದ್ಧ ಹಲವು ನಿರ್ಬಂಧ ಹೇರಿವೆ. ಆದರೂ ಪರಮಾಣು ಇಂಧನ ಮತ್ತು ಉತ್ಪನ್ನವನ್ನ ಭಾರಿ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿವೆ. ಇದಿಷ್ಟೇ ಆಗಿದ್ದರೆ ಪರವಾಗಿಲ್ಲ, ಆದ್ರೆ ಹೀಗೆ ವ್ಯವಹಾರ ನಡೆಸಿ 14,052 ಕೋಟಿ ರೂಪಾಯಿ ಅಂದ್ರೆ 1.7 ಬಿಲಿಯನ್ ಡಾಲರ್ ಪಾವತಿ ಮಾಡಿವೆಯಂತೆ.
ಅಮೆರಿಕ ಹೇಳಿದ್ದೇನು? ಮಾಡ್ತಾ ಇರೋದು ಏನು?
ಜಗತ್ತಿನ ದೊಡ್ಡಣ್ಣ ಎಂಬ ಬಿರುದು ಇದ್ದರೂ ಅಮೆರಿಕ ಮಾತ್ರ ತನ್ನ ಸ್ವಾರ್ಥಕ್ಕೆ ಮೊದಲ ಆದ್ಯತೆ ನೀಡುತ್ತದೆ ಎಂಬ ಆರೋಪ ಇದೆ. ಈಗ ಆರೋಪಕ್ಕೆ ನೀರು ಎರೆಯುವ ರೀತಿಯೇ ಅಮೆರಿಕ ನಡೆದುಕೊಳ್ಳುತ್ತಿದೆ. ಪರಮಾಣು ವಿದ್ಯುತ್ ಉತ್ಪಾದನಾ ರಿಯಾಕ್ಟರ್‌ಗೆ ಪರಮಾಣು ಇಂಧನ ಅನಿವಾರ್ಯ. ಹೀಗಾಗಿಯೇ ರಷ್ಯಾದಿಂದ ಬರುವ ಪರಮಾಣು ಉತ್ಪನ್ನಗಳಿಗೆ ನಿಷೇಧ ಹೇರಲು ಪಾಶ್ಚಾತ್ಯ ರಾಷ್ಟ್ರಗಳು ಹಿಂದೇಟು ಹಾಕಿವೆ. ಅಮೆರಿಕ & ಯುರೋಪ್‌ನ ರಾಷ್ಟ್ರಗಳು 2022ರಲ್ಲಿ ರಷ್ಯಾದಿಂದ 1.7 ಬಿಲಿಯನ್ ಡಾಲರ್ ಅಂದರೆ ₹14,052 ಕೋಟಿಯ ಪರಮಾಣು ಉತ್ಪನ್ನ ಖರೀದಿಸಿವೆ ಎಂದು ವ್ಯಾಪಾರ ವಹಿವಾಟಿನ ದತ್ತಾಂಶ ವಿಶ್ಲೇಷಕರು ಹೇಳಿದ್ದಾರೆ.

ಹೀಗೆ ವ್ಯವಹಾರ ನಡೆಸಿದರೆ ರಷ್ಯಾ ಸೇನೆಗೆ ಪರಮಾಣು ಶಸ್ತ್ರಾಸ್ತ್ರದ ಅಭಿವೃದ್ಧಿಗಾಗಿ ಆರ್ಥಿಕ ನೆರವು ಸಿಗುತ್ತಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಉಕ್ರೇನ್ ವಿರುದ್ಧ ರಷ್ಯಾ 2022ರಲ್ಲಿ ಯುದ್ಧ ಆರಂಭಿಸಿದ್ದಕ್ಕೆ ಪ್ರತಿಯಾಗಿ ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾದ ತೈಲ, ಅನಿಲ, ವೋಡ್ಕ ಸೇರಿ ಹಲವು ವಸ್ತುಗಳನ್ನ ಬ್ಯಾನ್ ಮಾಡಿವೆ. ಆದರೆ ಪರಮಾಣು ಇಂಧನ, ಉತ್ಪನ್ನಗಳನ್ನ ಬ್ಯಾನ್ ಮಾಡೋಕೆ ಆಗುತ್ತಿಲ್ಲ. ಅಮೆರಿಕದ ಪರಮಾಣು ಉದ್ಯಮಕ್ಕೆ ರಷ್ಯಾದ ಶೇಕಡಾ 12 ರಷ್ಟು ಯುರೇನಿಯಂ ಪೂರೈಕೆ ಮಾಡಲಾಗಿದೆ, ಯುರೋಪ್‌ನ ರಾಷ್ಟ್ರಗಳು ಶೇಕಡಾ 17ರಷ್ಟು ಯುರೇನಿಯಂ ಅನ್ನು ರಷ್ಯಾದಿಂದಲೇ ಪಡೆದಿವೆಯಂತೆ.

ಒಟ್ನಲ್ಲಿ ರಷ್ಯಾ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳ ದ್ವಂದ್ವ ನೀತಿ ಬಗ್ಗೆ ಆಕ್ರೋಶ ಕೂಡ ವ್ಯಕ್ತವಾಗಿದೆ. ಜಗತ್ತಿನಲ್ಲಿ 60 ಪರಮಾಣು ರಿಯಾಕ್ಟರ್‌ಗಳು ನಿರ್ಮಾಣ ಹಂತದಲ್ಲಿದ್ದರೆ 300 ರಿಯಾಕ್ಟರ್ಸ್ ಯೋಜನಾ ಹಂತದಲ್ಲಿವೆ ಎನ್ನಲಾಗಿದೆ. ಈ ಎಲ್ಲಾ ರಿಯಾಕ್ಟರ್‌ಗೆ ಪರಮಾಣು ಇಂಧನ ಅನಿವಾರ್ಯ. ಹೀಗಾಗಿ ರಷ್ಯಾ ಕೂಡ ಅನಿವಾರ್ಯವಾಗಿದ್ದು, ರಷ್ಯಾ ವಿರುದ್ಧ ಈ ವಿಚಾರದಲ್ಲಿ ನಿರ್ಬಂಧ ಹೇರಲು ಆಗುತ್ತಿಲ್ಲ. ಹೀಗಾಗಿ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳ ನಡೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.












Click it and Unblock the Notifications